masthmagaa.com:

ಭಾರತ-ಚೀನಾ ನಡುವೆ ಲಡಾಖ್ ಪೂರ್ವ ಭಾಗದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ, ‘ಯಾವುದೇ ದೇಶದೊಂದಿಗೆ ಶೀತಲ ಸಮರವಾಗಲೀ ಅಥವಾ ಯುದ್ಧವಾಗಲೀ ಮಾಡಲು ನಮಗೆ ಇಷ್ಟವಿಲ್ಲ’ ಅಂತ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​ ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಜಿನ್​ಪಿಂಗ್, ‘ಚೀನಾ ಯಾವತ್ತು ವಿಸ್ತರಣಾವಾದ ಅನುಸರಿಸಿಲ್ಲ. ನಾವು ಬೇರೆ ದೇಶಗಳೊಂದಿಗಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡಲು ಮತ್ತು ವಿವಾದವನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಯುದ್ಧ ಮಾಡೋದು ನಮ್ಮ ಉದ್ದೇಶವಲ್ಲ’ ಅಂತ ಹೇಳಿದ್ದಾರೆ.

ಜುಲೈ 4ರಂದು ಲಡಾಖ್​ಗೆ ದಿಢೀರ್​ ಭೇಟಿ ನೀಡಿದ್ದ ಪ್ರಧಾನಿ ಮೋದಿ, ವಿಸ್ತರಣಾವಾದ ಅಂತ್ಯವಾಗಿದೆ. ವಿಸ್ತರಣಾವಾದ ಅನುಸರಿಸಿದವರು ಸೋಲು ಅನುಭವಿಸಿದ್ದಕ್ಕೆ ಇತಿಹಾಸದಲ್ಲಿ ಸಾಕ್ಷ್ಯವಿದೆ ಎನ್ನುವ ಮೂಲಕ ಗಡಿಯಲ್ಲಿ ತಂಟೆ ಮಾಡುತ್ತಿರುವ ಚೀನಾಗೆ ಟಾಂಗ್ ಕೊಟ್ಟಿದ್ದರು. ಮೋದಿಯ ಆ ಹೇಳಿಕೆಗೆ ಜಿನ್​ಪಿಂಗ್ ಈ ರೀತಿ ಪ್ರತಿಕ್ರಿಯೆ ಕೊಟ್ಟಂತೆ ಕಾಣುತ್ತಿದೆ.

ಚೀನಾದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPL) ಮತ್ತು ಚೀನಾ ಸೇನೆಯ ಕಮಾಂಡರ್-ಇನ್-ಚೀಫ್​ ಕೂಡ ಆಗಿದ್ದಾರೆ ಷಿ ಜಿನ್​ಪಿಂಗ್. ಕೊರೋನಾ ಬಗ್ಗೆಯೂ ಮಾತನಾಡಿದ ಅವರು, ಕೊರೋನಾ ವಿಚಾರದಲ್ಲಿ ಚೀನಾವನ್ನು ಟೀಕಿಸುತ್ತಿರುವುದು ಸರಿಯಲ್ಲ ಅಂತ ಹೇಳಿದ್ದಾರೆ.

ನಿನ್ನೆಯಷ್ಟೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಕೊರೋನಾ ವೈರಸ್ ಅನ್ನು ಚೀನಾ ವೈರಸ್​ ಅಂತ ಕರೆದಿದ್ದರು. ಜೊತೆಗೆ ವೈರಾಣು ಮೊದಲು ಕಾಣಿಸಿಕೊಂಡಾಗ ಅದನ್ನು ನಿಭಾಯಿಸಲು ವಿಫಲವಾದ ಮತ್ತು ಬಳಿಕ ವೈರಾಣು ಜಗತ್ತಿನಾದ್ಯಂತ ಹರಡಲು ಚೀನಾವನ್ನೇ ಹೊಣೆಗಾರನನ್ನಾಗಿ ಮಾಡಬೇಕು ಅಂದಿದ್ದರು.

-masthmagaa.com

Contact Us for Advertisement

Leave a Reply