ಜಮ್ಮು ಕಾಶ್ಮೀರದಲ್ಲಿ ಗೃಹಸಚಿವ ಅಮಿತ್ ಶಾ!

masthmagaa.com:
ದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಮೂರು ದಿನಗಳ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದಾರೆ. 2019ರ ಆಗಸ್ಟ್​ನಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಅಮಿತ್ ಶಾರ ಮೊದಲ ಪ್ರವಾಸ ಇದಾಗಿದೆ. ಶ್ರೀನಗರಕ್ಕೆ ಬಂದಿಳಿದ ಅವರನ್ನು ಜಮ್ಮು ಕಾಶ್ಮೀರ ರಾಜ್ಯಪಾಲ ಮನೋಜ್ ಸಿನ್ಹಾ ಸ್ವಾಗತಿಸಿದ್ರು. ನಂತರ ಇದೇ ತಿಂಗಳು ಉಗ್ರರ ಗುಂಡಿಗೆ ಬಲಿಯಾದ ಪೊಲೀಸ್ ಇನ್​​ಸ್ಪೆಕ್ಟರ್ ಪರ್ವೇಜ್ ಅಹ್ಮದ್ ಅವರ ಕುಟುಂಬಸ್ಥರನ್ನು ಭೇಟಿಯಾದ್ರು. ಮತ್ತು ಪರ್ವೇಜ್ ಅಹ್ಮದ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ರು. ಇದ್ರ ನಡುವೆಯೇ ಶ್ರೀನಗರದಲ್ಲಿ ಅಮಿತ್ ಶಾ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ರು. 13 ದಿನಗಳಿಂದ ನಡೀತಿರೋ ಉಗ್ರ ನಿಗ್ರಹ ಕಾರ್ಯಾಚರಣೆ, ನಾಗರಿಕರನ್ನು ಗುರಿಯಾಗಿಸಿ ಉಗ್ರರು ನಡೆಸ್ತಿರೋ ದಾಳಿಯಲ್ಲಿ ಹೆಚ್ಚಳ, ಗಡಿ ನುಸುಳುವಿಕೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಲಾಯ್ತು. ನಂತರ ಜಮ್ಮು ಕಾಶ್ಮೀರದ ಯುವ ಸಂಘಟನೆಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, 2019ರ ಆಗಸ್ಟ್​ 5 ಸ್ವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ., ಆ ದಿನದಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಅಂತ್ಯ ಹಾಡಲು ದೊಡ್ಡ ಹೆಜ್ಜೆ ಇಡಲಾಯ್ತು. ಈಗ ಜಮ್ಮು ಕಾಶ್ಮೀರದ ಅಭಿವೃದ್ಧಿಯ ಜವಾಬ್ದಾರಿ ನಿಮ್ಮಂಥಹ ಯುವಕರ ಕೈಯಲ್ಲಿದೆ ಅಂತ ಹೇಳಿದ್ದಾರೆ. ಅಂದಹಾಗೆ ಈ 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370ಯನ್ನು ತೆಗೆದುಹಾಕಲಾಗಿತ್ತು. ಮುಂದುವರಿದು ಮಾತನಾಡಿದ ಅಮಿತ್ ಶಾ, 2019ರ ಬಳಿಕ ಕಾಶ್ಮೀರ ಕಣಿವೆಯಲ್ಲಿ ಕರ್ಫ್ಯೂ ಏನಕ್ಕೆ ಹಾಕಿದ್ದೀರಿ, ಇಂಟರ್​ನೆಟ್​ ಯಾಕೆ ಬಂದ್ ಮಾಡಿದ್ದೀರಿ ಅಂತೆಲ್ಲಾ ಕೆಲವರು ಪ್ರಶ್ನೆ ಮಾಡಿದ್ರು. ಹೀಗೆ ಮಾಡದಿದ್ರೆ ಅದೆಷ್ಟು ಕಾಶ್ಮೀರಿ ಯುವಕರ ಪ್ರಾಣ ಹೋಗ್ತಿತ್ತೋ ಗೊತ್ತಿಲ್ಲ. ಜಮ್ಮು ಕಾಶ್ಮೀರದಲ್ಲಿ 70 ವರ್ಷಗಳ ಕಾಲ ಬರೀ ಮೂರು ಫ್ಯಾಮಿಲಿಯವರು ಆಡಳಿತ ನಡೆಸಿದ್ರು. ಆ ಟೈಮಲ್ಲಿ ಯಾಕೆ 40,000 ಜನರನ್ನ ಹತ್ಯೆ ಮಾಡಿದ್ರಿ? ಅಂತ ಅಮಿತ್ ಶಾ ಪ್ರಶ್ನೆ ಮಾಡಿದ್ರು.

ಅಂದಹಾಗೆ ಸರ್ಕಾರಿ ದಾಖಲೆಯ ಪ್ರಕಾರ ಕಳೆದ ವರ್ಷ ಉಗ್ರರ ದಾಳಿಯಲ್ಲಿ 41 ಮಂದಿ ಪ್ರಾಣ ಬಿಟ್ಟಿದ್ರು. ಆದ್ರೆ ಈ ವರ್ಷ ಈವರೆಗೆ 32 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಉಗ್ರರು ಮತ್ತು ಯೋಧರ ನಡುವೆ 63 ಎನ್​ಕೌಂಟರ್ ಪ್ರಕರಣಗಳು ದಾಖಲಾಗಿವೆ. ಇನ್ನು ಈ ವರ್ಷ 97 ಯುವಕರು ಮನೆ ತೊರೆದು ಉಗ್ರ ಸಂಘಟನೆಗೆ ಸೇರಲು ಹೋಗಿದ್ದು, ಅವರ ಪೈಕಿ ಈಗಾಗಲೇ 56 ಮಂದಿಯನ್ನು ಹತ್ಯೆ ಮಾಡಲಾಗಿದೆ. ಅದೇ ಕಳೆದ ವರ್ಷ 178 ಯುವಕರು ಉಗ್ರ ಸಂಘಟನೆಗಳಿಗೆ ಸೇರಿದ್ದು, 121 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಇನ್ನು ಈ ವರ್ಷ ಈವರೆಗೆ ಒಟ್ಟಾರೆಯಾಗಿ ವಿವಿಧ ಸಂಘಟನೆಗಳ 114 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ. ಪಾಕಿಸ್ತಾನದ ಕಡೆಯಿಂದ 93 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ ಅನ್ನೋದು ಸರ್ಕಾರಿ ದಾಖಲೆಗಳಿಂದ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply