masthmagaa.com:

ಭಾರತ್‌ ಬಯೋಟೆಕ್‌ ಕಂಪನಿಯು ಐಸಿಎಂ‌ಆರ್‌ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್​’ ಲಸಿಕೆ 2021ರ ಜೂನ್‌ ವೇಳೆಗೆ ಸಿಗಲಿದೆ ಅಂತ ಭಾರತ್ ಬಯೋಟೆಕ್ ಕಂಪನಿಯ ಕಾರ್ಯನಿರ್ವಾಕ ನಿರ್ದೇಶಕ ಸಾಯಿ ಪ್ರಸಾದ್ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.  ಮೊನ್ನೆಯಷ್ಟೇ ‘ಕೋವಾಕ್ಸಿನ್‌ʼ ಲಸಿಕೆಯ 3ನೇ ಹಂತದ ಮಾನವ ಪ್ರಯೋಗಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿತ್ತು. 12ರಿಂದ 14 ರಾಜ್ಯಗಳ ಸುಮಾರು 20,000ಕ್ಕೂ ಹೆಚ್ಚು ಸ್ವಯಂಸೇವಕರ ಮೇಲೆ ಈ ಲಸಿಕೆಯ ಕೊನೆಯ ಹಂತದ ಮಾನವ ಪ್ರಯೋಗ ನಡೆಯಲಿದೆ.

‘ನಾವು ಲಸಿಕೆಯ ಮೂರೂ ಹಂತಗಳ ಪ್ರಯೋಗಗಳನ್ನ ಸಂಪೂರ್ಣವಾಗಿ ಮಾಡಲು ಬದ್ಧರಾಗಿದ್ದೇವೆ. ಆದ್ರೆ ಎಮರ್ಜೆನ್ಸಿ ಯೂಸ್​ ಅಥವಾ ತುರ್ತುಪರಿಸ್ಥಿತಿ ಬಳಕೆ ಬಗ್ಗೆಯೂ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದು’ ಅಂತ ಸಾಯಿ ಪ್ರಸಾದ್ ಹೇಳಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ವರ್ಷ ಆರಂಭದಲ್ಲಿ ಕೊರೋನಾಗೆ ಲಸಿಕೆ ಸಿಗುತ್ತೆ ಅನ್ನೋ ನಿರೀಕ್ಷೆ ಇಟ್ಟುಕೊಂಡಿದೆ. ಇಂತಹ ಸಂದರ್ಭದಲ್ಲೇ ಭಾರತ್ ಬಯೋಟೆಕ್ ಕಂಪನಿ ಜೂನ್ ವೇಳೆಗೆ ಲಸಿಕೆ ಸಿಗುತ್ತೆ ಅಂತ ಹೇಳಿರೋದು ಗಮನಾರ್ಹ.

ಅಂದ್ಹಾಗೆ ಈ ಲಸಿಕೆಯನ್ನು ಹೈದ್ರಾಬಾದ್​ ಮೂಲದ ಭಾರತ್ ಬಯೋಟೆಕ್ ಕಂಪನಿ ಜೊತೆಗೆ ಐಸಿಎಂಆರ್​ನ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿ ಅಭಿವೃದ್ಧಿಪಡಿಸಿದೆ. ಇದು ನಿಷ್ಕ್ರಿಯಗೊಳಿಸಿದ ಲಸಿಕೆಯಾಗಿದ್ದು, ಕೊರೋನಾ ವೈರಸ್‌ನ ‘ಕೊಲ್ಲಲ್ಪಟ್ಟ ಆವೃತ್ತಿ’ಯನ್ನ ದೇಹಕ್ಕೆ ಚುಚ್ಚಲಾಗುತ್ತದೆ. ಇದರಿಂದ ವೈರಾಣು ವಿರುದ್ಧ ದೇಹದಲ್ಲಿ ಪ್ರತಿಕಾಯಗಳು ಅಥವಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ಮತ್ತೊಂದು ಕಡೆ ಸೀರಂ ಇನ್​​ಸ್ಟಿಟ್ಯೂಟ್​ ಆಫ್ ಇಂಡಿಯಾ ಕೂಡ ಆಕ್ಸ್​ಫರ್ಡ್​-ಅಸ್ಟ್ರಾಝೆನೆಕಾ​ದ ‘ಕೋವಿಶೀಲ್ಡ್​’ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗಕ್ಕೆ ಸ್ವಯಂಸೇವಕರನ್ನು ನೇಮಿಸಿಕೊಳ್ಳುತ್ತಿದೆ.

-masthmagaa.com

Contact Us for Advertisement

Leave a Reply