masthmagaa.com:

ಸೋಷಿಯಲ್ ಮೀಡಿಯಾ, ಒಟಿಟಿ ಪ್ಲಾಟ್​ಫಾರ್ಮ್​, ಡಿಜಿಟಲ್ ಕಂಟೆಂಟ್​ಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿ ಇದುವರೆಗೆ ಯಾವುದೇ ಪ್ರತ್ಯೇಕ ನಿಯಂತ್ರಣ ವ್ಯವಸ್ಥೆ ಇರಲಿಲ್ಲ. ಆದ್ರೀಗ ಅದು ಜಾರಿಗೆ ಬಂದಿದೆ. ಸೋಷಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಂಟೆಂಟ್​ಗಳನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದಕ್ಕೆ The new Information Technology (Guidelines for Intermediaries and Digital Media Ethics Code) Rules, 2021 ಅಂತ ಹೆಸರಿಡಲಾಗಿದೆ. ಇದರಲ್ಲಿ ಸೋಷಿಯಲ್ ಮೀಡಿಯಾ, ಒಟಿಟಿ ಪ್ಲಾಟ್​​ಫಾರ್ಮ್​ ಮತ್ತು ಡಿಜಿಟಲ್​ ನ್ಯೂಸ್​ ಕಂಟೆಂಟ್​ಗಳನ್ನ ಕೇಂದ್ರ ಸರ್ಕಾರ ಹೇಗೆ ರೆಗ್ಯುಲೇಟ್ ಮಾಡಲಿದೆ ಅನ್ನೋದನ್ನ ಇದೇ ಮೊದಲ ಬಾರಿಗೆ ಹೇಳಲಾಗಿದೆ. ಈ ನಿಯಮಗಳು ಜಾರಿಗೆ ಬಂದ್ರೆ ಫೇಸ್​ಬುಕ್, ಟ್ವಿಟ್ಟರ್, ಇನ್​ಸ್ಟಾಗ್ರಾಮ್​ನಂತಹ ಸಾಮಾಜಿಕ ಜಾಲತಾಣ.. ಅಮೇಜಾನ್ ಪ್ರೈಂ ವಿಡಿಯೋ, ನೆಟ್​​ಫ್ಲಿಕ್ಸ್​ನಂತಹ ಒಟಿಟಿ ಪ್ಲಾಟ್​ಫಾರ್ಮ್​​.. ಹಾಗೂ ಡಿಜಿಟಲ್​ ರೂಪದ ಎಲ್ಲಾ ಕಂಟೆಂಟ್​ಗಳ ಮೇಲೆ ನಿಯಂತ್ರಣ ಬೀಳಲಿದೆ. ಹಾಗಿದ್ರೆ ಏನಿದು ನಿಯಮಗಳು? ಅವು ಹೇಗಿವೆ? ಯಾವಾಗಿಂದ ಜಾರಿಗೆ ಬರುತ್ತವೆ? ಅನ್ನೋದಕ್ಕೆ ಉತ್ತರ ಈ ಕೆಳಗಿನಂತಿದೆ ನೋಡಿ.

ಸೋಷಿಯಲ್​ ಮೀಡಿಯಾ ನಿಯಮಗಳು:

– ಸೋಷಿಯಲ್ ಮೀಡಿಯಾ ಬಳಕೆದಾರರ ಘನತೆಗೆ ಧಕ್ಕೆ ತರುವಂತಹ ದೂರುಗಳು ಇದ್ದಲ್ಲಿ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಂದ ದೂರುಗಳು ಬಂದಲ್ಲಿ – ವ್ಯಕ್ತಿಗಳ ಖಾಸಗಿ ಭಾಗಗಳನ್ನ ತೋರಿಸುವ ಅಥವಾ ನಗ್ನತೆ ಅಥವಾ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ ಕಂಟೆಂಟ್​ಗಳನ್ನ ದೂರು ನೀಡಿದ 24 ಗಂಟೆಗಳ ಒಳಗಾಗಿ ತೆಗೆದು ಹಾಕಬೇಕು.

– ಸೋಷಿಯಲ್​ ಮೀಡಿಯಾ ಬಳಕೆದಾರರು ಅಥವಾ ಸಂತ್ರಸ್ತರಿಂದ ದೂರುಗಳನ್ನ ಸ್ವೀಕರಿಸಲು ಮತ್ತು ಅವುಗಳನ್ನ ವಿಲೇವಾರಿ ಮಾಡುವಂತಹ ವ್ಯವಸ್ಥೆ ಇರಬೇಕು. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳು ಒಬ್ಬ ಕುಂದುಕೊರತೆ ಅಧಿಕಾರಿಯನ್ನ ನೇಮಿಸಬೇಕು. ಈತ ದೂರು ಬಂದ 24 ಗಂಟೆ ಒಳಗಾಗಿ ದೂರು ಬಂದಿರೋದನ್ನ ದೃಢೀಕರಿಸಿ, 15 ದಿನಗಳ ಒಳಗೆ ಅದನ್ನ ಬಗೆಹರಿಸಬೇಕು.

– ಬಳಕೆದಾರರು ತಮ್ಮ ಅಕೌಂಟ್​ಗಳನ್ನ ವೇರಿಫೈ ಮಾಡಿಕೊಳ್ಳಲು ಸ್ವಯಂಪ್ರೇರಿತರಾಗಿ ಮುಂದಾದ್ರೆ ಅದಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಹೀಗೆ ವೆರಿಫೈ ಆದ ಅಕೌಂಟ್​ಗಳಿಗೆ ಎಲ್ಲರಿಗೂ ಕಾಣುವಂತಹ ಮಾರ್ಕ್ ಹಾಕಬೇಕು.

– ಒಂದ್ವೇಳೆ ಸಾಮಾಜಿಕ ಜಾಲತಾಣಗಳು ತಾವಾಗಿಯೇ ಕೆಲವೊಂದು ಕಂಟೆಂಟ್​ಗಳನ್ನ ರಿಮೂವ್ ಮಾಡಿದ್ರೆ ಅಥವಾ ಡಿಸೇಬಲ್ ಮಾಡಿದ್ರೆ ಅದಕ್ಕೆ ಸಂಬಂಧಿಸಿದಂತೆ ಬಳಕೆದಾರರಿಗೆ ಮೊದಲೇ ಮಾಹಿತಿ ನೀಡಬೇಕು. ಜೊತೆಗೆ ಕಂಟೆಂಟ್ ರಿಮೂವ್ ಮಾಡಲು ಕಾರಣವೇನು ಅನ್ನೋ ಬಗ್ಗೆ ನೋಟಿಸ್​ ಕೊಡಬೇಕು. ರಿಮೂವ್ ಮಾಡಿದ ಕಂಟೆಂಟ್​ ಬಗ್ಗೆ ಫೈಟ್ ಮಾಡಲು ಬಳಕೆದಾರರಿಗೂ ಸಮಾನ ಅವಕಾಶ ಕೊಡಬೇಕು.

– ಭಾರತದ ಸಾರ್ವಭೌಮತ್ವ, ಸಮಗ್ರತೆ, ಸಾಮಾಜಿಕ ಸುವ್ಯವಸ್ಥೆ, ಅಂತಾರಾಷ್ಟ್ರೀಯ ಸಂಬಂಧಕ್ಕೆ ಧಕ್ಕೆ ತರುವಂತಹ ಯಾವುದಾದ್ರೂ ಕಾನೂನುಬಾಹಿರ ಕಂಟೆಂಟ್​ಗಳನ್ನ ಹಾಕಬಾರದು ಅಥವಾ ಪಬ್ಲಿಷ್ ಮಾಡಬಾರದು ಅಂತ ಕೋರ್ಟ್​, ಸರ್ಕಾರ, ಸರ್ಕಾರಿ ಏಜೆನ್ಸಿ ಹೇಳಿದ್ರೆ ಅದನ್ನ ಹಾಕಬಾರದು.

– ಬಳಕೆದಾರರ ಸಂಖ್ಯೆಯ ಆಧಾರದ ಮೇಲೆ ಸಣ್ಣ ಮತ್ತು ದೊಡ್ಡ ಸೋಷಿಯಲ್ ಮೀಡಿಯಾ ಅಂತ ವಿಂಗಡಿಸಲಾಗುತ್ತೆ. ಎಷ್ಟು ಬಳಕೆದಾರರಿದ್ರೆ ಸಣ್ಣ ಅಥವಾ ದೊಡ್ಡ ಸಾಮಾಜಿಕ ಜಾಲತಾಣ ಅಂತ ಗುರುತಿಸಲಾಗುತ್ತೆ ಅನ್ನೋದನ್ನ ಕೇಂದ್ರ ಸರ್ಕಾರವೇ ನಿರ್ಧರಿಸುತ್ತೆ. ದೊಡ್ಡ ಸೋಷಿಯಲ್ ಮೀಡಿಯಾಗಳು ಹೆಚ್ಚುವರಿಯಾಗಿ ಕೆಲವೊಂದು ನಿಯಮಗಳನ್ನ ಪಾಲಿಸಬೇಕು.

ದೊಡ್ಡ ಸೋಷಿಯಲ್ ಮೀಡಿಯಾಗಳು ಹೆಚ್ಚುವರಿಯಾಗಿ ಪಾಲಿಸಬೇಕಾದ ನಿಯಮಗಳು:

– ಈ ಸೋಷಿಯಲ್ ಮೀಡಿಯಾಗಳು ಓರ್ವ ಚೀಫ್ ಕಾಂಪ್ಲಿಯನ್ಸ್ ಆಫಿಸರ್ ಅನ್ನ ನೇಮಿಸಬೇಕು. ಭಾರತದ ಕಾಯ್ದೆ, ಕಾನೂನುಗಳನ್ನ ಪಾಲನೆ ಮಾಡುವ ಜವಾಬ್ದಾರಿ ಈತನ ಮೇಲಿರುತ್ತೆ. ಈತ ಭಾರತದಲ್ಲೇ ವಾಸವಿರಬೇಕು.

– ಸರ್ಕಾರಿ ಏಜೆನ್ಸಿಗಳ ಜೊತೆ ಸಮನ್ವಯ ಸಾಧಿಸಲು ಓರ್ವ 24×7 ನೋಡಲ್ ಕಾಂಟ್ಯಾಕ್ಟ್ ಪರ್ಸನ್ (ಸಂಪರ್ಕ ಅಧಿಕಾರಿ) ಅನ್ನ ನೇಮಿಸಬೇಕು. ​ಈತ ಭಾರತದಲ್ಲಿ ವಾಸವಿರಬೇಕು.

– ಬಳಕೆದಾರರ, ಸಂತ್ರಸ್ತರ ದೂರುಗಳಿಗೆ ಸಂಬಂಧಿಸಿದಂತೆ ಓರ್ವ ರೆಸಿಡೆಂಟ್​​ ಗ್ರೀವಿಯನ್ಸ್ ಆಫೀಸರ್ (ದೂರು ವಿಲೇವಾರಿ ಅಧಿಕಾರಿ) ನೇಮಿಸಬೇಕು. ಈತ ಭಾರತದಲ್ಲಿ ವಾಸವಿರಬೇಕು.

– ಬಂದಂತಹ ದೂರುಗಳು, ಅದಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮತ್ತು ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕಿದ ಕಂಟೆಂಟ್​ಗಳ ಬಗ್ಗೆ ಪ್ರತಿ ತಿಂಗಳು ವರದಿಯನ್ನ ಪ್ರಕಟಿಸಬೇಕು.

– ಪುಂಡಾಟಿಕೆ ಮಾಡುವಂತಹ ಯಾವುದೇ ಟ್ವೀಟ್ ಅಥವಾ ಮೆಸೇಜ್​ಗೆ ಸಂಬಂಧಿಸಿದಂತೆ ಕೋರ್ಟ್ ಅಥವಾ ಸರ್ಕಾರ ಮಾಹಿತಿ ಕೇಳಿದಾಗ ಸೋಷಿಯಲ್ ಮೀಡಿಯಾಗಳು ಆ ಟ್ವೀಟ್ ಅಥವಾ ಮೆಸೇಜ್​ನ ಫಸ್ಟ್ ಆರಿಜಿನೇಟರ್ ಅಥವಾ ಮೂಲ ಸೃಷ್ಟಿಕರ್ತನ ಬಗ್ಗೆ ಮಾಹಿತಿ ನೀಡಬೇಕು. ಟ್ವೀಟ್ ಅಥವಾ ಮೆಸೇಜ್​ಗಳು ದೇಶದ ಸಾರ್ವಭೌಮತ್ವ, ಸಮಗ್ರತೆ, ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಭಾರತದ ಅಂತಾರಾಷ್ಟ್ರೀಯ ಸಂಬಂಧಕ್ಕೆ ಧಕ್ಕೆ ತರುವಂತಿದ್ದರೆ.. ಅಥವಾ ಅತ್ಯಾಚಾರ, ಸಂಪೂರ್ಣ ನಗ್ನತೆಯ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಕಂಟೆಂಟ್, ಇತ್ಯಾದಿಗೆ ಸಂಬಂಧಿಸಿದ್ದಾಗಿದ್ದರೆ ಅಂತಹ ಸಂದರ್ಭದಲ್ಲಿ ಮಾತ್ರ ಟ್ವೀಟ್​ ಅಥವಾ ಮೆಸೇಜ್​ನ ಮೂಲ ಸೃಷ್ಟಿಕರ್ತನ ಬಗ್ಗೆ ಮಾಹಿತಿ ನೀಡಬೇಕು.

– ಸಾಮಾಜಿಕ ಜಾಲತಾಣಗಳು ಭಾರತದಲ್ಲಿ ಒಂದು ಸಂಪರ್ಕ ವಿಳಾಸವನ್ನ ಹೊಂದಿರಬೇಕು. ಈ ವಿಳಾಸವನ್ನ ತಮ್ಮ ವೆಬ್​ಸೈಟ್ ಅಥವಾ ಆ್ಯಪ್ ಅಥವಾ ಎರಡರಲ್ಲೂ ಪಬ್ಲಿಷ್ ಮಾಡಬೇಕು.

– ಈ ನಿಯಮಗಳು ಗೆಜೆಟ್​ನಲ್ಲಿ ಪ್ರಕಟವಾದ ದಿನದಿಂದ ಜಾರಿಗೆ ಬರಲಿವೆ. ಇದಾಗಿ 3 ತಿಂಗಳ ನಂತರ ದೊಡ್ಡ ಸೋಷಿಯಲ್ ಮೀಡಿಯಾಗಳು ಹೆಚ್ಚುವರಿಯಾಗಿ ಪಾಲಿಸಬೇಕಾದ ನಿಯಮಗಳು ಜಾರಿಗೆ ಬರುತ್ತೆ.

ಒಟಿಟಿ ಪ್ಲಾಟ್​ಫಾರ್ಮ್, ಆನ್​ಲೈನ್​ ನ್ಯೂಸ್​, ಡಿಜಿಟಲ್​ ಕಂಟೆಂಟ್ ನಿಯಮಗಳು:

ಒಟಿಟಿ ಪ್ಲಾಟ್​ಫಾರ್ಮ್​​, ಡಿಜಿಟಲ್ ಮೀಡಿಯಾ, ನ್ಯೂಸ್​ ಪಬ್ಲಿಷರ್​ಗಳಿಗೆ ಸಂಬಂಧಿಸಿದಂತೆ ಸ್ವಯಂ ನಿಯಂತ್ರಣ ವ್ಯವಸ್ಥೆ, ಕೋಡ್ ಆಫ್ ಎಥಿಕ್ಸ್ ಹಾಗೂ 3 ಹಂತದ ದೂರು ವಿಲೇವಾರಿ ವ್ಯವಸ್ಥೆಯನ್ನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

– ಒಟಿಟಿ ಪ್ಲಾಟ್​ಫಾರ್ಮ್​​,​ ಆನ್‌ಲೈನ್ ನ್ಯೂಸ್​, ಡಿಜಿಟಲ್​ ಮೀಡಿಯಾ ಎಂಟಿಟಿಗಳು ಮಾರ್ಗಸೂಚಿಯಲ್ಲಿರೋ ಕೋಡ್​ ಆಫ್ ಎಥಿಕ್ಸ್ ಪಾಲಿಸಬೇಕು.

– ಒಟಿಟಿ ಪ್ಲಾಟ್​ಫಾರ್ಮ್​​ಗಳನ್ನ ಆನ್​ಲೈನ್​​ ಕಂಟೆಂಟ್​ಗಳ ಪಬ್ಲಿಷರ್ ಅಂತ ಪರಿಗಣಿಸಲಾಗುತ್ತೆ. ಈ ಪಬ್ಲಿಷರ್​ಗಳು ಕಂಟೆಂಟ್​ಗಳನ್ನ ವಯಸ್ಸಿನ ಆಧಾರದಲ್ಲಿ 5 ವಿಭಾಗಗಳಾಗಿ ವಿಂಗಡಿಸಬೇಕು – ಯುನಿವರ್ಸಲ್ (U), 7 ವರ್ಷಕ್ಕಿಂತ ಚಿಕ್ಕವರು, 13 ವರ್ಷಕ್ಕಿಂತ ಚಿಕ್ಕವರು, 16 ವರ್ಷಕ್ಕಿಂತ ಚಿಕ್ಕವರು ಮತ್ತು ವಯಸ್ಕರು (A) ಅಂತ. 13 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಕಂಟೆಂಟ್​ಗಳಿಗೆ ಪೇರೆಂಟಲ್ ಲಾಕ್ ವ್ಯವಸ್ಥೆ ಇರಬೇಕು. ವಯಸ್ಕರ (A) ಕೆಟಗರಿಯ ಕಂಟೆಂಟ್​ಗಳನ್ನ ನೋಡಲು ಏಜ್​ ವೆರಿಫಿಕೇಷನ್ ವ್ಯವಸ್ಥೆ ಇರಬೇಕು. ಅಂದ್ರೆ ಈ ಕಂಟೆಂಟ್​ ನೋಡೋರು ವಯಸ್ಕರು ಅಂತ ವೆರಿಫೈ ಮಾಡುವ ವ್ಯವಸ್ಥೆ ಇರಬೇಕು. ಪ್ರತಿಯೊಂದು ಕಂಟೆಂಟ್ ಅಥವಾ ಪ್ರೋಗ್ರಾಂ ಮೇಲೂ ನೇಚರ್ ಆಫ್ ಕಂಟೆಂಟ್​ ಅನ್ನ ಡಿಸ್​ಪ್ಲೇ ಮಾಡಬೇಕು. ಹಾಗೂ ಕಂಟೆಂಟ್​ಗಳು ವೀಕ್ಷಕರ ವಿವೇಚನೆಗೆ ಬಿಟ್ಟಿದ್ದು ಅನ್ನೋ ಸಂದೇಶವನ್ನ ಪ್ರದರ್ಶಿಸಬೇಕು.

– ಡಿಜಿಟಲ್​ ನ್ಯೂಸ್​ ಮೀಡಿಯಾಗಳು ಪ್ರೆಸ್​ ಕೌನ್ಸಿಲ್ ಆಫ್ ಇಂಡಿಯಾದ ಮೌಲ್ಯಯುತ ಪತ್ರಿಕೋದ್ಯಮದ ನಿಯಮಗಳನ್ನ ಅನುಸರಿಸಬೇಕು. ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್​ ರೆಗ್ಯುಲೇಷನ್ ಆ್ಯಕ್ಟ್​ ಅನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು.

– ದೂರುಗಳನ್ನ ವಿಲೇವಾರಿ ಮಾಡಲು 3 ಹಂತದ ವ್ಯವಸ್ಥೆ –

1. ಒಟಿಟಿ ಪ್ಲಾಟ್​​ಫಾರ್ಮ್​ ಅಥವಾ ಪಬ್ಲಿಷರ್​ಗಳ ಸ್ವಯಂ ನಿಯಂತ್ರಣ ವ್ಯವಸ್ಥೆ: ಇಲ್ಲಿ ದೂರುಗಳಿಗೆ ಸಂಬಂಧಿಸಿದಂತೆ ಓರ್ವ ಗ್ರೀವಿಯನ್ಸ್ ರೀಡ್ರೆಸ್ಸಲ್​ ಅಧಿಕಾರಿಯನ್ನ ಪಬ್ಲಿಷರ್ ನೇಮಿಸಬೇಕು. ಈತ ಭಾರತದಲ್ಲೇ ಇರಬೇಕು. ದೂರು ಬಂದ 15 ದಿನಗಳ ಒಳಗಾಗಿ ಅದರ ಬಗ್ಗೆ ಈ ಅಧಿಕಾರಿ ನಿರ್ಧಾರ ಕೈಗೊಳ್ಳಬೇಕು.

2. ಎಲ್ಲಾ ಪಬ್ಲಿಷರ್​ಗಳ ಸ್ವಯಂ ನಿಯಂತ್ರಕ ಸಂಸ್ಥೆ: ಒಟಿಟಿ ಪ್ಲಾಟ್​​ಫಾರ್ಮ್​​ಗಳನ್ನ ನಿಯಂತ್ರಿಸುವ ಸಂಸ್ಥೆ ಇದಾಗಿದೆ. ಸುಪ್ರೀಂಕೋರ್ಟ್​ ಅಥವಾ ಹೈಕೋರ್ಟ್​ನ ನಿವೃತ್ತ ಜಡ್ಜ್​ ಅಥವಾ ಪ್ರಮುಖ ವ್ಯಕ್ತಿ ಸ್ವತಂತ್ರವಾಗಿ ಈ ಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿ ಗರಿಷ್ಠ 6 ಸದಸ್ಯರಿರುತ್ತಾರೆ. ಈ ಸಂಸ್ಥೆಯು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯಲ್ಲಿ ನೋಂದಣಿಯಾಗಿರಬೇಕು. ಒಟಿಟಿ ಪ್ಲಾಟ್​ಫಾರ್ಮ್​​ ಅಥವಾ ಪಬ್ಲಿಷರ್​ 15 ದಿನದ ಒಳಗೆ ಬಗೆಹರಿಸಿಕೊಳ್ಳಲಾಗದ ದೂರುಗಳನ್ನ ಈ ಸಂಸ್ಥೆ ಬಗೆಹರಿಸುತ್ತೆ.

3. ನಿಗಾ ವ್ಯವಸ್ಥೆ: ಈ ನಿಗಾ ವ್ಯವಸ್ಥೆಯನ್ನ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ರಚನೆ ಮಾಡುತ್ತೆ. ಎಲ್ಲಾ ಪಬ್ಲಿಷರ್​ಗಳ ಸ್ವಯಂ ನಿಯಂತ್ರಕ ಸಂಸ್ಥೆಯ ಕೋಡ್​ ಆಫ್ ಪ್ರಾಕ್ಟಿಸಸ್ ಅಥವಾ ಕಾರ್ಯಾಚರಣಾ ನಿಯಮಗಳನ್ನ ಈ ನಿಗಾ ವ್ಯವಸ್ಥೆ ನಿರ್ಧರಿಸುತ್ತೆ. ದೂರುಗಳನ್ನ ಆಲಿಸಲು ಅಂತರ್​ ಇಲಾಖಾ ಸಮಿತಿ ರಚಿಸಲು ಈ ವ್ಯವಸ್ಥೆಯಲ್ಲಿಅವಕಾಶವಿದೆ.

-masthmagaa.com

Contact Us for Advertisement

Leave a Reply