ಜಗತ್ತಿನ ನಿಗೂಢ ಜಾಗ `ಏರಿಯಾ 51′..! ಅಲ್ಲಿ ಏನಿದೆ..?

ನಾವು ಇವತ್ತು ಜಗತ್ತಿನ ಅತ್ಯಂತ ನಿಗೂಢ ಪ್ರದೇಶದ ಬಗ್ಗೆ ಹೇಳೋಕೆ ಹೊರಟಿದ್ದೀವಿ. ಅಂದಹಾಗೆ ಆ ಸೀಕ್ರೆಟ್ ಪ್ಲೇಸ್ ಇರೋದು ಅಮೆರಿಕದಲ್ಲಿ. ಕೆಲವರು ಇಲ್ಲಿ ಏಲಿಯನ್ಸ್ ಇವೆ ಅಂದ್ರೆ. ಇನ್ನು ಕೆಲವರು ಇಲ್ಲಿ ಸೀಕ್ರೆಟ್ ರಿಸರ್ಚ್ ನಡೆಯುತ್ತಿದೆ ಅಂತಾರೆ. ಹೀಗಾಗೆ ನಾವು, ನೀವು ಅಲ್ಲಿಗೆ ಹೋಗೋ ಹಾಗಿಲ್ಲ. ಸ್ವತಹ ಅಮೆರಿಕನ್ನರೂ ಕೂಡ ಅಲ್ಲಿ ಕಾಲಿಡಂಗಿಲ್ಲ. ಒಂದು ವೇಳೆ ಅಲ್ಲಿ ಯಾರಾದರೂ ಕಾಣಿಸಿಕೊಂಡರೆ ಅವ್ರ ಕಥೆ ಮುಗಿಯಿತು ಅಂತಾನೇ ಅರ್ಥ. ಯಾಕಂದ್ರೆ ಅಲ್ಲಿ ಕಂಡಲ್ಲಿ ಗುಂಡು ಹೊಡೆಯಲು ಅಮೆರಿಕ ಸರ್ಕಾರವೇ ಆದೇಶಿಸಿದೆ. ಹಾಗಾದ್ರೆ ಜಗತ್ತಿನ ಅತ್ಯಂತ ರಹಸ್ಯವಾದ ಈ ಜಾಗವಾದ್ರೂ ಯಾವುದು..? ಈ ಪ್ರದೇಶದಲ್ಲಿ ಅಂಥದ್ದು ಏನಿದೆ..? ಅಂತ ಹೇಳ್ತಾ ಹೋಗ್ತೀವಿ ನೋಡಿ..

ಆ ರಹಸ್ಯ ಸ್ಥಳದ ಹೆಸರೇ ‘ಏರಿಯಾ 51’
ಅಮೆರಿಕದಲ್ಲಿರುವ ಆ ರಹಸ್ಯ ಸ್ಥಳದ ಹೆಸರು ಏರಿಯಾ ಫಿಫ್ಟಿ ಒನ್ ಅಂತ. ಅಂದಹಾಗೆ ಅಮೆರಿಕದ ನೇವಾಡ ರಾಜ್ಯದ ದಕ್ಷಿಣ ಭಾಗದಲ್ಲಿ ‘ನೆವಾಡ ಟೆಸ್ಟ್ ಅಂಡ್ ಟ್ರೈನಿಂಗ್ ರೇಂಜ್’ ಅನ್ನೋ ಪ್ರದೇಶವಿದೆ. ಸರ್ಕಾರ ಅಧಿಕೃತವಾಗಿ ಹೇಳಿಕೊಳ್ಳುವುದು ಇದು ಯುದ್ಧ ವಿಮಾನಗಳ ತಾಲೀಮು ನಡೆಯೋ ಪ್ರದೇಶ ಅಂತಾ. ಈ ಜಾಗವನ್ನ ಏರಿಯಾ ಫಿಫ್ಟಿ ಒನ್ ಅಂತ ಕರೀತಾರೆ.

ಏರಿಯಾ 51 ರಹಸ್ಯ ಸ್ಥಳವಾಗಿದ್ದು ಹೇಗೆ..?
ಏರಿಯಾ 51, ರಹಸ್ಯ ಸ್ಥಳವಾದ ಹಿಂದೆ ಒಂದು ರೋಚಕ ಸ್ಟೋರಿ ಇದೆ. 1947 ರಲ್ಲಿ ನ್ಯೂ ಮೆಕ್ಸಿಕೋದ ರೋಸ್ವೆಲ್ ಪ್ರದೇಶದಲ್ಲಿ ಯುಎಫ್ ಓ ಒಂದು ಕ್ರಾಶ್ ಆಗಿತ್ತು. ಯು ಎಫ್ ಓ ಅಂದ್ರೆ ಅನ್ ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ ಅಂತ. ಕನ್ನಡದಲ್ಲಿ ಇದನ್ನ ಹಾರುವ ತಟ್ಟೆಗಳು ಅಂತಾರೆ. ಇದರೊಳಗೆ ಏಲಿಯನ್ ಗಳು ಇರ್ತಾವೆ ಅಂತ ಹೇಳಲಾಗುತ್ತೆ. ಈ ಘಟನೆಯ ನಂತರ ಹಾರುವ ತಟ್ಟೆಗಳು ಕಾಣಿಸಿಕೊಂಡ ಬಗ್ಗೆ ಸಾಕಷ್ಟು ವರದಿಗಳಾದವು. ಈ ಹಿನ್ನೆಲೆ ಅಮೇರಿಕಾ ಏರ್ಫೋರ್ಸ್ ಇದರ ತನಿಖೆಗೆ ಇಳೀತು. ಇದಕ್ಕೆ ಪ್ರಾಜೆಕ್ಟ್ ಬ್ಲೂ ಬುಕ್ ಅಂತ ಹೆಸರಿಡ್ತು. 1969 ರಲ್ಲಿ ಪ್ರಾಜೆಕ್ಟ್ ಬ್ಲೂಬುಕ್ ಅನ್ನ ಕ್ಲೋಸ್ ಮಾಡಲಾಯಿತು. ಈ ಅವಧಿಯಲ್ಲಿ ಅದಾಗಲೇ ಹಾರುವ ತಟ್ಟೆಗಳು ಕಾಣಿಸಿಕೊಂಡ ಸುಮಾರು 12,000 ಪ್ರಕರಣಗಳ ತನಿಖೆ ನಡೆಸಲಾಗಿತ್ತು.

ಏರಿಯಾ 51 ನಲ್ಲಿ ಇದೆಯಾ ಏಲಿಯನ್ಸ್..?
ಪ್ರಾಜೆಕ್ಟ್ ಬ್ಲೂ ಬುಕ್ ಕ್ಲೋಸ್ ಆದಮೇಲೂ ನೇವಾಡದ ದಕ್ಷಿಣ ಭಾಗದಲ್ಲಿರುವ ಏರಿಯಾ ಫಿಫ್ಟಿ ಒನ್ ಸುತ್ತಮುತ್ತ ಪದೇಪದೇ ಹಾರುವ ತಟ್ಟೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಆದರೆ ಈ ಸ್ಥಳಕ್ಕೆ ಹೋಗಲು ಯಾರಿಗೂ ಅವಕಾಶವಿರಲಿಲ್ಲ. ಇದರಿಂದ ಈ ಜಾಗದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡವು. ಕೆಲವರ ಪ್ರಕಾರ ಬೇರೆ ಗ್ರಹದಿಂದ ಬಂದ ಏಲಿಯನ್ ಗಳ ಸ್ಪೇಸ್ ಕ್ರಾಫ್ಟ್ ಇಲ್ಲಿ ಕ್ರಾಶ್ ಆಯ್ತು. ಅದರ ತುಂಡುಗಳನ್ನ ಇದೆ ಏರಿಯಾ ಫಿಫ್ಟಿ ಒನ್ ನಲ್ಲಿ ಇಡಲಾಗಿದೆ ಅಂತಾರೆ. ವಿಜ್ಞಾನಿಗಳು ಆ ಸ್ಪೇಸ್ ಕ್ರಾಫ್ಟ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರಂತೆ. ಈ ಮೂಲಕ ಏಲಿಯನ್ಸ್ ಗಳ ಟೆಕ್ನಾಲಜಿಯನ್ನ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅನ್ನೋದು ಒಂದು ವಾದ. ಇನ್ನೊಂದು ವಾದದ ಪ್ರಕಾರ ಸ್ಪೇಸ್ ಕ್ರಾಫ್ಟ್ ಕ್ರಾಶ್ ಆದಾಗ ಅದರ ಜೊತೆಗೆ ಒಂದು ಏಲಿಯನ್ ಕೂಡ ಸಿಕ್ಕಿತ್ತು. ಅದನ್ನ ಏರಿಯಾ ಫಿಫ್ಟಿ ಒನ್ ನಲ್ಲಿ ಇಡಲಾಗಿದೆ ಎನ್ನಲಾಗುತ್ತಿದೆ.

ಏಲಿಯನ್ಸ್ ಜೊತೆ ಸಂಪರ್ಕ ಸಾಧಿಸಲು ಸರ್ಕಸ್!
80ರ ದಶಕದಲ್ಲಿ ಮಾಧ್ಯಮಗಳ ಮುಂದೆ ಬಂದ ರಾಬರ್ಟ್ ಬಾಬ್ ಲಾಸರ್ ಎಂಬ ವ್ಯಕ್ತಿ ತಾನು ಏರಿಯಾ ಫಿಫ್ಟಿ ಒನ್ ನಲ್ಲಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದ. ಅಲ್ಲದೆ ಅನ್ಯಗ್ರಹ ಜೀವಿಗಳ ಜೊತೆ ಸಂಪರ್ಕ ಸಾಧಿಸುವುದು ತನ್ನ ಕೆಲಸವಾಗಿತ್ತು ಅಂದಿದ್ದ. ಈ ಕುರಿತು ಕೆಲವೊಂದು ಫೋಟೋಗಳನ್ನ ಕೂಡ ಆತ ಮಾಧ್ಯಮಗಳಿಗೆ ತೋರಿಸಿದ್ದ. ಇನ್ನೊಂದು ವಾದದ ಪ್ರಕಾರ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಇಳಿದೇ ಇಲ್ವಂತೆ. ಬದಲಾಗಿ ಇದೆ ಏರಿಯಾ ಫಿಫ್ಟಿ ಒನ್ ನಲ್ಲಿ ಸೆಟ್ ಹಾಕಿ ಫೋಟೋ ತೆಗೆಯಲಾಗಿತ್ತು ಅಂತಾರೆ.

ಏರಿಯಾ 51 ಬಗ್ಗೆ ಸಿಐಎ ಹೇಳೋದೇನು..?
ಈ ಎಲ್ಲಾ ಊಹಾಪೋಹಗಳ ನಡುವೆ 2013ರಲ್ಲಿ ಅಮೆರಿಕ ಗುಪ್ತಚರ ಇಲಾಖೆ ಸಿಐಎ ಮೊದಲ ಬಾರಿ ಏರಿಯಾ ಫಿಫ್ಟಿ ಒನ್ ಬಗ್ಗೆ ಅಧಿಕೃತ ಮಾಹಿತಿ ನೀಡಿತು. ಸಿಐಎ ಪ್ರಕಾರ ಏರಿಯಾ 51ನಲ್ಲಿ ಏಲಿಯನ್‍ಗಳಾಗಲೀ, ತೇಲುವ ತಟ್ಟೆಗಳಾಗಲಿ ಇಲ್ಲ. ಅಲ್ಲಿ ಹಾರುತ್ತಿದ್ದದ್ದು ಅಮೆರಿಕದ ಗೌಪ್ಯ ವಿಮಾನಗಳು. ಯು-2 ಗೂಢಚಾರಿ ವಿಮಾನಗಳ ಪರೀಕ್ಷಾರ್ಥ ಪ್ರಯೋಗ ಅಲ್ಲಿ ನಡೆಯುತ್ತಿತ್ತು ಅಂತ ಸಿಐಎ ಹೇಳ್ತು. ಅಂದಹಾಗೆ ರಷ್ಯಾ ಜೊತೆಗಿನ ಕೋಲ್ಡ್ ವಾರ್ ಸಮಯದಲ್ಲಿ ರಷ್ಯಾ ಬಗ್ಗೆ ಗೂಢಾಚಾರಿಕೆ ನಡೆಸಲು ಈ ಯು-2 ಗೌಪ್ಯ ವಿಮಾನಗಳನ್ನ ಬಳಸಲಾಯಿತು ಏನ್ನಲಾಗುತ್ತೆ. ಇವುಗಳನ್ನ ಅಂಡರ್ ಕವರ್ ಏಜೆಂಟ್ ಗಳು ಚಲಾಯಿಸುತ್ತಿದ್ದರು. ಆದ್ರೆ 1960 ರಲ್ಲಿ ಟಾಪ್ ಸೀಕ್ರೆಟ್ ಆಗಿದ್ದ ಯು-2 ವಿಮಾನವೊಂದನ್ನ ರಷ್ಯಾ ಹೊಡೆದುರುಳಿಸಿತು. ಜೊತೆಗೆ ಫ್ರಾನ್ಸಿಸ್ ಎಂಬ ಪೈಲೆಟನ್ನ ಸೆರೆಹಿಡಿಯಿತು. ಬಳಿಕ 1962 ರಲ್ಲಿ ರಷ್ಯಾ ಹಾಗೂ ಅಮೆರಿಕ ಸೆರೆಯಾದ ಗೂಢಾಚಾರಿಗಳನ್ನ ಪರಸ್ಪರ ಬಿಡುಗಡೆ ಮಾಡಿದವು. ಆಗ ಫ್ರಾನ್ಸಿಸ್ ಕೂಡ ರಿಲೀಸ್ ಆದ. 2015ರಲ್ಲಿ ಬಿಡುಗಡೆಯಾದ ಬ್ರಿಡ್ಜ್ ಆಫ್ ಸ್ಪೈಸ್ ಸಿನಿಮಾ ಫ್ರಾನ್ಸಿಸ್ ಕಥೆಯನ್ನ ಒಳಗೊಂಡಿದೆ. ಇನ್ನು 1996 ರಲ್ಲಿ ರಿಲೀಸ್ ಆದ ಇಂಡಿಪೆಂಡೆನ್ಸ್ ಡೇ ಚಿತ್ರದಲ್ಲಿ ಏರಿಯಾ ಫಿಫ್ಟಿ ಒನ್ ಪ್ರದೇಶವನ್ನ ಏಲಿಯನ್ ಗಳ ಮೇಲೆ ಪ್ರಯೋಗ ನಡೆಸುವ ಜಾಗದಂತೆ ತೋರಿಸಲಾಗಿದೆ.

ಇದಿಷ್ಟೂ ಜಗತ್ತಿನ ಅತ್ಯಂತ ರಹಸ್ಯ ಸ್ಥಳವಾದ ಏರಿಯಾ 51 ಬಗ್ಗೆ ತಿಳಿಸಿಕೊಡುವ ಪ್ರಯತ್ನ. ಈ ಪ್ರದೇಶದಲ್ಲಿ ಈಗಲೂ ಸೀಕ್ರೆಟ್ ಸಂಶೋಧನೆಗಳು ನಡೆಯುತ್ತಲೇ ಇವೆ. ಈಗಲೂ ಇಲ್ಲಿಗೆ ಹೋಗಲು ಸಾಮಾನ್ಯ ಜನರಿಗೆ ಅವಕಾಶವಿಲ್ಲ.

Contact Us for Advertisement

Leave a Reply