masthmagaa.com:

ಇದುವರೆಗೆ 11 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರೋ ಕೊರೋನಾ ವೈರಸ್​​ ಬಗ್ಗೆ ಪ್ರತಿನಿತ್ಯ ಹೊಸ ಹೊಸ ಅಧ್ಯಯನಗಳು ನಡೆಯುತ್ತಿವೆ. ಇದೀಗ ಬೆಂಗಳೂರಿನಲ್ಲಿ ಕೊರೋನಾಗೆ ಸಂಬಂಧಿಸಿದಂತೆ ನಡೆಸಿದ ಅಧ್ಯಯನದಲ್ಲಿ ಮಹತ್ವದ ವಿಚಾರವೊಂದು ಹೊರಬಿದ್ದಿದೆ. ಅದೇನಂದ್ರೆ, ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದಲ್ಲಿ ವೈರಾಣು 18 ಗಂಟೆಗೂ ಹೆಚ್ಚು ಕಾಲ ಜೀವಂತವಾಗಿರುತ್ತದೆ ಅಂತ ಖ್ಯಾತ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ನಡೆಸಿದ ಶವ ಪರೀಕ್ಷೆಯಲ್ಲಿ ಗೊತ್ತಾಗಿದೆ. ಬೆಂಗಳೂರಿನಲ್ಲಿ ಸೋಂಕಿನಿಂದ ಮೃತಪಟ್ಟ 62 ವರ್ಷ ವ್ಯಕ್ತಿಯ ಶವ ಪರೀಕ್ಷೆ ನಡೆಸಿದಾಗ ಆತನ ಬಾಯಿ, ಗಂಟಲು ಮತ್ತು ಮೂಗಿನಲ್ಲಿ ವೈರಾಣು ಸಕ್ರಿಯವಾಗಿರೋದು ಬೆಳಕಿಗೆ ಬಂದಿದೆ. ಆತ ಬದುಕಿದ್ದಾಗ ಕೊರೋನಾ ವೈರಾಣು ಸಕ್ರಿಯವಾಗಿರೋದು ಓಕೆ, ಆದ್ರೆ ಮೃತಪಟ್ಟು 18 ಗಂಟೆಗಳ ಬಳಿಕವೂ ವೈರಾಣು ಜೀವವಿರುತ್ತೆ ಅನ್ನೋ ವಿಚಾರ ಆತಂಕ ಹೆಚ್ಚಿಸುವಂತಹದ್ದು.

ಕೊರೋನಾ ಸೋಂಕಿತರೊಬ್ಬರ ಮೃತದೇಹದ ಶವ ಪರೀಕ್ಷೆ ನಡೆಸಿರೋದು ದೇಶದಲ್ಲಿ ಇದೇ ಮೊದಲು ಅಂತ ಹೇಳಲಾಗ್ತಿದೆ. ಬೆಂಗಳೂರಿನ ಆಕ್ಸ್​ಫರ್ಡ್​ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಡಾ. ದಿನೇಶ್ ರಾವ್ ಕಳೆದ ವಾರ ಈ ಶವ ಪರೀಕ್ಷೆ ನಡೆಸಿದ್ದರು. ಇವರ ಜೊತೆಗೂಡಲು ಎಲ್ಲರೂ ಹಿಂದೇಟು ಹಾಕಿದ್ದರು. ಹೀಗಾಗಿ ಯಾರ ಸಹಾಯವಿಲ್ಲದೆ ಸುಮಾರು 1 ಗಂಟೆ ಕಾಲ ಶವ ಪರೀಕ್ಷೆ ನಡೆಸಿದ್ದರು. ಈ ವೇಳೆ ದೇಹದ ವಿವಿಧ ಭಾಗಗಳಿಂದ ಸ್ವ್ಯಾಬ್​ಗಳನ್ನು ತೆಗೆದುಕೊಳ್ಳಲಾಯ್ತು. ಬಾಯಿ, ಗಂಟಲು ಮತ್ತು ಮೂಗಿನ ಸ್ವ್ಯಾಬ್​ಗಳನ್ನ RT-PCR ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ವೈರಾಣು ಜೀವಂತವಿತ್ತು. ಆದ್ರೆ ಮುಖ ಮತ್ತು ಕುತ್ತಿಗೆ ಮೇಲಿನ ಚರ್ಮ ಅಥವಾ ಒಳಾಂಗಗಳಾದ ಶ್ವಾಸಕೋಶ ಮತ್ತು ಉಸಿರಾಟದ ಕೊಳವೆಗಳಲ್ಲಿ ವೈರಾಣುವಿನ ಕುರುಹುಗಳಿರಲಿಲ್ಲ.

ಅಂದ್ಹಾಗೆ ಶ್ವಾಸಕೋಶವು ಮೃದುವಾದ ಸ್ಪಾಂಜ್ ಬಾಲ್ ರೀತಿ ಇರುತ್ತೆ. ಇವುಗಳು ಸಾಮಾನ್ಯವಾಗಿ 600ರಿಂದ 700 ಗ್ರಾಂ ತೂಕವಿರುತ್ತವೆ. ಆದ್ರೆ ಶವ ಪರೀಕ್ಷೆಗೆ ಒಳಪಟ್ಟ ಮೃತದೇಹದ ಶ್ವಾಸಕೋಶ ಒಟ್ಟು 2,180 ಗ್ರಾಂ ತೂಕವಿತ್ತು. ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಗಾಳಿಯ ಚೀಲಗಳು ಛಿದ್ರಗೊಂಡಿದ್ದವು. ಕೊರೋನಾ ವೈರಾಣು ಶ್ವಾಸಕೋಶಕ್ಕೆ ಮಾಡಿರುವ ಹಾನಿ ನೋಡಿ ಡಾ. ದಿನೇಶ್​ ರಾವ್ ಒಂದುಕ್ಷಣ ಶಾಕ್ ಆಗಿದ್ದಾರೆ.  ಸೋ ಕೊರೋನಾ ಸೋಂಕಿತರಿಗೆ ಕೇವಲ ವೆಂಟಿಲೇಷನ್ ಅಥವಾ ಆಮ್ಲಜನಕದ ಸಪೋರ್ಟ್​ ನೀಡಿದ್ರೆ ಸಾಕಾಗಲ್ಲ. ರಕ್ತ ಹೆಪ್ಪುಗಟ್ಟಿರೋದನ್ನು ಕರಗಿಸಲು ಥ್ರಂಬೋಟಿಕ್ ಚಿಕಿತ್ಸೆ ನೀಡಬೇಕು. ಜೊತೆಗೆ ಗಾಳಿಯ ಚೀಲಗಳಲ್ಲಿ ರಕ್ತ ಹೆಪ್ಪುಗಟ್ಟಿರೋದನ್ನು ತೆಗೆಯಬೇಕು ಅಂತ ಡಾ. ದಿನೇಶ್ ರಾವ್ ಹೇಳಿದ್ದಾರೆ.

ಇನ್ನು ಕೊರೋನಾ ಸೋಂಕಿತರು ಮೃತಪಟ್ಟ ಬಳಿಕ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೇ ಅಂತಿಮ ಸಂಸ್ಕಾರ ಮಾಡಬೇಕು. ಅದ್ರಲ್ಲೂ ಮೃತದೇಹವನ್ನು ಮಣ್ಣು ಮಾಡದೆ, ಸುಡಬೇಕು. ಮಣ್ಣು ಮಾಡಿದ್ರೆ ಕೊರೋನಾ ವೈರಾಣು ನೀರು ಅಥವಾ ಗಾಳಿಯ ಮೂಲಕ ಹರಡುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ್ದನ್ನು ಬ್ಲೈಂಡಾಗಿ ಅನುಸರಿಸುವ ಬದಲು ಸೋಂಕಿನ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಿ ಅದನ್ನು ಅರ್ಥಮಾಡಿಕೊಳ್ಳಬೇಕು, ನಮ್ಮ ಚಿಕಿತ್ಸೆಯ ಪ್ರೋಟೋಕಾಲ್‌ಗಳನ್ನ ಬದಲಾಯಿಸಬೇಕು ಅಂತ ಡಾ. ದಿನೇಶ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply