ಚೀನಾದಿಂದ ಭಾರತದ ಪ್ರಜೆಯ ಕಿಡ್ನಾಪ್! ಎಲ್ಲಿ? ಹೇಗೆ? ಯಾವಾಗ?

masthmagaa.com:

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಲುಂಗ್ಟಾ ಜೋರ್​​​​ ಪ್ರದೇಶದಿಂದ 17 ವರ್ಷದ ಬಾಲಕನನ್ನು ಅಪಹರಿಸಿದೆ ಅಂತ ಬಿಜೆಪಿಯದ್ದೇ ಸಂಸದರಾದ ತಾಪಿರ್​​ ಗಾವೋ ಟ್ವೀಟ್ ಮಾಡಿ ಆರೋಪಿಸಿದ್ದಾರೆ. ಜನವರಿ 18ರಂದೇ ಈ ಘಟನೆ ನಡೆದಿದ್ದು, ಬಾಲಕನನ್ನು ಮಿರಾಮ್ ತರೊನ್ ಅಂತ ಗುರುತಿಸಲಾಗಿದೆ. ಭಾರತದ ಭೂಭಾಗಕ್ಕೆ ಬಂದು ಲುಂಗ್ಟಾ ಜೋರ್ ಪ್ರದೇಶದಲ್ಲಿ ಈ ಕೃತ್ಯ ಎಸಗಿದ್ದಾರೆ. 2018ರಲ್ಲಿ ಇದೇ ಭಾಗದಲ್ಲಿ ಚೀನೀಯರು ರಸ್ತೆ ನಿರ್ಮಿಸಿದ್ರು ಅಂತ ಕೂಡ ತಾಪಿರ್ ಗಾವೋ ಮಾಹಿತಿ ನೀಡಿದ್ದಾರೆ. ಇನ್ನು ಘಟನೆ ವೇಳೆ ಮಿರಾಮ್ ತರೊನ್ ಜೊತೆಗಿದ್ದ ಸ್ನೇಹಿತ ಜಾನಿ ಯೈಯಿಂಗ್ ಎಸ್ಕೇಪ್ ಆಗಿ ಓಡಿಬಂದಿದ್ದಾನೆ. ಈತನಿಂದಲೇ ಮಿರಾಮ್ ತರೊನ್ ಪೀಪಲ್ಸ್ ಲಿಬರೇಷನ್ ಆರ್ಮಿಯಿಂದ ಕಿಡ್ನಾಪ್ ಆಗಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇವರಿಬ್ಬರು ಝಿಡೋ ಗ್ರಾಮದ ಸ್ಥಳೀಯ ಬೇಟೆಗಾರರಾಗಿದ್ರು. ಸಾಂಗ್ಪೋ ನದಿ ಭಾರತ ಪ್ರವೇಶಿಸುವ ಅರುಣಾಚಲ ಪ್ರದೇಶದ ಜಾಗದಲ್ಲಿ ಈ ಅಪಹರಣ ನಡೆದಿದೆ. ಕೂಡಲೇ ಭಾರತದ ಎಲ್ಲಾ ಸಂಸ್ಥೆಗಳ ಅಧಿಕಾರಿಗಳು ಈ ಬಾಲಕನ ಬಿಡುಗಡೆಗೆ ಯತ್ನಿಸಬೇಕು ಅಂತ ಮನವಿ ಮಾಡಿದ್ದಾರೆ. ಜೊತೆಗೆ ಈ ಟ್ವೀಟ್​ನ್ನು ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ಸೇನೆಗೆ ಟ್ಯಾಗ್ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಸೇನೆಯ ಪಿಆರ್​​ಒ, ಈ ವಿಚಾರ ತಿಳಿಯುತ್ತಿದ್ದಂತೆ ಭಾರತ ಸೇನೆ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಹಾಟ್​​ಲೈನ್ ಮೂಲಕ ಸಂಪರ್ಕಿಸಿದೆ. ಪ್ರೊಟೋಕಾಲ್ ಪ್ರಕಾರ ಆತನನ್ನು ಪತ್ತೆಹಚ್ಚಿ ನಮಗೆ ಹಿಂತಿರುಗಿಸಿ ಅಂತ ಸೂಚಿಸಿದ್ದೀವಿ ಅಂತ ಹೇಳಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್ ಮಾಡಿರೋ ರಾಹುಲ್ ಗಾಂಧಿ, ಭಾರತದ ಪ್ರಜೆಯೊಬ್ಬರು ಗಣರಾಜ್ಯೋತ್ಸವಕ್ಕೂ ಸ್ವಲ್ಪ ಮುನ್ನ ಅಪಹರಣಕ್ಕೀಡಾಗಿದ್ದಾರೆ. ನಾವು ಧೈರ್ಯಗೆಡೋದಿಲ್ಲ.. ಬಾಲಕನ ಕುಟುಂಬದ ಜೊತೆ ನಾವಿದ್ದೀವಿ. ಪ್ರಧಾನಿ ಮೋದಿಯ ಮೂರ್ಖಮೌನವೇ ಹೇಳಿಕೆ.. ಅವರಿಗೆ ಏನೂ ವ್ಯತ್ಯಾಸ ಆಗೋದಿಲ್ಲ ಅಂತ ಟೀಕಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ವಕ್ತಾರ ರಣ್​ದೀಪ್ ಸುರ್ಜೇವಾಲಾ, ಮೋದಿಯವರೇ…ನಮ್ಮ ಭೂಮಿಗೆ ನುಗ್ಗುವ ಚೀನಾ ದುಸ್ಸಾಹಸ ಮಾಡಿದ್ದು ಹೇಗೆ? ಚೀನಾ ಭಾರತೀಯ ನಾಗರಿಕರನ್ನು ಅಪಹರಿಸುವಷ್ಟು ಧೈರ್ಯನಾ? ನಮ್ಮ ಸರ್ಕಾರ ಸುಮ್ಮನಿರೋದು ಯಾಕೆ? ಈಗ ಯಾರು ಬಂದಿಲ್ಲ, ಯಾರನ್ನೂ ಕರ್ಕೊಂಡು ಹೋಗಿಲ್ಲ ಅಂತ ಹೇಳ್ಬೇಡಿ ಅಂತ ಕಿಡಿಕಾರಿದೆ.

ಇನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾತನಾಡಿ, ಜನವರಿ 31ರಂದು ಬಜೆಟ್ ಅಧಿವೇಶನ ಶುರುವಾದಾಗ ಅರುಣಾಚಲ ಪ್ರದೇಶ ಮತ್ತು ಪೂರ್ವ ಲಡಾಖ್ ಗಡಿ ಪರಿಸ್ಥಿತಿ ಬಗ್ಗೆ ಚರ್ಚಿಸೋ ಅಗತ್ಯತೆ ಇದೆ ಅಂತ ಹೇಳಿದ್ದಾರೆ.

ಅಂದಹಾಗೆ ಚೀನಾ ಭಾರತದ ಪ್ರಜೆಗಳನ್ನು ಅರುಣಾಚಲ ಪ್ರದೇಶದಿಂದ ಅಪಹರಣ ಮಾಡ್ಕೊಂಡು ಹೋಗೋದು ಹೊಸತೇನು ಅಲ್ಲ..ಈ ಹಿಂದೆ 2020ರ ಸೆಪ್ಟೆಂಬರ್​​ನಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ ಅರುಣಾಚಲ ಪ್ರದೇಶದ ಅಪ್ಪರ್ ಸುಬನ್​ಸಿರಿ ಜಿಲ್ಲೆಯಿಂದ ಐವರು ಪ್ರಜೆಗಳನ್ನು ಅಪಹರಿಸಿತ್ತು. ಒಂದು ವಾರ ಕಳೆದ ಬಳಿಕ ರಿಲೀಸ್ ಕೂಡ ಮಾಡಿತ್ತು. ಪೂರ್ವ ಲಡಾಖ್​​ನಲ್ಲಿ ಚೀನಾದ ಜೊತೆಗೆ ಸಂಘರ್ಷ ಇರೋ ಹೊತ್ತಲ್ಲೇ ಈ ಅಪಹರಣ ಎರಡು ದೇಶಗಳ ನಡುವೆ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply