ಬಿಜೆಪಿಯಿಂದ ಬಿಎಸ್‌ವೈಗೆ ಬಿಗ್‌ ಗಿಫ್ಟ್‌! ಪಕ್ಷದ ಹೈಕಮಾಂಡ್‌ ಸ್ಥಾನದಲ್ಲಿ ರಾಜಾಹುಲಿ

masthmagaa.com:

ಬಿಜೆಪಿಯಲ್ಲಿ ಯಡಿಯೂರಪ್ಪರ ಯುಗ ಮುಗೀತು ಅನ್ನೋ ಹೇಳಿಕೆಗಳು ಊಹಾಪೋಹಾಗಳು ಮೆಲ್ಲಗೆ ಕಾವು ಪಡೀತಿರೋ ಹೊತ್ತಲ್ಲೇ ಇದೀಗ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪರನ್ನ ಮತ್ತೆ ರಾಷ್ಟ್ರರಾಜಕಾರಣಕ್ಕೆ ಎಳೆದು ತಂದಿದೆ. ಬಿಜೆಪಿ ಸಂಸದೀಯ ಮಂಡಳಿಗೆ ಮಾಜಿ ಸಿಎಂ ಬಿಎಸ್‌ವೈರನ್ನ ಸೇರ್ಪಡೆ ಮಾಡಲಾಗಿದೆ. ಇವರ ಜೊತೆಯಲ್ಲೇ ಅಸ್ಸಾಂ ಮಾಜಿ ಸಿಎಂ ಸರ್ಬಾನಂದ ಸೋನೋವಾಲ್ ಹಾಗೂ ಬಿಜೆಪಿ OBC ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಹೈದರಾಬಾದ್ ಮೂಲದ ಕೆ. ಲಕ್ಷ್ಮಣ್ ಅವರನ್ನೂ ಈ ಅತ್ಯುನ್ನತ ಸಮಿತಿಗೆ ಸೇರಿಸಿಕೊಳ್ಳಲಾಗಿದೆ. ಅಂದ್ಹಾಗೆ ಈ ಬಿಜೆಪಿ ಸಂಸದೀಯ ಮಂಡಳಿ ಅನ್ನೋದು ಪಕ್ಷದ ರಿಯಲ್ ಪವರ್‌ ಸೆಂಟರ್‌ ಇದ್ದಾಗೆ. ಪಕ್ಷಕ್ಕೆ ಸಂಬಂಧಪಟ್ಟ ಯಾವುದೇ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಮಂಡಳಿಯಾಗಿರುತ್ತೆ. ಅಧ್ಯಕ್ಷರನ್ನೂ ಒಳಗೊಂಡಂತೆ 11 ಮಂದಿ ಸದಸ್ಯರು ಇರ್ತಾರೆ. ಇದಕ್ಕೆ ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಮುಖ್ಯಸ್ಥರಾಗಿದ್ದಾರೆ. ಪ್ರಧಾನಿ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್‌ ಸಂತೋಷ್‌ ಕೂಡಾ ಇದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಪರವಾಗಿ ಪಕ್ಷದ ದೈನಂದಿನ ನಿರ್ಧಾರಗಳನ್ನ ಕೈಗೊಳ್ಳುವ ಸಮಿತಿ ಇದಾಗಿರುತ್ತೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯೇ ಈ ಸಂಸದೀಯ ಮಂಡಳಿಯನ್ನು ರಚಿಸುತ್ತೆ. ಸಂಸದೀಯ ಹಾಗೂ ಶಾಸಕಾಂಗದ ಕಾರ್ಯವೈಖರಿ ಹೇಗೆ ಇರುತ್ತೆ..ಅನ್ನೋದನ್ನೆಲ್ಲಾ ಈ ಮಂಡಳಿ ಮಾನಿಟರ್‌ ಮಾಡ್ತಾ ಇರುತ್ತೆ. ರಾಷ್ಟ್ರೀಯ ಕಾರ್ಯಕಾರಿಣಿ ಅಡಿಯಲ್ಲಿ ಈ ಮಂಡಳಿ ಪಕ್ಷದ ಸಂಬಂಧ಼ಪಟ್ಟ ನಿರ್ಧಾರಗಳು, ಹಾಗೂ ಇನ್ನಿತರ ಮಾರ್ಗಸೂಚಿಯನ್ನು ರಚಿಸಿ ನಿರ್ದೇಶನ ಮಾಡೋ ಕೆಲಸ ಮಾಡ್ತಾ ಇರುತ್ತೆ. ಇನ್ನು ಇಂಟರಸ್ಟಿಂಗ್‌ ಸಂಗತಿ ಅಂದ್ರೆ ಬಿಜೆಪಿಯ ಒಂದು ಕಾಲದ ಮೋಸ್ಟ್‌ ಪವರ್‌ ಫುಲ್‌ ಪರ್ಸನ್‌ಗಳಲ್ಲಿ ಒಬ್ಬರು ಅಂತ ಹೇಳಲಾಗ್ತಿದ್ದ, ಕೇಂದ್ರ ಸರ್ಕಾರದಲ್ಲಿ ಸಚಿವರು ಕೂಡ ಆಗಿರೋ ನಿತಿನ್‌ ಗಡ್ಕರಿಯನ್ನ ಈ ಸಮಿತಿಯಿಂದ ಕೈಬಿಡಲಾಗಿದೆ. ಇದ್ರ ಜೊತೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ರನ್ನ ಕೂಡ ಈ ಸಮಿತಿಯಿಂದ ಹೊರಗಿಡಲಾಗಿದೆ. ಇನ್ನು ಯಡಿಯೂರಪ್ಪರನ್ನ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೂ ಸೇರಿಸಿಕೊಳ್ಳಲಾಗಿದೆ. ಈ ಚುನಾವಣಾ ಸಮಿತಿ ಏನ್ಮಾಡುತ್ತೆ ಅಂದ್ರೆ ಲೋಕಸಭಾ, ವಿಧಾನಸಭಾ ಚುನಾವಣಾ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸೋದು ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟ ಪ್ರಮುಖ ಹಾಗೂ ನಿರ್ಣಾಯಕ ಕ್ರಮಗಳನ್ನ ಕೈಗೊಳ್ಳುತ್ತೆ. ಇನ್ನು ಇದರ ಬೆನ್ನಲ್ಲೇ ಪ್ರಧಾನಿ ಮೋದಿಗೆ ಕರೆ ಮಾಡಿ ಬಿಎಸ್‌ ಯಡಿಯೂರಪ್ಪ ಧನ್ಯವಾದ ತಿಳಿಸಿದ್ರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸವೈ ಮೋದಿಗೆ ಕಾಲ್‌ ಮಾಡಿ ಧನ್ಯವಾದ ಹೇಳಿದ್ದೇನೆ. ನಾನು ಯಾವುದೇ ಅಪೇಕ್ಷೆ ಮಾಡಿರಲಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ನೀವು ಪಕ್ಷ ಸಂಘಟನೆ ಮಾಡಿ ಅಂತ ಮೋದಿ ನನಗೆ ಹೇಳಿದ್ದಾರೆ..ಅಂತ ಹೇಳಿದ್ರು. ಇನ್ನು ಈ ಯಡಿಯೂರಪ್ಪ ಆಯ್ಕೆಯ ಹಿಂದೆ ಬಿಜೆಪಿಯ ದೊಡ್ಡ ಲೆಕ್ಕಚಾರ ಇದೆ ಅಂತ ವಿಶ್ಲೇಷಕರು ಅಂದಾಜು ಮಾಡ್ತಿದ್ದಾರೆ. ಯಾಕಂದ್ರೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಯಡಿಯೂರಪ್ಪ ಕೂಡ ರಾಜಕೀಯದಲ್ಲಿ ಸೈಲೆಂಟ್‌ ಆಗ್ತಿದ್ದಾರೆ ಅನ್ನೋ ಥಿಯರಿಗಳು ಕೂಡ ಏಳ್ತಾಯಿದೆ. ಇದರ ನಡುವೆಯೇ ಲಿಂಗಾಯುತ ಮತಗಳನ್ನ ಪಡೆಯುವಲ್ಲಿ ಈಗ ಸಧ್ಯದ ಮಟ್ಟಿಗೆ ಬಲಿಷ್ಠ ಲಿಂಗಾಯುತ ಮುಖ ಆಗಿರೋದು ಬೊಮ್ಮಾಯಿ..ಆದ್ರೆ ಅವರು ಪಕ್ಷ ಸಂಘಟನೆಯಿಂದ ಹಿಡಿದು ಸರ್ಕಾರ ನಡೆಸೋವರೆಗೂ ವಿಫಲರಾಗ್ತಿದ್ದಾರೆ, ರಾಜ್ಯದಲ್ಲಿ ಬಿಜೆಪಿಗೆ ನಾಯಕತ್ವದ ಕೊರತೆ ಇದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ನೇತೃತ್ವ ವಹಿಸೋರೆ ಯಾರು ಇಲ್ಲ ಅನ್ನೋ ಕೂಗುಗಳು ವಿರೋಧಿ ಪಾಳಯದಿಂದ ಕೇಳಿಬರ್ತಿದೆ. ಅದಲ್ಲದೇ ಇದೇ ಸಂದರ್ಭವನ್ನ ಇಟ್ಕೊಂಡು ಕಾಂಗ್ರೆಸ್‌ ಕೂಡ ಒಳ್ಳೇ ಮಾಸ್ಟರ್‌ ಪ್ಲಾನ್‌ನ್ನ ಈಗಾಗಲೇ ಆರಂಭ ಮಾಡಿದೆ. ಯಾಕಂದ್ರೆ ಸಿದ್ದರಾಮೋತ್ಸವ ಕಾರ್ಯಕ್ರಮ ಸೇರಿದಂತೆ ಇತ್ತೀಚಿನ ವೇದಿಕೆಗಳಲ್ಲಿ ಕಾಂಗ್ರೆಸ್‌ ನಾಯಕರು ತಮ್ಮ ಹೇಳಿಕೆಯಲ್ಲಿ ಬಸವಣ್ಣ, ಬಸವತತ್ವ ಅಂತ ಹೆಚ್ಚಾಗಿ ಉಲ್ಲೇಖ ಮಾಡ್ತಿದ್ದಾರೆ. ಅದೂ ಅಲ್ಲದೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ಕೈಗೊಂಡು ಇಷ್ಟ ಲಿಂಗ ದೀಕ್ಷೆ ಪಡೆದುಕೊಂಡಿದ್ರು. ಇದೆಲ್ಲ ರಾಜಕೀಯದಲ್ಲಿ ಹೊಸ ಅಭಿಪ್ರಾಯಗಳಿಗೆ, ಹೊಸ ವಿಶ್ಲೇಷಣೆಗಳಿಗೆ ಕಾರಣವಾಗಿತ್ತು. ಕಾಂಗ್ರೆಸ್‌ ಯಡಿಯೂರಪ್ಪರ ಅಲಭ್ಯತೆಯಲ್ಲಿ ಲಿಂಗಾಯುತ ಮತಗಳನ್ನ ತಮ್ಮ ಕಡೆಗೆ ಸೆಳೆದುಕೊಳ್ಳಬಹುದು ಅಂತ ಹೇಳಲಾಗ್ತಿತ್ತು. ಆದ್ರೆ ಈಗ ಬಿಎಸ್‌ವೈರಿಗೆ ರಾಷ್ಟ್ರ ರಾಜಕಾರಣದಲ್ಲಿ ಅತ್ಯುತ್ತಮ ಸ್ಥಾನ ಕೊಟ್ಟು ಕಾಂಗ್ರೆಸ್‌ ಹೊಂಚು ಹಾಕಿ ಕೂತಿರೋ ಲಿಂಗಾಯುತ ವೋಟ್‌ಗಳನ್ನ ಹೇಗಾದ್ರೂ ಮಾಡಿ ತಮ್ಮಲ್ಲೇ ಉಳಿಸಿಕೊಳ್ಳೋಕೆ ಬಿಜೆಪಿ ಈ ರೀತಿ ಮಾಡಿದೆ ಅಂತ ಅಭಿಪ್ರಾಯ ವ್ಯಕ್ತಪಡಿಸಲಾಗ್ತಿದೆ.

-masthmagaa.com

Contact Us for Advertisement

Leave a Reply