ಮೀಸಲಾತಿಗಾಗಿ ಭಾರೀ ಹಿಂಸಾಚಾರ! ಹೊತ್ತಿ ಉರಿದ ಮಣಿಪುರ! ಈಶಾನ್ಯ ರಾಜ್ಯದಲ್ಲಿ ಏನಾಯ್ತು?

masthmagaa.com:

ಈಶಾನ್ಯ ರಾಜ್ಯ ಮಣಿಪುರ ಮತ್ತೊಮ್ಮೆ ಹೊತ್ತಿ ಉರಿಯೋಕೆ ಶುರುವಾಗಿದೆ. ಮೇಟಿ ಹಾಗೂ ಕುಕಿ ಸಮುದಾಯಗಳ ನಡುವೆ ಮೀಸಲಾತಿಗಾಗಿ ಜಗಳ ನಡೀತಿದ್ದು ಅದು ಕಳೆದ ಕೆಲ ವಾರಗಳ ಹಿಂದೆ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ಅದನ್ನ ಭಾಗಶಃ ಕಂಟ್ರೋಲ್‌ ಕೂಡ ಮಾಡಲಾಗಿತ್ತು. ಆದ್ರೆ ಈಗ ಮತ್ತೊಮ್ಮೆ ಹಿಂಸಾಚಾರ ಭುಗಿಲೆದ್ದಿದೆ. ಎಗ್ಗಿಲ್ಲದೇ ಮುಂದುವರಿಯುತ್ತಿರುವ ಹಿಂಸಾಚಾರಗಳನ್ನು ನಿಗ್ರಹಿಸಲು ಭದ್ರತಾ ಪಡೆಗಳು ಫೀಲ್ಡ್‌ಗೆ ಇಳಿದಿವೆ. ಈ ಕಾರ್ಯಚರಣೆಯಲ್ಲಿ ಕನಿಷ್ಠ 40 ಮಂದಿ ದಂಗೆಕೋರರು ಹತ್ಯೆಯಾಗಿದ್ದಾರೆ. ಈ ಕುರಿತು ಅಲ್ಲಿನ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮಾಹಿತಿ ನೀಡಿದ್ದಾರೆ. ಭದ್ರತಾಪಡೆಗಳು ನಡೆಸ್ತಿರೋ ಎನ್‌ಕೌಂಟರ್‌ ಕಾರ್ಯಾಚರಣೆಯಲ್ಲಿ ಕನಿಷ್ಠ 40 ಉಗ್ರರು ಹತರಾಗಿದ್ದಾರೆ. ಈ ಉಗ್ರರು ಭಯಾನಕ ಆಯುಧಗಳನ್ನ ಜನಸಾಮಾನ್ಯರ ಮೇಲೆ ಉಪಯೋಗಿಸುತ್ತಿದ್ರು. ಹಳ್ಳಿಗಳಿಗೆ ಹೋಗಿ ಮನೆಗಳನ್ನು ಸುಟ್ಟುಹಾಕುತ್ತಿದ್ರು. ಈಗ ಈ ಉಗ್ರರ ಮೇಲೆ ಕಠಿಣ ಕ್ರಮ ಜರುಗಿಸುತ್ತಿದ್ದೇವೆ, ಇದು ಮಣಿಪುರದ ಪತನಕ್ಕೆ ಪ್ರಯತ್ನಿಸುತ್ತಿರುವ ಸಶಸ್ತ್ರಧಾರಿ ಉಗ್ರರು ಹಾಗೂ ಸರ್ಕಾರದ ನಡುವೆ ನಡೆಯುತ್ತಿರೋ ಯುದ್ಧ ಅಂತ ಮಣಿಪುರ ಸಿಎಂ ಹೇಳಿದ್ದಾರೆ.ಇನ್ನು ಬುಡಕಟ್ಟು ಜಾತಿ ಅಲ್ಲದ ಮೇಟಿ ಅಥವಾ ಮೀಟಿಸ್ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ವಿರೋಧಿಸಿ ಅಲ್ಲಿನ ಬುಡಕಟ್ಟು ಗುಂಪುಗಳು ಅನೇಕ ದಿನಗಳಿಂದ ಪ್ರತಿಭಟನೆ ನಡೆಸ್ತಿದ್ವು. ಮೇಟಿಗಳಿಗೆ ಮೀಸಲಾತಿ ಕೊಟ್ರೆ ಅರಣ್ಯ ಪ್ರದೇಶದಲ್ಲಿ ಅವರಿಗೆ ವಾಸ ಸಿಗುತ್ತೆ. ಆಗ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತೆ ಅಂತ ಬುಡಕಟ್ಟು ಸಮುದಾಯವರು ಆರೋಪ ಮಾಡ್ತಿದ್ದಾರೆ. ಆ ಹೋರಾಟ ಕಳೆದ ಕೆಲ ದಿನಗಳ ಹಿಂದೆ ಹಿಂಸಾಚಾರಕ್ಕೆ ತಿರುಗಿತ್ತು. ಅವತ್ತಿನಿಂದ ಇವತ್ತಿನ ತನಕ ಮಣಿಪುರ ಬೂದಿ ಮುಚ್ಚಿದ ಕೆಂಡದಂತಿದ್ದು ಆಗಾಗ ಹಿಂಸಾತ್ಮಕ ಘಟನೆಗಳು ನಡೀತಾ ಇವೆ. ಎರಡು ಸಮುದಾಯದವರು ಒಬ್ರಿಗೊಬ್ರು ಗುಂಡು ಹಾರಿಸೋದು, ಒಬ್ರ ಮನೆ ಮೇಲೆ ಇನ್ನೊಬ್ರು ಬೆಂಕಿ ಹಚ್ಚೋದು ನಡೀತಾ ಇದೆ. ಅಧಿಕಾರಿಗಳ ಮನೆಗಳು, ಪ್ರಮುಖರ ಮನೆಗಳನ್ನ ಟಾರ್ಗೆಟ್‌ ಮಾಡಲಾಗ್ತಿದ್ದು ಇಲ್ಲಿತನಕ ಹತ್ತಾರು ಜನ ಪ್ರಾಣ ಬಿಟ್ಟಿದ್ದಾರೆ. ಭದ್ರತಾ ಪಡೆಗಳು ತಮ್ಮ ಕಾರ್ಯಚರಣೆಯನ್ನು ಮುಂದುವರೆಸಿದ್ದು ಈಗ 40 ಮಂದಿ ಉಗ್ರರನ್ನ ಹತ್ಯೆ ಮಾಡಿದೀವಿ ಅಂತ ಮಣಿಪುರ ಸಿಎಂ ಹೇಳಿದ್ದಾರೆ. ಈ ಕಡೆ ಘರ್ಷಣೆ ಪೀಡಿತ ಮಣಿಪುರಕ್ಕೆ ನಾಳೆ ಅಮಿತ್‌ ಶಾ ಕೂಡ ಭೇಟಿ ಕೊಡಲಿದ್ದಾರೆ. ಮೂರು ದಿನಗಳ ಕಾಲ ಅಲ್ಲೇ ಉಳಿಯಲಿದ್ದು ಈ ಭೇಟಿಗೂ ಮುಂಚೆಯೇ ಮಣಿಪುರದಲ್ಲಿ ಭಾರಿ ಬೆಳವಣಿಗೆಗಳು ನಡೀತಾ ಇವೆ. ಇನ್ನು ಕಳೆದ ಕೆಲ ದಿನಗಳಿಂದ ನಡೆಯುತ್ತಿರೋ ಹಿಂಸಾಚಾರದಲ್ಲಿ ಕನಿಷ್ಠ 75 ಮಂದಿ ಪ್ರಾಣಬಿಟ್ಟಿದ್ದಾರೆ. ಆದ್ರೆ ಅವರಲ್ಲಿ ತುಂಬಾ ಜನರ ಗುರುತು ಸಿಕ್ತಾ ಇಲ್ಲ. ಇನ್ನು ಕೆಲವು ಕುಟುಂಬಗಳು ಗುರುತು ಸಿಕ್ಕಿದ್ರು ಆ ಶವವನ್ನ ತಗೊಂಡೇ ಹೋಗಿಲ್ಲ. ಅವು ಅನಾಥವಾಗಿ ಬಿದ್ದಿವೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಸಂಘರ್ಷ ಯಾಕ್‌ ನಡೀತಾ ಇದೆ. ಇದಕ್ಕೆ ನಿಜವಾದ ಕಾರಣ ಏನು ಎಲ್ಲವನ್ನೂ ಈ ಹಿಂದೆಯೇ ನಿಮಗೆ ಹೇಳಿದ್ದೀವಿ. ಹೆಚ್ಚಿನ ಮಾಹಿತಿ ಬೇಕು ಅನ್ನೋರು ಆ ವಿಡಿಯೋ ಚೆಕ್‌ ಮಾಡಬೋದು.

-masthmagaa.com

Contact Us for Advertisement

Leave a Reply