ವಿಪಕ್ಷ ಸಂಸದರಿಗೆ ಉಪಸಭಾಪತಿಯಿಂದ ಟೀ ಸೇವೆ.. ಧರಣಿ ಅಂತ್ಯ..!

masthmagaa.com:

ರಾಜ್ಯಸಭೆಯಲ್ಲಿ 2 ಕೃಷಿ ಮಸೂದೆಗಳು ಅಂಗೀಕರಿಸುವಾಗ ವಿಪಕ್ಷ ಸಂಸದರು ಉಪಸಭಾಪತಿ ಹರಿವಂಶ್ ಸಿಂಗ್ ಜೊತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆ 8 ಮಂದಿ ಸಂಸದರನ್ನು ರಾಜ್ಯಸಭೆಯಿಂದ ಅಮಾನತು ಮಾಡಿರೋ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು ವಿರೋಧಿಸಿ ಅಮಾನತುಗೊಂಡ ಸಂಸದರು ಸಂಸತ್ ಆವರಣದ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ನಡೆಸಿದ್ರು. ಈ ಹಿನ್ನೆಲೆ ಮುಂಜಾನೆ ಧರಣಿನಿರತ ಸಂಸದರಿಗೆ ಉಪಸಭಾಪತಿ ಹರಿವಂಶ್ ಸಿಂಗ್ ಟೀ ತಂದು ಅವರ ಮನವೊಲಿಸಲು ಯತ್ನಿಸಿದ್ದಾರೆ. ಆದ್ರೆ ಪ್ರತಿಭಟನಾನಿರತರು ಚಹಾ ಸ್ವೀಕರಿಸಲು ನಿರಾಕರಿಸಿದ್ದಾರೆ.

ಅಮಾನತುಗೊಂಡ ಸಂಸದರ ನಡೆಗೆ ಬೇಸರ ವ್ಯಕ್ತಪಡಿಸಿರೋ ಪ್ರಧಾನಿ ಮೋದಿ, ‘ತಮ್ಮ ಮೇಲೆ ದಾಳಿ ಮಾಡಿ, ಅವಮಾನಿಸಿದ ಸಂಸದರ ಬಳಿ ಹೋಗಿ ಟೀ ನೀಡುತ್ತಿರುವ ಹರಿವಂಶ್​ ಅವರದ್ದು ವಿನಮ್ರ ಮನಸ್ಸು. ಇದು ಅವರ ದೊಡ್ಡತನವನ್ನು ತೋರಿಸುತ್ತದೆ. ದೇಶದ ಜನರ ಜೊತೆಗೆ ನಾನು ಕೂಡ ಹರಿವಂಶ್​ ಅವರಿಗೆ ಅಭಿನಂದಿಸುತ್ತೇನೆ’ ಅಂತ ಟ್ವಿಟ್ ಮಾಡಿದ್ದಾರೆ.

ಇನ್ನು ಹರಿವಂಶ್ ಸಿಂಗ್ ಅವರು ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ಗೆ ಪತ್ರ ಬರೆದು ತಮ್ಮ ಜೊತೆ ವಿಪಕ್ಷ ಸಂಸದರು ಅನುಚಿತವಾಗಿ ವರ್ತಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಜೊತೆಗೆ ಒಂದು ದಿನ ಉಪವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಇದೆಲ್ಲದರ ನಡುವೆ ಸಂಸದರ ಅಮಾನತು ಮತ್ತು ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ವಿಪಕ್ಷಗಳ ಸಂಸದರು ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದಿದ್ದಾರೆ. ಕಲಾಪ ಬಹಿಷ್ಕರಿಸಿರುವ ವಿಪಕ್ಷಗಳು ತಮ್ಮ ನಿರ್ಧಾರವನ್ನು ಪುನರ್​ವಿಮರ್ಶಿಸಿ, ಆತ್ಮಾವಲೋಕನ ಮಾಡಿಕೊಂಡು ಕಲಾಪಕ್ಕೆ ಹಿಂದಿರುಗುವಂತೆ ಸಭಾಧ್ಯಕ್ಷರಾದ ವೆಂಕಯ್ಯ ನಾಯ್ಡು ಆಗ್ರಹಿಸಿದ್ದಾರೆ.

‘ಸಂಸದರ ಅಮಾನತಿನಿಂದ ನನಗೂ ಸಂತೋಷವಿಲ್ಲ. ಅನುಚಿತವಾಗಿ ವರ್ತಿಸಿದ ಹಿನ್ನೆಲೆ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸದಸ್ಯರ ವಿರುದ್ಧ ನಮಗೆ ವೈಯಕ್ತಿಕ ದ್ವೇಷ ಇಲ್ಲ’ ಅಂತ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಹೆಚ್​.ಡಿ. ದೇವೇಗೌಡರು, ‘ಸರ್ಕಾರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ವಿಪಕ್ಷ ಮತ್ತು ಸರ್ಕಾರ ಸಮಸ್ಯೆ ಬಗೆಹರಿಸಿಕೊಂಡು ರಾಜ್ಯಸಭೆ ಕಲಾಪ ಮುನ್ನೆಡಸಲು ಸಹಕರಿಸಬೇಕು. ಪರಸ್ಪರ ಸಹಕಾರ ಮೂಲಕ ಪ್ರಜಾಪ್ರಭುತ್ವ ಕೆಲಸ ಮಾಡಬೇಕು’ ಅಂತ ಹೇಳಿದ್ದಾರೆ.

ಕಾಂಗ್ರೆಸ್, ಆಮ್​ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಸದಸ್ಯರು ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸಿದ್ರೂ ಮೂರನೇ ಕೃಷಿ ಮಸೂದೆ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ಮತ್ತೊಂದುಕಡೆ ಸಂಸತ್ ಆವರಣದಲ್ಲಿ ಧರಣಿ ಕೂತಿದ್ದ ವಿಪಕ್ಷ ಸಂಸದರು ಧರಣಿಯನ್ನು ಅಂತ್ಯಗೊಳಿಸಿದ್ದಾರೆ.

-masthmagaa.com

Contact Us for Advertisement

Leave a Reply