ಕಾವೇರಿದ ಒಳಮೀಸಲಾತಿ ಜಗಳ, ಮಾಜಿ ಸಿಎಂ ಯಡಿಯೂರಪ್ಪ ಮನೆ ಮೇಲೆ ಕಲ್ಲೆಸೆದು ಪ್ರತಿಭಟನೆ!

masthmagaa.com:

ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಮೀಸಲಾತಿ ಜ್ವಾಲೆ ಧಗಧಗಿಸ್ತಾ ಇದೆ. ಇದೀಗ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಕುರಿತು ನ್ಯಾಯಮೂರ್ತಿ ಸದಾಶಿವ ವರದಿಯನ್ನ ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಒಳಮೀಸಲಾತಿಗೆ ಶಿಫಾರಸ್ಸು ಮಾಡಬಾರದು ಅಂತ ಶಿಕಾರಿಪುರದಲ್ಲಿ ಬಂಜಾರ ಸಮುದಾಯದವ್ರು ಪ್ರತಿಭಟನೆ ನಡೆಸಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪನವ್ರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯಡಿಯೂರಪ್ಪರ ಮನೆಗೆ ಮುತ್ತಿಗೆ ಹಾಕೋಕೆ ಪ್ರಯತ್ನಿಸಿದ್ದು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಇದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಉದ್ರಿಕ್ತಗೊಂಡ ಪ್ರತಿಭಟನಾಕಾರರು ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು ಶಿಕಾರಿಪುರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇತ್ತ ಘಟನೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್‌ ಕೈವಾಡ ಇದೆ. ಶಿವಮೊಗ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಜೊತೆಗೆ ನಾವು ಸದಾಶಿವ ವರದಿಯಂತೆ ಮೀಸಲಾತಿ ಅನುಷ್ಠಾನ ಮಾಡಿಲ್ಲ. ನಮ್ಮ ಸಚಿವ ಸಂಪುಟ ತೀರ್ಮಾನದಂತೆ ಮಾಡಿದ್ದೇವೆ ಅಂತ ಬೊಮ್ಮಾಯಿ ಹೇಳಿದ್ದಾರೆ. ಈ ಕಡೆ ಬಿಜೆಪಿ ನಾಯಕ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯಿಸಿ, ಸದಾಶಿವ ಆಯೋಗದ ವರದಿ ಸಿದ್ಧವಾಗಿ 25 ವರ್ಷ ಕಳೆದು ಧೂಳು ಹಿಡಿದಿತ್ತು. ಸಿಎಂ ಬೊಮ್ಮಾಯಿ ಧೈರ್ಯದಿಂದ ಅದರ ಅನುಷ್ಠಾನಕ್ಕೆ ಹೊರಟಿದ್ದಾರೆ. ಮೀಸಲಾತಿ ಕೊಡಬಾರದು ಅಂತ ಈ ಹಿಂದಿನ ಸರ್ಕಾರಗಳಿಗೆ ಯಾರಾದರೂ ಹೇಳಿದ್ದಾರಾ ಅಂತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಿರುದ್ದ ತೀವ್ರ ವಾಗ್ದಾಳಿ ಮಾಡಿದ್ದಾರೆ. ಇನ್ನೊಂದ್‌ ಕಡೆ ಮುಸ್ಲಿಂರಿಗೆ ಇದ್ದ 2B ಮೀಸಲಾತಿಯನ್ನ ರದ್ದುಗೊಳಿಸಿರುವ ಸರ್ಕಾರದ ನಿರ್ಧಾರವನ್ನ ವಿರೋಧಿಸಿ ಕೊಪ್ಪಳದಲ್ಲಿಯೂ ಭಾರಿ ಪ್ರತಿಭಟನೆ ನಡೆಸಲಾಗಿದೆ. ವಿವಿಧ ಪಕ್ಷಗಳಿಗೆ ಸೇರಿದ ಸಾವಿರಾರು ಮುಸ್ಲಿಂ ಸಮುದಾಯದ ಮುಖಂಡರು ಭಾಗಿಯಾಗಿದ್ದು, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದ್ದಾರೆ.

-masthmagaa.com

Contact Us for Advertisement

Leave a Reply