ತಪ್ಪು ಮಾಡದಿದ್ರೆ ಭಯ ಬೇಡ: ಎಚ್‍ಡಿಕೆಗೆ ಅಶೋಕ್ ಗುದ್ದು

ಆದಿಚುಂಚನಗಿರಿ ಶ್ರೀಗಳ ಫೋನ್ ಟ್ಯಾಪಿ ಆಗಿದೆ ಎಂದಿದ್ದಕ್ಕೆ ತುಂಬಾ ನೋವಾಗಿದೆ ಎಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಸಚಿವ ಆರ್.ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡದಿದ್ದರೆ ಯಾವುದೇ ಭಯ ಬೇಡ. ಕುಮಾರಸ್ವಾಮಿಯವರ ಬಗ್ಗೆ ನಾನು ಏನೂ ಮಾತನಾಡಿಲ್ಲ. ತನಿಖೆ ವೇಳೆ ಸ್ವಾಮೀಜಿಯವರ ಫೋನ್ ಟ್ಯಾಪ್ ಆಗಿರೋದು ಬಯಲಾಗಿದೆ. ನಾನು ತಪ್ಪಾಗಿ ಏನನ್ನೂ ಹೇಳಿಲ್ಲ. ಏನ್ ಹೇಳಿದ್ದೀನೋ ಸರಿಯಾಗೇ ಹೇಳಿದ್ದೇನೆ ಅಂದ್ರು.

ನಿನ್ನೆಯಷ್ಟೇ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, ನನ್ನ ಅವಧಿಯಲ್ಲಿ ಆದಿಚುಂಚನಗಿರಿ ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿತ್ತು ಎಂಬ ವರದಿಗಳು, ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟು ಮಾಡಿವೆ. ಎಲ್ಲಕ್ಕೂ ಮಿಗಿಲಾಗಿ ಸ್ವಾಮೀಜಿಗಳಲ್ಲಿ ಮೂಡಿರಬಹುದಾದ ಬೇಸರ ನನ್ನ ನೋವನ್ನು ಹೆಚ್ಚಿಸಿದೆ ಎಂದಿದ್ದಾರೆ. ಅಲ್ಲದೆ ನಿರ್ಮಲಾನಂದರು ನನಗೆ ನೈತಿಕವಾಗಿ ಬಲವಾಗಿದ್ದವರು, ತಮ್ಮ ಸಾಮಾಜಿಕ ಕಾರ್ಯಗಳ ನೆರಳಲ್ಲಿ ನನಗೆ ಮಾರ್ಗದರ್ಶನ ಮಾಡಿದವರು, ನನಗಾಗಿ ಕಾಲಭೈರವನಲ್ಲಿ ಪ್ರಾರ್ಥಿಸಿದವರು. ಅವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ..? ಖಂಡಿತ ಇಲ್ಲ ಎಂದಿದ್ದರು.

Contact Us for Advertisement

Leave a Reply