masthmagaa.com:

ಕೊರೋನಾ ಸೋಂಕು ತಗುಲಿದವರಿಗೆ ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆ, ಮಾಂಸಖಂಡದ ನೋವು ಸೇರಿದಂತೆ ನಾನಾ ಸಮಸ್ಯೆಗಳು ಬರುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೀಗ ಕೊರೋನಾ ವೈರಸ್ ಮಕ್ಕಳ ಮೆದುಳನ್ನು ಕೂಡ ಡ್ಯಾಮೇಜ್ ಮಾಡುತ್ತೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.

ಕೊರೋನಾ ವೈರಾಣು 11 ವರ್ಷದ ಬಾಲಕಿಯ ಮೆದುಳಿನ ನರಕ್ಕೆ ಹಾನಿ ಮಾಡಿದೆ. ಇದರಿಂದ ಆಕೆಗೆ ದೃಷ್ಟಿ ದೋಷ ಉಂಟಾಗಿದೆ ಅಂತ ದೆಹಲಿ ಏಮ್ಸ್ ಆಸ್ಪತ್ರೆ ತಿಳಿಸಿದೆ. ಕೊರೋನಾದಿಂದ ವಯಸ್ಕರಲ್ಲಿ ಇಂತಹ ಸಮಸ್ಯೆ ಕಾಣಿಸಿದ ಹಲವು ಉದಾಹರಣೆಗಳಿವೆ. ಆದ್ರೆ ಮಕ್ಕಳಲ್ಲಿ ಇಂತಹ ಸಮಸ್ಯೆ ಕಾಣಿಸಿರೋದು ಇದೇ ಮೊದಲು ಅಂತ ಏಮ್ಸ್ ವೈದ್ಯರು ತಿಳಿಸಿದ್ದಾರೆ.

ನರಗಳ ಸುತ್ತ ಮೈಲಿನ್ ಅನ್ನೋ ರಕ್ಷಣಾ ಪದರವಿರುತ್ತದೆ. ಈ ಪದರವೇ ಮೆದುಳಿನಿಂದ ಬರುವ ಸಂದೇಶಗಳನ್ನು ದೇಹದ ಇತರ ಭಾಗಗಳಿಗೆ ತ್ವರಿತವಾಗಿ ಮತ್ತು ಸರಾಗವಾಗಿ ರವಾನಿಸಲು ಸಹಾಯ ಮಾಡುತ್ತದೆ. ಇದೀಗ ಬಾಲಕಿಯ ಮೆದುಳಿನ ಮೈಲಿನ್​ಗೆ ಕೊರೋನಾ ವೈರಾಣು ಡ್ಯಾಮೇಜ್ ಮಾಡಿದ್ದು, ಆಕೆ ದೃಷ್ಟಿ ದೋಷಕ್ಕೆ ಕಾರಣವಾಗಿದೆ. ಇಂತಹ ಸಮಸ್ಯೆಗಳನ್ನು ವೈದ್ಯಕೀಯ ಭಾಷೆಯಲ್ಲಿ Acute Demyelinating Syndrome (ADS) ಅಂತ ಕರೆಯುತ್ತಾರೆ.

ಅಂದ್ಹಾಗೆ ದೃಷ್ಟಿ ಕಳೆದುಕೊಂಡು ಆಸ್ಪತ್ರೆಗೆ ಬಂದಂತಹ ಬಾಲಕಿಯನ್ನು ಎಮ್‌ಆರ್‌ಐ (magnetic resonance imaging) ಸ್ಕ್ಯಾನ್​ಗೆ ಒಳಪಡಿಸಿದಾಗ ಎಡಿಎಸ್‌ ಕಾಣಿಸಿಕೊಂಡಿದೆ. ಬಳಿಕ ಇದು ಕೊರೋನಾದಿಂದನೇ ಬಂದಿದೆ ಅನ್ನೋದು ವೈದ್ಯರಿಗೆ ಗೊತ್ತಾಗಿದೆ. ಸಾಮಾನ್ಯವಾಗಿ ಶ್ವಾಸಕೋಶ ಮತ್ತು ಮೆದುಳಿಗೆ ಕೊರೋನಾ ವೈರಾಣು ಹಾನಿ ಮಾಡುತ್ತದೆ. ಈ ಬಾಲಕಿಗೂ ಕೊರೋನಾದಿಂದಲೇ ಸಮಸ್ಯೆ ಕಾಣಿಸಿಕೊಂಡಿರೋದ್ರಿಂದ ಈ ಕೇಸ್​ ರಿಪೋರ್ಟ್​ ಅನ್ನು ಪ್ರಕಟಿಸಲು ಏಮ್ಸ್ ಪ್ಲಾನ್ ಮಾಡಿದೆ.

ಸದ್ಯ 50%ನಷ್ಟು ದೃಷ್ಟಿ ವಾಪಾಸಾದ ಹಿನ್ನೆಲೆ ಬಾಲಕಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದ್ರೆ ಜ್ವರ ಮತ್ತು ಮೆದುಳಿನ ಊತದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 13 ವರ್ಷದ ಮತ್ತೊಂದು ಬಾಲಕಿಯ ಸ್ಥಿತಿಗೂ ಕೊರೋನಾವೇ ಕಾರಣವಿರಬಹುದಾ ಅನ್ನೋ ಬಗ್ಗೆ ವೈದ್ಯರು ಅಧ್ಯಯನ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply