masthmagaa.com:

ಟಿಆರ್​ಪಿ ತಿರುಚಿದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿರುವ ರಿಪಬ್ಲಿಕ್​ ಟಿವಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಬಾಲಿವುಡ್​ ವಿರುದ್ಧ ಬೇಜವಾಬ್ದಾರಿಯುತ, ಅವಹೇಳನಕಾರಿ ಮತ್ತು ಮಾನಹಾನಿ ಮಾಡುವಂತಹ ಟೀಕೆ-ಟಿಪ್ಪಣಿಗಳನ್ನ ಮಾಡದಂತೆ ಕೆಲ ಮಾಧ್ಯಮಗಳಿಗೆ ತಡೆ ನೀಡಬೇಕು ಅಂತ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ರಿಪಬ್ಲಿಕ್​ ಟಿವಿ, ಅರ್ನಬ್ ಗೋಸ್ವಾಮಿ, ಪ್ರದೀಪ್ ಭಂಡಾರಿ, ಟೈಮ್ಸ್ ನೌ, ಟೈಮ್ಸ್ ನೌನ ನಿರೂಪಕರಾದ ರಾಹುಲ್ ಶಿವಶಂಕರ್ ಮತ್ತು ನಾವಿಕಾ ಕುಮಾರ್ ಸೇರಿದಂತೆ ಹಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಬಾಲಿವುಡ್​ನ 4 ಅಸೋಸಿಯೇಷನ್ ಮತ್ತು 34 ಚಿತ್ರ ನಿರ್ಮಾಪಕರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಆಮಿರ್ ಖಾನ್ ಪ್ರೊಡಕ್ಷನ್ಸ್, ಶಾರುಖ್ ಖಾನ್ ಅವರ ರೆಡ್​ ಚಿಲ್ಲೀಸ್, ಅಜಯ್​ ದೇವ್ಗನ್ ಫಿಲ್ಮ್ಸ್​, ಧರ್ಮಾ ಪ್ರೊಡಕ್ಷನ್ಸ್, ರೋಹಿತ್ ಶೆಟ್ಟಿ ಪ್ರೊಡಕ್ಷನ್ಸ್​ ಕೂಡ ಸೇರಿದೆ.

ಬಾಲಿವುಡ್​ ನಟ ಸುಶಾಂತ್ ಸಿಂಗ್​ ರಜಪೂತ್​ ಸಾವು ಮತ್ತು ಬಾಲಿವುಡ್​ ಡ್ರಗ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್​ ಟಿವಿಯ ಅರ್ನಬ್ ಗೋಸ್ವಾಮಿ ಸೇರಿದಂತೆ ಹಲವು ಮಾಧ್ಯಮಗಳು ಬಾಲಿವುಡ್​ ವಿರುದ್ಧ ಹಲವು ಆರೋಪಗಳನ್ನ ಮಾಡಿದ್ದವು. ಮಹಾರಾಷ್ಟ್ರ ಸರ್ಕಾರ, ಮುಂಬೈ ಪೊಲೀಸರ ಕಾರ್ಯವೈಖರಿ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಇದೀಗ ಇವರೆಲ್ಲರ ವಿರುದ್ಧ ದೆಹಲಿ ಹೈಕೋರ್ಟ್​ ಮೆಟ್ಟಿಲೇರಲಾಗಿದೆ.

ಮತ್ತೊಂದುಕಡೆ ಅಕ್ಟೋಬರ್​ 7ರಂದು ಜೈಲಿನಿಂದ ಬಿಡುಗಡೆಯಾಗಿರುವ ನಟಿ ರಿಯಾ ಚಕ್ರಬರ್ತಿ ಹಲವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಇದರಲ್ಲಿ ರಿಯಾ ಅವರ ನೆರೆಮನೆಯವರು ಕೂಡ ಸೇರಿದ್ದಾರೆ. ಯಾಕಂದ್ರೆ ಜೂನ್​ 13ರಂದು (ಸುಶಾಂತ್ ಸಾವು ಸಂಭವಿಸಿದ ಒಂದು ದಿನ ಮುನ್ನ) ರಿಯಾ ಮತ್ತು ಸುಶಾಂತ್​ ಅವರನ್ನು ಒಟ್ಟಿಗೆ ನೋಡಿದ್ದೆ ಅಂತ ರಿಯಾಳ ‘ಪ್ರಿಮ್​ ರೋಸ್’ ಅಪಾರ್ಟ್​ಮೆಂಟ್​ನ ಪಕ್ಕದ ಮನೆಯವರು ಹೇಳಿದ್ದರು. ಆದ್ರೀಗ ತಮ್ಮ ಹೇಳಿಕೆಯನ್ನ ಸಿಬಿಐ ಮುಂದೆ ಸಮರ್ಥಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ ಅಂತ ವರದಿಯಾಗಿದೆ. ಇಂತಹವರ ವಿರುದ್ಧ ಕಾನೂನು ಸಮರ ಸಾರಲು ರಿಯಾ  ನಿರ್ಧರಿಸಿದ್ದಾರೆ.

-masthmagaa.com

Contact Us for Advertisement

Leave a Reply