ಅಮೃತ್‌ಪಾಲ್‌ ಅಪ್ತನಿಗೆ ಆಶ್ರಯ ನೀಡಿದ್ದ ವ್ಯಕ್ತಿಯನ್ನ ಬಂಧಿಸಿದ ಪೊಲೀಸರು!

masthmagaa.com:

ತಲೆಮರೆಸಿಕೊಂಡಿರೋ ಖಲಿಸ್ತಾನಿ ತೀವ್ರವಾದಿ ಅಮೃತ್‌ ಪಾಲ್‌ ಬಂಧನದ ಕಾರ್ಯಾಚರಣೆ ಕಂಟಿನ್ಯೂ ಆಗಿದೆ. ದೇಶದಲ್ಲಿ ನಡೀತಿದ್ದ ಕಳ್ಳ-ಪೊಲೀಸ್‌ ಆಟ ಈಗ ವಿದೇಶಕ್ಕೂ ಕಾಲಿಟ್ಟಿದೆ. ಅಮೃತ್‌ ಪಾಲ್‌ ಸಧ್ಯ ನೇಪಾಳಕ್ಕೆ ಪರಾರಿಯಾಗಿರಬಹುದು ಅಂತ ಶಂಕೆ ವ್ಯಕ್ತವಾಗ್ತಿದೆ. ನೇಪಾಳದ ಸ್ಥಳೀಯ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿವೆ. ಇದ್ರ ಬೆನ್ನಲ್ಲೇ ಭಾರತ ಸರ್ಕಾರ ನೇಪಾಳ ಸರ್ಕಾರಕ್ಕೆ ಪತ್ರ ಬರೆದಿದೆ. ಅಮೃತ್‌ಪಾಲ್‌ ಬಂಧನಕ್ಕೆ ಸಹಕಾರ ಕೊಡಬೇಕು ಅಂತ ಕಠ್ಮಂಡುವಿನಲ್ಲಿರೋ ಭಾರತೀಯ ರಾಯಭಾರ ಕಚೇರಿ ನೇಪಾಳ ಸರ್ಕಾರಕ್ಕೆ ಮನವಿ ಮಾಡಿದೆ. ಆತ ನೇಪಾಳದಲ್ಲಿ ಏನಾದ್ರೂ ಸಿಕ್ಕಿಬಿದ್ರೆ ಅವನನ್ನ ನಮಗೆ ಒಪ್ಪಿಸಬೇಕು. ಆತ ಭಾರತದ ಅಥವಾ ಇನ್ಯಾವುದೇ ನಕಲಿ ಪಾಸ್‌ಪೋರ್ಟ್‌ ಬಳಸಿ ಈ ದೇಶದಲ್ಲಿ ಅಡಗಿಕೊಳ್ಳಬಹುದು. ಅಥವಾ ಅದೇ ಪಾಸ್‌ಪೋರ್ಟ್‌ಗಳನ್ನ ಬಳಸಿ ಆತ ಮೂರನೇ ದೇಶಕ್ಕೆ ಪಲಾಯನ ಮಾಡಬೋದು. ಹೀಗಾಗಿ ಅದಕ್ಕೆ ಅವಕಾಶ ಮಾಡಿಕೊಡಬಾರದು. ಅವನು ಸಿಕ್ಕಿದ್ರೆ ನಮಗೆ ಒಪ್ಪಿಸಿ, ಇಲ್ಲಿಂದ ತಪ್ಪಿಸಿಕೊಳ್ಳೋಕೆ ಬಿಡಬೇಡಿ ಅಂತ ಭಾರತ ನೇಪಾಳಕ್ಕೆ ಮನವಿ ಮಾಡಿದೆ. ಜೊತೆಗೆ ʻಅಮೃತ್‌ ಪಾಲ್‌ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆʼ ಅಂತ ನೇಪಾಳದ ಜನಪ್ರಿಯ ಪತ್ರಿಕೆ ಕಠ್ಮಂಡು ಪೋಸ್ಟ್‌ ವರದಿ ಮಾಡಿತ್ತು. ಇದರ ಪ್ರತಿಯನ್ನೂ ಕೊಟ್ಟು ನೇಪಾಳ ಸರ್ಕಾರಕ್ಕೆ ಭಾರತೀಯ ಅಧಿಕಾರಿಗಳು ರಿಕ್ವೆಸ್ಟ್‌ ಮಾಡಿದ್ದಾರೆ. ಇನ್ನು ನೇಪಾಳದ ಹೋಟೆಲ್‌ಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಆತನ ಮಾಹಿತಿ ಹಾಗೂ ಆತನ ಭಾವಚಿತ್ರವನ್ನ ಒದಗಿಸಲಾಗಿದೆ ಅಂತ ಕೂಡ ಹೇಳಲಾಗ್ತಿದೆ. ಇತ್ತ ಉತ್ತರ ಪ್ರದೇಶದಲ್ಲಿ ಅಮೃತ್‌ ಪಾಲ್‌ನನ್ನ ಬೆಂಬಲಿಸಿ ಗೋಡೆಗಳಲ್ಲಿ ಪೋಸ್ಟ್‌ ಹಾಕಲಾಗಿತ್ತು. ಅವರೆಲ್ಲಾ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಪೋಸ್ಟರ್‌ ಕೇಸಲ್ಲಿ ಸುಮಾರು 12 ಮಂದಿಯನ್ನ ಬಂಧಿಸಲಾಗಿದ್ದು ಈ ಪೈಕಿ 10 ಮಂದಿ ಅಪ್ರಾಪ್ತರು ಅನ್ನೋದು ಗೊತ್ತಾಗಿದೆ. ಈ ಕಡೆ ಅಮೃತ್‌ಪಾಲ್‌ನ ಬೆಂಬಲಿಗರು ಗೋಲ್ಡನ್‌ ಟೆಂಪಲ್‌ನಲ್ಲಿರುವ ಅಕಾಲ್‌ ತಖ್ತ್‌ ಪೀಠದ ಬಳಿ ಇಂದು ಅಮೃತ್‌ಪಾಲ್‌ ಪರ ಘೋಷಣೆ ಕೂಗಿದ್ದಾರೆ. ಇದೆಲ್ಲದ್ರ ಮಧ್ಯೆ ದೇಶದ ಒಳಗೆ ಅಮೃತ್‌ ಪಾಲ್‌ ಆಪ್ತಬಳಗಕ್ಕೆ ಪೊಲೀಸರು ಶಾಕ್‌ ಮೇಲೆ ಶಾಕ್‌ ಕೊಡ್ತಿದ್ದಾರೆ. ಇದೀಗ ಅಮೃತ್‌ ಪಾಲ್‌ನ ಆಪ್ತ ಸಹಾಯಕ ತೇಜಿಂದರ್‌ ಸಿಂಗ್‌ ಗಿಲ್‌ಗೆ ಆಶ್ರಯ ನೀಡಿದ್ದ ಬಲ್ವಂತ್‌ ಸಿಂಗ್‌ ಅನ್ನೊ ವ್ಯಕ್ತಿಯನ್ನೂ ಬಂಧಿಸಲಾಗಿದೆ.

ಈ ನಡುವೆ ಅಮೃತ್‌ ಪಾಲ್‌ ಕುರಿತ ಒಂದೊಂದೇ ಭಯಾನಕ ಸತ್ಯಗಳು ಸಹ ಹೊರಬರ್ತಿವೆ. ಅಮೃತ್‌ಪಾಲ್‌ ವಾರಿಸ್‌ ದೇ ಪಂಜಾಬ್‌ನ ಮುಖ್ಯಸ್ಥನಾಗಿರೋದ್ರ ಜೊತೆಗೆ ಆತ ತನ್ನದೇ ಸ್ವಂತ ʻಅಮೃತ್‌ಪಾಲ್‌ ಟೈಗರ್‌ ಫೋರ್ಸ್‌ʼ ಅನ್ನೊ ಸಂಘಟನೆಯನ್ನ ಕಟ್ಟಿ ಬೆಳಸುತ್ತಿದ್ದ ಅಂತ ಗೊತ್ತಾಗಿದೆ. ಇನ್ನು ಅಮೃತ್‌ ಪಾಲ್‌ ನಂಬರ್‌ಅನ್ನ ದಿವಂಗತ ನಟ ದೀಪ್‌ ಸಿಧು ತಾವು ಅಪಘಾತದಲ್ಲಿ ಸಾಯೋದಕ್ಕೂ ಮುಂಚೆನೇ ಬ್ಲಾಕ್‌ ಮಾಡಿದ್ದರು ಅಂತ ಹೇಳಲಾಗ್ತಿದೆ. ವಾರಿಸ್ದೇ ಪಂಜಾಬ್‌ ಅನ್ನೋ ಸಂಘಟನೆಯನ್ನ ಮುನ್ನೆಡೆಸ್ತಿದ್ದ ಸಿಧು ಅವರು ಬದುಕಿದಾಗಲೇ ಈ ಅಮೃತ್‌ ಪಾಲ್‌ ಆ ಸಂಘಟನೆಯ ಮುಂದಾಳತ್ವ ವಹಿಸೋಕೆ ಮುಂದಾಗಿದ್ದ. ಆದ್ರೆ ಅದು ಸಾಧ್ಯವಾಗದಿದ್ದಕ್ಕೆ ಅದೇ ವಾರಿಸ್‌ ದೇ ಪಂಜಾಬ್‌ ಸಂಘಟನೆಯ ಮಾದರಿಯಲ್ಲಿ ‘ವಾರಿಸ್ ಪಂಜ್-ಆಬ್ ದೇ’ ಅನ್ನೋ ಹೊಸ ಸಂಘಟನೆ ಹುಟ್ಟಿಹಾಕೋಕೆ ಈತ ಯೋಚನೆ ಮಾಡ್ತಿದ್ದ ಅಂತ ಮಾಹಿತಿ ಲಭ್ಯವಾಗಿದೆ.

-masthmagaa.com

Contact Us for Advertisement

Leave a Reply