ಚೀನಾದಿಂದ ಸ್ಪೇಸ್​ ಸ್ಟೇಷನ್ ನಿರ್ಮಾಣ: ಮೊದಲ ಮಿಷನ್ ಯಶಸ್ವಿ

masthmagaa.com:

ಜಗತ್ತಿನಲ್ಲಿ ಸದ್ಯ ಸೇವೆಯಲ್ಲಿರೋದು ಒಂದೇ ಒಂದು ಸ್ಪೇಸ್​ ಸ್ಟೇಷನ್​. ಅದೇ ಅಮೆರಿಕ, ರಷ್ಯಾ, ಯುರೋಪ್, ಜಪಾನ್ ಮತ್ತು ಕೆನಡಾ ಬೆಂಬಲಿತ ಇಂಟರ್​ನ್ಯಾಷನಲ್​ ಸ್ಪೇಸ್​ ಸ್ಟೇಷನ್- ಐಎಸ್​ಎಸ್​​. ಇದಕ್ಕೆ ಚೀನಾ ಸೇರಬಾರ್ದು ಅಂತ ಅಡ್ಡಗಾಲು ಹಾಕ್ತಾನೇ ಬಂದಿದೆ ಅಮೆರಿಕ. ಹೀಗಾಗಿ ಐಎಸ್​ಎಸ್​​ಗೆ ಸೆಡ್ಡು ಹೊಡೆಯಲು ಚೀನಾ ತನ್ನದೇ ಆದ ಸ್ವಂತ ಸ್ಪೇಸ್​​ ಸ್ಟೇಷನ್​ ನಿರ್ಮಿಸುವ ಗುರಿ ಹೊಂದಿದೆ. 2022ರೊಳಗೆ ಆ ಸ್ಪೇಸ್​ ಸ್ಟೇಷನ್​ನ​ ನಿರ್ಮಾಣ ಕೆಲಸವನ್ನ ಪೂರ್ಣಗೊಳಿಸೋ ಪ್ಲಾನ್ ಚೀನಾದ್ದು. ಅದಕ್ಕೆ ಸಂಬಂಧಿಸಿದಂತೆ ಇವತ್ತು ಮಾನವರಹಿತ ಮಾಡ್ಯೂಲ್​ವೊಂದನ್ನ ಉಡಾವಣೆ ಮಾಡಿದೆ. ಮೂರು ಕ್ರೂಗಳು ವಾಸಿಸಲು ಯೋಗ್ಯವಾದ ಮಾಡ್ಯೂಲ್ ಇದಾಗಿದೆ. ‘Tianhe’ – ಟಿಯಾನ್ಹೆ ಹೆಸರಿನ ಈ ಮಾಡ್ಯೂಲ್​ ಅನ್ನ ಚೀನಾದ ಹೆವಿ ವೇಟ್​ ಲಾಂಚ್ ವೆಹಿಕಲ್ ಆದ ಲಾಂಗ್ ಮಾರ್ಚ್ 5ಬಿ ಮೂಲಕ ಉಡಾವಣೆ ಮಾಡಲಾಗಿದೆ. ಚೀನಾ ನಿರ್ಮಿಸಲು ಉದ್ದೇಶಿಸಿರೋ ಬಾಹ್ಯಾಕಾಶ ನಿಲ್ದಾಣದ ಮೂರು ಪ್ರಮುಖ ಭಾಗಗಳಲ್ಲಿ ‘ಟಿಯಾನ್ಹೆ’ ಕೂಡ ಒಂದು. ಇದರ ಲೈಫ್​ ಸ್ಪ್ಯಾನ್ ಅಥವಾ ವ್ಯಾಲಿಡಿಟಿ 10 ವರ್ಷ. ಅಂದ್ಹಾಗೆ ಚೀನಾ ತನ್ನದೇ ಆದ ಸ್ಪೇಸ್​ ಸ್ಟೇಷನ್​ ರೆಡಿ ಮಾಡೋಕೂ ಮೊದಲು 11 ಮಿಷನ್​ಗಳನ್ನ ಪೂರ್ಣಗೊಳಿಸಬೇಕು. ಅದರಲ್ಲಿ ಮೊದಲ ಮಿಷನ್ ಇದಾಗಿದೆ. ಮುಂದಿನ 10 ಮಿಷನ್​ಗಳಲ್ಲಿ, ಎರಡು ಇತರ ಕೋರ್​ ಮಾಡ್ಯೂಲ್​ಗಳನ್ನ, ಮಾನವಸಹಿತ 4 ಸ್ಪೇಸ್​ಕ್ರಾಫ್ಟ್​ಗಳನ್ನ​ ಮತ್ತು 4 ಕಾರ್ಗೊ ಸ್ಪೇಸ್​ಕ್ರಾಫ್ಟ್​ಗಳನ್ನ ಲಾಂಚ್ ಮಾಡಲಿದೆ. ಚೀನಾದ ಈ ಸ್ಪೇಸ್​ ಸ್ಟೇಷನ್​ ನಿರ್ಮಾಣ ಕೆಲಸ 2011ರಿಂದಲೇ ಶುರುವಾಗಿದೆ. 2011ರಲ್ಲಿ Tiangong-1 ಅನ್ನೋ ಸ್ಪೇಸ್​ ಲ್ಯಾಬ್ ಅನ್ನ ಲಾಂಚ್ ಮಾಡಿತ್ತು. ಅದಾದ ಬಳಿಕ 2016ರಲ್ಲಿ Tiangong-2 ಸ್ಪೇಸ್​ ಲ್ಯಾಬ್ ಲಾಂಚ್ ಮಾಡಿತ್ತು. 2030ರ ವೇಳೆಗೆ ಬಲಿಷ್ಠ ಸ್ಪೇಸ್​ ಪವರ್ ದೇಶ ಆಗ್ಬೇಕು ಅನ್ನೋ ಆಸೆ ಇಟ್ಟುಕೊಂಡಿದೆ ಚೀನಾ. ಇದಕ್ಕೆ ಪೂರಕವೆಂಬಂತೆ ಚಂದ್ರನಲ್ಲಿಗೆ ಹೋಗಿದೆ, ಮಂಗಳ ಗ್ರಹಕ್ಕೆ ಮಾನವರಹಿತ ಸ್ಪೇಸ್​ಕ್ರಾಫ್ಟ್ ಕಳಿಸಿದೆ. ಜೊತೆಗೆ ತನ್ನದೇ ಆದ ಸ್ಪೇಸ್​ ಸ್ಟೇಷನ್ ರೆಡಿ ಮಾಡ್ತಿದೆ. ಸದ್ಯ ಸೇವೆಯಲ್ಲಿರೋ ಇಂಟರ್​ನ್ಯಾಷನಲ್​ ಸ್ಪೇಸ್​ ಸ್ಟೇಷನ್​ ಕಳೆದೆರಡು ದಶಕಗಳಿಂದ ಕೆಲಸ ಮಾಡ್ತಿದೆ. 2024ರಲ್ಲಿ ಐಎಸ್​ಎಸ್​ ಪ್ರಾಜೆಕ್ಟ್​ ಎಕ್ಸ್​ಪೈರ್​ ಆಗಲಿದೆ. 2025ರಿಂದ ರಷ್ಯಾ ಕೂಡ ಈ ಪ್ರಾಜೆಕ್ಟ್​ನಿಂದ ಹೊರಬರೋದಾಗಿ ಹೇಳಿದೆ. ಅಮೆರಿಕ ಜೊತೆಗಿನ ರಷ್ಯಾ ಸಂಬಂಧ ಅಷ್ಟು ಚೆನ್ನಾಗಿಲ್ಲ. ಆದ್ರೆ ಶತ್ರುವಿನ ಶತ್ರು ಮಿತ್ರ ಅನ್ನೋ ಹಾಗೆ ಚೀನಾಗೂ ರಷ್ಯಾಗೂ ಚೆನ್ನಾಗಿ ಆಗಿಬರುತ್ತೆ. ಹೀಗಾಗಿ ಈ ಸ್ಪೇಸ್​ ಸ್ಟೇಷನ್​ನ ರೇಸ್ ಮುಂದೇನಾಗುತ್ತೆ ಅನ್ನೋ​ ಕುತೂಹಲ ಹೆಚ್ಚಾಗಿದೆ.

-masthmagaa.com

Contact Us for Advertisement

Leave a Reply