ಅಯೋಧ್ಯೆಯ ಭಯಾನಕ ಸತ್ಯಕತೆ ನಿಮಗೆ ಗೊತ್ತಾ..? ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ..

ಹಾಯ್ ಫ್ರೆಂಡ್ಸ್…ಅಯೋಧ್ಯೆ ರಾಮ ಮಂದಿರ ಗಲಾಟೆ ಯಾವಾಗ, ಹೇಗೆ ಶುರುವಾಯ್ತು? 500 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಏನ್ ನಡೆದಿತ್ತು ಗೊತ್ತಾ? 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಆಗೋ ಮುನ್ನ ಏನೆಲ್ಲಾ ನಡೆದಿತ್ತು.? ಬನ್ನಿ ನೋಡೋಣ..

ಅಯೋಧ್ಯೆ ರಾಮ ಮಂದಿರ… ಬಾಬ್ರಿ ಮಸೀದಿ… ಇದು ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿರೋ ವಿವಾದ. ನಮ್ಮ ದೇಶದ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನ ಪರ್ಮನೆಂಟಾಗಿ ಬದಲಿಸಿಬಿಟ್ಟ ವಿವಾದ… ಆದ್ರೆ ಅಸಲಿಗೆ ಏನಿದು ಗಲಾಟೆ..? ಇದು ಬಗೆ ಹರೀತಿಲ್ಲ ಯಾಕೆ.? ಇದರ ಇತಿಹಾಸ ಏನು ಅಂತಾ ಹೆಚ್ಚಿನವರಿಗೆ ಗೊತ್ತಿಲ್ಲ. ಈ ಸತ್ಯ ಕಥೆಯಲ್ಲಿ ಹಲವಾರು ವ್ಯಕ್ತಿಗಳು ಬರ್ತಾರೆ. ಪ್ರಮುಖವಾಗಿ ನಾಲ್ಕು ಪ್ರಧಾನಿಗಳು ಹಾಗೂ ಇಬ್ಬರು ಸಿಎಂಗಳು ಬರ್ತಾರೆ… ಹಲವು ಘಟನೆಗಳಿವೆ… ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ಬಿಡಿಸಿ ಹೇಳ್ತಾ ಹೋಗ್ತೀವಿ. ಗಮನ ಇಟ್ಟು ಓದುತ್ತಾ ಹೋಗಿ..

ಅದು 1528ನೇ ಇಸವಿ‌… ಬಾಬ್ರಿ ಮಸೀದಿ ಶಿಲಾನ್ಯಾಸ!
1528ರಲ್ಲಿ ಆಗಿನ ಮೊಘಲ್ ಬಾದ್ ಶಾಹ್ ಬಾಬರ್ ನ ಸೇನಾಪತಿ ಬಾಖಿರ್ ಖಾನ್, ಮಸೀದಿಯೊಂದರ ನಿರ್ಮಾಣಕ್ಕೆ ಮುಂದಾದ. ತನ್ನ ಬಾದ್ಶಾಹ್ಗೆ ಖುಷಿ ಆಗ್ಲಿ ಅಂತಾ ಅದ್ಕೆ ಬಾಬ್ರಿ ಮಸೀದಿ ಅಂತಾ ಹೆಸರಿಟ್ಟ. ಇಲ್ಲಿಂದಲೇ ಶುರುವಾಯ್ತು ಈ ದೇಶದ ಇತಿಹಾಸದ ಅತಿದೊಡ್ಡ ವಿವಾದ. ಯಾಕಂದ್ರೆ, ಹಿಂದೂ ನಂಬಿಕೆಗಳ ಪ್ರಕಾರ ಅಯೋಧ್ಯೆ ಶ್ರೀ ರಾಮನ ನಗರಿ. ಅದು ರಾಮ ಹುಟ್ಟಿದ ಊರು. ಈ ಬಾಖಿರ್ ಖಾನ್‌ ಅದೇ ಅಯೋಧ್ಯೆಯಲ್ಲಿ ಬೃಹತ್ ಮಸೀದಿ ಕಟ್ಟಿಸಿದ. ಅಷ್ಟೇ ಅಲ್ಲ, ಹಿಂದೂ ಸಂಘಟನೆಗಳ ಪ್ರಕಾರ, ಆ ಜಾಗದಲ್ಲಿ ರಾಮನ ದೇವಸ್ಥಾನ ಇತ್ತು. ಅದನ್ನ ಒಡೆದುಹಾಕಿ ಬಾಖಿರ್ ಖಾನ್ ಈ ಮಸೀದಿ ಕಟ್ಟಿಸಿದ ಅನ್ನೋದೇ ಈ ಇಡೀ ವಿವಾದದ ಬೆಂಕಿಯ ಮೂಲ ಅಂಶ.

ಅದು 1853… ಅಯೋಧ್ಯೆ ಬಗ್ಗೆ ಮೊದಲ ದಂಗೆ.!
1853ರಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಈ ದೇಶದಲ್ಲಿ ದಂಗೆ ಆಗುತ್ತೆ. ಅದಾಗಿ ಮೂರು ವರ್ಷಗಳ ನಂತರ 1856ರಲ್ಲಿ ಮಹಂತ ರಘುವರ್ ದಾಸ್ ಅನ್ನೋರು ಅಂದಿನ ಫೈಜಾಬಾದ್ ಡಿಸ್ಟ್ರಿಕ್ಟ್ ಕೋರ್ಟ್ ಗೆ ವಿಚಾರ ತಗೊಂಡೋಗ್ತಾರೆ. ಆಗ ಬ್ರಿಟಿಷರ ಕಾಲದ ಕೋರ್ಟ್, ಇದು 300 ವರ್ಷಗಳಿಗೂ ಹಿಂದಿನ ವಿಚಾರ. ಈಗ ತೀರ್ಮಾನ ಮಾಡಕ್ಕೆ ಆಗಲ್ಲ ಅಂತಾ ರಿಜೆಕ್ಟ್ ಮಾಡುತ್ತೆ.

ಅದು 1949… ರಾಮನ ಮೂರ್ತಿ ಪ್ರಕಟ!
ನಂತರ ದೇಶಕ್ಕೆ ಸ್ವಾತಂತ್ರ್ಯ ಬಂದು 2 ವರ್ಷ ಆಗಿರುತ್ತೆ ಅಷ್ಟೇ. ಆಗ 1949ರ ಡಿಸೆಂಬರ್ 21, 22ನೇ ತಾರೀಖು ದೊಡ್ಡ ಕೋಲಾಹಲ ಆಗುತ್ತೆ. ವಿವಾದಿತ ಸ್ಥಳದಲ್ಲಿ ರಾಮನ ಮೂರ್ತಿ ಪ್ರಕಟ ಆಗಿರುತ್ತೆ. ಬಾಬ್ರಿ ಮಸೀದಿಯ ಮೇನ್ ಗುಂಬಜ್ ನ ಎಕ್ಸಾಟ್ ಕೆಳಗೆ, ಅಂದ್ರೆ ಇಡೀ ಮಸೀದಿಯ ಒಳಭಾಗದಲ್ಲಿ ರಾಮನ ಮೂರ್ತಿ ಪ್ರತ್ಯಕ್ಷ ಆಗಿರುತ್ತೆ. ಆಗ, ನೋಡಿ ಇದೇ ರಾಮ ಹುಟ್ಟಿದ ಜಾಗ… ಇದು ದೇವರು ನೀಡ್ತಿರೋ ಇಷಾರೆ ಅಂತಾ ಹಿಂದೂ ಸಂಘಟನೆಗಳು ಅಂದ್ರೆ, ಈ ಮೂರ್ತಿಯನ್ನು ಕದ್ದು ಮುಚ್ಚಿ ಇಡಲಾಗಿದೆ ಅಂತಾ ಮುಸ್ಲಿಂ ಸಂಘಟನೆಗಳು ತಕರಾರು ತೆಗೆದ್ರು.

ಡಿಸೆಂಬರ್ 23. FIR No. 167/49
22ನೇ ತಾರೀಖು ಈ ಘಟನೆ ಆಗ್ತಾ ಇದ್ದ ಹಾಗೆ ಮರುದಿನ 23ನೇ ತಾರೀಖು ಕೇಸ್ ಆಗುತ್ತೆ. ಈ ವಿವಾದದಲ್ಲಿ ಮೊದಲ ಬಾರಿಗೆ ಎಫೈಯಾರ್ ಆಗುತ್ತೆ. ಆ FIR No. 167/49. ಹಿಂದೂ-ಮುಸ್ಲಿಮರಿಬ್ಬರೂ ಕೋರ್ಟ್ ಗೆ ಹೋಗ್ತಾರೆ. ವಿವಾದಿತ ಜಾಗ ಪ್ಲಾಟ್ ನಂಬರ್ 583ರ ಮಾಲೀಕತ್ವಕ್ಕೆ ಕಾನೂನು ಕುಸ್ತಿ ಶುರುವಾಗುತ್ತೆ.

ರಾಜೀವ್ ಗಾಂಧಿ ಮತ್ತು ರಾಮ ಮಂದಿರ!

ಅದು 1986. ಆಗಿನ್ನೂ ಕೋರ್ಟಲ್ಲಿ ಕೇಸು ಕುಂಟುತ್ತಾ ತೆವಳುತ್ತಾ ಸಾಗ್ತಾ ಇರುತ್ತೆ. ಆಗ ರಾಜೀವ್ ಗಾಂಧಿ ಸರ್ಕಾರ ಇರುತ್ತೆ‌. ಶಹಬಾನೋ ಕೇಸಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನೂ ಕಡೆಗಣಿಸಿ ರಾಜೀವ್ ಗಾಂಧಿ ಸರ್ಕಾರ ಮುಸ್ಲಿಂ ಸಂಘಟನೆಗಳ ಪರ ನಿಂತಿತ್ತು. ಇದ್ರಿಂದ ರಾಜೀವ್ ಗಾಂಧಿ ಸರ್ಕಾರ ಮುಸ್ಲಿಂರ ಪರ ಅನ್ನೋ ಇಮೇಜ್ ಬಂದಿತ್ತು. ಇದನ್ನ ಹೋಗಲಾಡಿಸೋದು ಹೇಗೆ ಅಂತಾ ರಾಜೀವ್ ಕಾಯ್ತಾ ಇದ್ರು. ಆಗ ಫೈಜಾಬಾದ್ ಡಿಸ್ಟ್ರಿಕ್ಟ್ ಕೋರ್ಟ್ ವಿವಾದಿತ ಸ್ಥಳದ ಬೀಗ ಓಪನ್ ಮಾಡಿ ಅಂತಾ ಆರ್ಡರ್ ಮಾಡುತ್ತೆ. ಕೋರ್ಟ್ ಆದೇಶ ಹೊರಬಿದ್ದ 40 ನಿಮಿಷಗಳಲ್ಲೇ ಸರ್ಕಾರ ಬೀಗ ತೆಗೆದುಬಿಟ್ಟಿತ್ತು. ಅದನ್ನ ದೂರದರ್ಶನದಲ್ಲಿ ಪ್ರಸಾರ ಕೂಡ ಮಾಡಲಾಯ್ತು. ಈ ರೀತಿ ರಾಜೀವ್ ಗಾಂಧಿ ಸಾಫ್ಟ್ ಹಿಂದುತ್ವದ ಹಾದಿ ಹಿಡಿದಾಗಿತ್ತು. ಎಲ್ಲೀ ತನಕ ಅಂದ್ರೆ, ಮುಂದಿನ ಲೋಕಸಭಾ ಚುನಾವಣೆಯ ಪ್ರಚಾರವನ್ನ ಫೈಜಾಬಾದ್ ನಿಂದಲೇ ಆರಂಭಿಸಿದ ರಾಜೀವ್ ಗಾಂಧಿ, ಹೀಗೆ ಹೇಳಿದ್ರು.

‘ನನಗೆ ವೋಟ್ ಕೊಡಿ. ನಾನು ರಾಮರಾಜ್ಯವನ್ನ ಮತ್ತೆ ಸ್ಥಾಪಿಸ್ತೀನಿ. ನನಗೆ ನಾನು ಹಿಂದೂ ಅಂತಾ ಹೆಮ್ಮೆ ಇದೆ’
– ರಾಜೀವ್ ಗಾಂಧಿ, ಅಂದಿನ ಪ್ರಧಾನಮಂತ್ರಿ

1989ರಲ್ಲಿ ಆಲ್ರೆಡೀ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕೂಡ ಆಗಿ ಹೋಗಿತ್ತು. ಆಗ ಉತ್ತರ ಪ್ರದೇಶದಲ್ಲಿ ಎನ್ ಡಿ ತಿವಾರಿ ಅವರ ಕಾಂಗ್ರೆಸ್ ಸರ್ಕಾರ ಇತ್ತು. ಕೇಂದ್ರದಲ್ಲಿ ರಾಜೀವ್ ಗಾಂಧಿ ಸರ್ಕಾರ. ಆದ್ರೆ ಇಷ್ಟೆಲ್ಲಾ ಸಾಫ್ಟ್ ಹಿಂದುತ್ವ ಮಾಡಿದ್ರೂ, ಬೋಫೋರ್ಸ್ ಹಗರಣದ ಸುನಾಮಿಯಲ್ಲಿ ರಾಜೀವ್ ಗಾಂಧಿ ಸೋತು ಹೋದ್ರು.

ವಿಪಿ ಸಿಂಗ್ ಸರಕಾರ… ಬಿಜೆಪಿ ಬೆಂಬಲ!
ಈಗ ವಿಶ್ವನಾಥ್ ಪ್ರತಾಪ್ ಸಿಂಗ್ ಬಿಜೆಪಿ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಆದ್ರು. ಈಗ ಬಿಜೆಪಿಯ ಸೀಟುಗಳು 2 ರಿಂದ 88 ಆಗಿತ್ತು. ಲಾಲ್ ಕೃಷ್ಣ ಆಡ್ವಾಣಿ ಅಯೋಧ್ಯೆ ಗಾಡಿ ಸೋಮನಾಥ ದಿಂದ 10 ಸಾವಿರ ಕಿಲೋ ಮೀಟರ್ ರಥಯಾತ್ರೆ ಶುರು ಮಾಡಿದ್ರು. ಈ ರಥವನ್ನ ಬಿಹಾರದ ಸಮಷ್ಟಿಪುರದಲ್ಲಿ ಅಲ್ಲಿನ ಲಾಲೂ ಸರ್ಕಾರ ತಡೆದು ಅಡ್ವಾಣಿ ಅವರ ಬಂಧನ ಆಗುತ್ತೆ. ಆಗ ರೊಚ್ಚಿಗೆದ್ದ ಬಿಜೆಪಿ ವಿಪಿ ಸಿಂಗ್ ಸರಕಾರದಿಂದ ಬೆಂಬಲ ವಾಪಸ್ ಪಡೀತಾರೆ.

ಚಂದ್ರಶೇಖರ್ ಸರ್ಕಾರ… ಕಾಂಗ್ರೆಸ್ ಬೆಂಬಲ!
ಈಗ ಕಾಂಗ್ರೆಸ್ ಬೆಂಬಲದೊಂದಿಗೆ ಚಂದ್ರಶೇಖರ್ ಪ್ರಧಾನಿ ಆಗ್ತಾರೆ. ಆದ್ರೆ ಕೆಲವೇ ದಿನಗಳಲ್ಲಿ ಕಿರಿಕ್ ಮಾಡಿ ಈ ಸರ್ಕಾರವನ್ನ ಕಾಂಗ್ರೆಸ್ಸೇ ಬೀಳಿಸುತ್ತೆ. ಮತ್ತೆ ಚುನಾವಣೆ ಬರುತ್ತೆ.

1991… ಮತ್ತೆ ಚುನಾವಣೆ… ರಾಜೀವ್ ಹತ್ಯೆ!
1991ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆಯೇ ltte ಉಗ್ರರು ರಾಜೀವ್ ಗಾಂಧಿ ಹತ್ಯೆ ಮಾಡ್ತಾರೆ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಆಗ ಪ್ರಧಾನಿ ಆಗೋದೇ ಒನ್ ಅಂಡ್ ಓನ್ಲಿ ಪಿವಿ ನರಸಿಂಹ ರಾವ್.

ನರಸಿಂಹ ರಾವ್ ಮತ್ತು ರಾಮಮಂದಿರ!
ನರಸಿಂಹ ರಾವ್ ಪ್ರಧಾನಿ ಆಗ್ತಿದ್ದಹಾಗೇ ಬಿಜೆಪಿ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳು ಹೋರಾಟವನ್ನ ಜೋರ್ ಮಾಡ್ತಾರೆ. ಎಲ್ಲಾ ಸಂಧಾನ ಸಭೆಗಳು ಫೇಲ್ ಆಗ್ತಾವೆ. ಯುಪಿಯಲ್ಲಿ ಬಿಜೆಪಿಯ ಕಲ್ಯಾಣ್ ಸಿಂಗ್ ಸರಕಾರ ಇರುತ್ತೆ. ಇವ್ರು ಮಂದಿರ ಆಂದೋಲನಕ್ಕೆ ಏನೇನ್ ಬೇಕೋ ಎಲ್ಲಾ ಸಹಾಯ ಮಾಡ್ತಾ ಇರ್ತಾರೆ. ಗಲಾಟೆಗಳು ಮಿತಿ ಮೀರಿದಾಗ ಯುಪಿಯ ಕಲ್ಯಾಣ್ ಸಿಂಗ್ ಸರ್ಕಾರವನ್ನ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಿ ಅಂತಾ ಪ್ರಧಾನಿ ನರಸಿಂಹ ರಾವ್ ಗೆ ಸಲಹೆ ನೀಡಲಾಗುತ್ತೆ. ಆದ್ರೆ ನರಸಿಂಹ ರಾವ್ ಹಾಗೆ ಮಾಡೋದೇ ಇಲ್ಲ. ಹಿಂದೂ ಸಂಘಟನೆಗಳ ಯಾವ ಕೆಲಸವನ್ನೂ ಅವರು ತಡೆಯೋದೆ ಇಲ್ಲ. ಆಗಾಗಲೇ ಅಯೋಧ್ಯೆಯಲ್ಲಿ ಲಕ್ಷ ಕರಸೇವಕರು ಜಮಾಯಿಸಿರ್ತಾರೆ.

1992, ಡಿಸೆಂಬರ್ 5. ಅಟಲ್ ಭಾಷಣ!
ಅದು ಬಾಬ್ರಿ ಮಸೀದಿ ಧ್ವಂಸದ ಮುನ್ನಾದಿನ. ಅಂದ್ರೆ ಡಿಸೆಂಬರ್ 5ನೇ ತಾರೀಖು ರಾತ್ರಿ. ಆಗ ಅಯೋಧ್ಯೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಂದು ಭಾಷಣ ಮಾಡ್ತಾರೆ. ಆ ನಿಗೂಢ ಅರ್ಥದ ಭಾಷಣದ ಪ್ರತೀ ಪದವನ್ನೂ ಗಮನ ಇಟ್ಟು ಕೇಳಿ..

‘ಸುಪ್ರೀಂ ಕೋರ್ಟ್ ಯಾವುದೇ ನಿರ್ಮಾಣ ಮಾಡಬೇಡಿ ಅಂತಾ ಮಾತ್ರ ಹೇಳಿದೆ. ಭಜನೆ, ಕೀರ್ತನೆ ಮಾಡಬಹುದು ಅಂತಾ ಹೇಳಿದೆ. ಭಜನೆಯನ್ನ ಒಬ್ಬರೇ ಮಾಡಕ್ಕಾಗಲ್ಲ. ಕೀರ್ತನೆ ಮಾಡೋಕಂತೂ ಇನ್ನೂ ಜಾಸ್ತಿ ಜನ ಬೇಕು. ಇಷ್ಟು ಜನ ಅಂದ್ಮೇಲೆ ಕೂರೋಕೆ ಜಾಗ ಬೇಕು. ನಿಂತ್ಕೊಂಡು ಎಷ್ಟು ಹೊತ್ತಿರೋಕಾಗುತ್ತೆ? ಮೊದಲೇ ಅಲ್ಲಿ ಚೂಪು ಚೂಪನೆಯ ಕಲ್ಲಿನ ಆಕೃತಿಗಳು ಎದ್ದು ನಿಂತಿವೆ. ಹಾಗಾಗಿ ನೆಲ ಸಮತಟ್ಟು ಮಾಡ್ಬೇಕಾಗುತ್ತೆ. ಫುಲ್ ಲೆವೆಲ್ ಮಾಡ್ಬೇಕಾಗುತ್ತೆ. ಹೋಮ ಮಾಡ್ಬೇಕು. ಅದಕ್ಕೆ ಹೋಮಕುಂಡದ ನಿರ್ಮಾಣ ಕೂಡಾ ಮಾಡ್ಬೇಕಾಗುತ್ತೆ.’
– ಅಟಲ್ ಬಿಹಾರಿ ವಾಜಪೇಯಿ ಅಯೋಧ್ಯೆ ಭಾಷಣ

ವಾಜಪೇಯಿ ಈ ಭಾಷಣ ಮಾಡಿದ ಮರುದಿನ ಈ ದೇಶದ ಇತಿಹಾಸದಲ್ಲಿ ಬಹಳ ಇಂಪಾರ್ಟೆಂಟ್ ದಿನ. ಇಡೀ ದೇಶದ ರಾಜಕೀಯ, ಸಾಮಾಜಿಕ ಚಿತ್ರಣವನ್ನ ಕಂಪ್ಲೀಟಾಗಿ ಬದಲಿಸಿ ಹಾಕಿದ ದಿನ.

1992, ಡಿಸೆಂಬರ್ 6… 12.15ರ ಮೂಹೂರ್ತ!
ಪೂಜೆ ಮತ್ತು ಸಾಂಖೇತಿಕ ಕರಸೇವೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಕರಸೇವಕರು ಅಲ್ಲಿ ಸೇರಿದ್ರು. ಪೂಜೆಗೆ ಮಧ್ಯಾಹ್ನ 12.15ರ ಮೂಹೂರ್ತ ಫಿಕ್ಸ್ ಆಗಿತ್ತು. ನೋಡ ನೋಡುತ್ತಿದ್ದಂತೆ ಉದ್ರಿಕ್ತ ಕರಸೇವಕರು ವಿವಾದಿತ ಕಟ್ಟಡದ ಗುಂಬಜ್ ಏರಿಬಿಟ್ರು. ಕಬ್ಬಿಣದ ರಾಡು, ಕತ್ತಿ, ಗುದ್ದಲಿ ತಗೊಂಡು ಮೂರೂ ಗುಂಬಜ್ ಗಳನ್ನ ಕೆಡವಿ ಹಾಕಿದ್ರು. ಭದ್ರತಾ ಸಿಬ್ಬಂದಿ ದಿಕ್ಕಾಪಾಲಾಗಿದ್ರು. ತಾತ್ಕಾಲಿಕ ಮಂದಿರ ನಿರ್ಮಾಣ ಕಾರ್ಯ ಕೂಡಾ ಶುರುವಾಯ್ತು. ರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತನ ಮೂರ್ತಿಯನ್ನ ಕಟ್ಟಡದ ಸರೀ ಮಧ್ಯ ಭಾಗದಲ್ಲಿ ಇಡಲಾಯ್ತು. ಇಷ್ಟೆಲ್ಲಾ ಆಗ್ತಿದ್ರೂ ರಾಜ್ಯದ ಬಿಜೆಪಿ ಸರ್ಕಾರ ಮತ್ತು ಕೇಂದ್ರದ ನರಸಿಂಹ ರಾವ್ ರ ಕಾಂಗ್ರೆಸ್ ಸರ್ಕಾರ ಏನೂ ಮಾಡಲ್ಲ. ಕೆಲವರ ಪ್ರಕಾರ, ಪ್ರಧಾನಿ ನರಸಿಂಹ ರಾವ್ ಅಂತೂ ಅವತ್ತಿಡೀದಿನ, ಇವತ್ತು ನನ್ನನ್ನ ಯಾರೂ ಡಿಸ್ಟರ್ಬ್ ಮಾಡಬೇಡಿ ಅಂತಾ ತಾಕೀತು ಮಾಡಿ ತಮ್ಮ ಮನೆಯಲ್ಲೇ ತಂಗಿದ್ರಂತೆ. ಬಾಬ್ರಿ ಮಸೀದಿ ಧ್ವಂಸ ಮುಗಿದಮೇಲೆನೆ ಉತ್ತರ ಪ್ರದೇಶ ಸರ್ಕಾರವನ್ನ ವಜಾಗೊಳಿಸಿ ರಾಷ್ಟ್ರ ಪತಿ ಆಡಳಿತ ಹೇರುವ ನಿರ್ಧಾರಕ್ಕೆ ಅವ್ರು ಸೈನ್ ಹಾಕೋದು.

ಈ ರೀತಿ, ಬಾಬ್ರಿ ಮಸೀದಿ ಧ್ವಂಸ ಆಗುತ್ತೆ. ರಾಮ ಮಂದಿರ ಚಳುವಳಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ವಾಜಪೇಯಿ ಪ್ರಧಾನಿಯೂ ಆಗ್ತಾರೆ. ಆದ್ರೆ, ಮೈತ್ರಿಕೂಟದ ಸರ್ಕಾರವಾದ ಕಾರಣ ರಾಮಮಂದಿರ ನಿರ್ಮಾಣ ಆಗೋದೇ ಇಲ್ಲ. ಈಗ ಸಂಪೂರ್ಣ ಬಹುಮತದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಆದ್ರೆ ಈ ವಿಚಾರ ಸುಪ್ರೀಂಕೋರ್ಟ್​ ಮೂಲಕವೇ ಇತ್ಯರ್ಥವಾಗಲಿ ಅನ್ನೋದು ಮೋದಿ ಸರ್ಕಾರದ ನಿರ್ಧಾರವಾಗಿದೆ. ಈ ನಡುವೆ ಸುಪ್ರೀಂಕೋರ್ಟ್​ ಕೂಡ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ಹೀಗಾಗಿ ದೇಶದಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಈಗ ಮತ್ತೆ ಫುಲ್ ಗರಮ್ ಗರಮ್ ಆಗಿ ಕುದೀತಾ ಇದೆ.

Contact Us for Advertisement

Leave a Reply