70 ವರ್ಷಗಳ ಅಯೋಧ್ಯೆ ಪ್ರಕರಣದ ವಿಚಾರಣೆ ಅಂತ್ಯ..! ತೀರ್ಪೊಂದೇ ಬಾಕಿ…

ದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ಸಂಬಂಧ ವಿಚಾರಣೆ ಮುಕ್ತಾಯವಾಗಿದೆ. ಈ ಮೂಲಕ 70 ವರ್ಷಗಳ ಪ್ರಕರಣವೊಂದರ 40 ದಿನಗಳ ಸುದೀರ್ಘ ವಿಚಾರಣೆ ಮುಕ್ತಾಯಗೊಂಡಿದೆ. ಹಿಂದೂಗಳ ಪರ ನಿರ್ಮೋಹಿ ಅಖಾಡ, ಹಿಂದೂ ಮಹಾಸಭಾ, ರಾಮಜನ್ಮಭೂಮಿ ನ್ಯಾಸ್ ಕಡೆಯಿಂದ ವಾದ ಮಂಡಿಸಿದ್ರೆ, ಮುಸ್ಲಿಮರ ಪರವಾಗಿ ರಾಜೀವ್ ಧವನ್ ವಾದ ಮಂಡಿಸಿದ್ರು. ಸುಪ್ರೀಂಕೋರ್ಟ್​ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. 1949ರಲ್ಲಿ ಮೊದಲ ಬಾರಿಗೆ ಅಯೋಧ್ಯೆ ವಿವಾದ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಆದ್ರೆ ಕಳೆದ ಆಗಸ್ಟ್​ 6ರಿಂದ ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ನಿರಂತರವಾಗಿ ವಿಚಾರಣೆ ನಡೆಸಿತ್ತು.

ಇತ್ತೀಚೆಗೆ ಅಕ್ಟೋಬರ್ 18ರೊಳಗೆ ವಿಚಾರಣೆ ಮುಗಿಸುವಂತೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಡೆಡ್​ಲೈನ್ ಕೊಟ್ಟಿದ್ರು. ನಂತರ ಪುನಃ ಒಂದು ದಿನ ಕಡಿಮೆ ಮಾಡಿ, ಅಕ್ಟೋಬರ್ 17ರೊಳಗೆಯೇ ವಿಚಾರಣೆ ಮುಗಿಸಬೇಕೆಂದು ಹೇಳಿದ್ದರು. ಆದ್ರೆ ಇವತ್ತು ಬೆಳಗ್ಗೆ ಇಂದು ಸಂಜೆ 5 ಗಂಟೆಯೊಳಗೆ ವಾದ-ಪ್ರತಿವಾದ ಮುಗಿಸಬೇಕೆಂದು ತಿಳಿಸಿದ್ದರು.

ಇನ್ನು ಇವತ್ತು ಸುಪ್ರೀಂಕೋರ್ಟ್​​ ಒಂದು ಹೈಡ್ರಾಮಾಕ್ಕೆ ಸಾಕ್ಷಿಯಾಯ್ತು. ಹಿಂದೂ ಮಹಾಸಭಾ ಕಡೆಯಿಂದ ಅಯೋಧ್ಯೆ ಕುರಿತ ಪುಸ್ತಕವೊಂದರಲ್ಲಿರುವ ನಕ್ಷೆಯನ್ನು ನೀಡಲಾಯ್ತು. ಈ ವೇಳೆ ಮುಸ್ಲಿಂ ಪರ ವಕೀಲ ರಾಜೀವ್ ಧವನ್ ಈ ನಕ್ಷೆಯನ್ನು ಹರಿದು ಹಾಕಿದ್ರು. ಈ ವೇಳೆ ಗರಂ ಆದ ನ್ಯಾ. ರಂಜನ್ ಗೊಗೊಯ್, ಹೀಗೆಲ್ಲಾ ಮಾಡಿದ್ರೆ ನಾವು ಎದ್ದು ಹೋಗಬೇಕಾಗುತ್ತೆ ಅಂತ ಎಚ್ಚರಿಸಿದ್ರು.

ಕೊನೆಗೂ ಸಂಜೆ 5 ಗಂಟೆ ವೇಳೆಗೆ ಅಯೋಧ್ಯೆಯ ಸುದೀರ್ಘ ವಿಚಾರಣೆ ಮುಗಿದಿದ್ದು, ತೀರ್ಪು ಕಾಯ್ದಿರಿಸಲಾಗಿದೆ. ಮುಂದಿನ ತಿಂಗಳು ನವೆಂಬರ್ 17ರಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನಿವೃತ್ತಿ ಹೊಂದಲಿದ್ದು, ಅದಕ್ಕೂ ಮುನ್ನ ಈ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

Contact Us for Advertisement

Leave a Reply