masthmagaa.com:

ಭಾರತ-ಚೀನಾ ನಡುವೆ ಲಡಾಖ್ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ‘ಯುದ್ಧಕ್ಕೆ ರೆಡಿಯಾಗಿರಿ’ ಅಂತ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್​ ತಮ್ಮ ಸೇನೆಗೆ ಹೇಳಿದ್ದಾರೆ ಅಂತ ಚೀನಾದ ಷಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ. ‘ಯೋಧರು ಹೈ ಅಲರ್ಟ್​ನಲ್ಲಿರಬೇಕು. ನಿಮ್ಮ ಎಲ್ಲಾ ಶಕ್ತಿಯನ್ನು ಯುದ್ಧಕ್ಕೆ ತಯಾರಾಗುವತ್ತ ಕೇಂದ್ರೀಕರಿಸಬೇಕು’ ಅಂತ ಜಿನ್​ಪಿಂಗ್ ಸೂಚಿಸಿದ್ದಾರೆ. ಇತ್ತೀಚೆಗೆ ಗೌಂಗ್​ಡಾಂಗ್​​ ಪ್ರಾಂತ್ಯದ ಚೌಸೌ ನಗರದ ಸೇನಾ ನೆಲೆಗೆ ಭೇಟಿ ನೀಡಿದ್ದಾಗ ಈ ರೀತಿ ಹೇಳಿದ್ದಾರೆ.

‘ಯುದ್ಧಕ್ಕೆ ತಯಾರಾಗಿ’ ಅಂತ ಜಿನ್​ಪಿಂಗ್​ ಹೇಳಿದ್ದಾರೆ. ಆದ್ರೆ ಆ ಯುದ್ಧ ಭಾರತದ ವಿರುದ್ಧವೋ ಅಥವಾ ಬೇರೆ ದೇಶದ ವಿರುದ್ಧವೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಮೊನ್ನೆಯಷ್ಟೇ ಭಾರತ ಮತ್ತು ಚೀನಾ ನಡುವೆ ಸೇನಾ ಹಂತದ ಸಭೆ ನಡೆದಿತ್ತು. ಈ ವೇಳೆ ಎರಡೂ ದೇಶಗಳು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಆದ್ರೀಗ ಚೀನಾ ಅಧ್ಯಕ್ಷರು ಈ ರೀತಿ ಮಾತನಾಡಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.

ಮತ್ತೊಂದು ಮೂಲದ ಪ್ರಕಾರ ಜಿನ್​ಪಿಂಗ್ ಯುದ್ಧದ ಬಗ್ಗೆ ಉಲ್ಲೇಖಿಸಿರೋದು ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲ ಅಂತ ಹೇಳಲಾಗ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಸಾರ್ವಭೌಮತ್ವ ಸಾಧಿಸಲು ಚೀನಾ ಹವಣಿಸುತ್ತಿದೆ. ಆದ್ರೆ ಇದಕ್ಕೆ ತೈವಾನ್, ಫಿಲಿಪ್ಪೀನ್ಸ್, ವಿಯೆಟ್ನಾಂ ಮತ್ತು ಬ್ರುನೈ ದೇಶಗಳು ವಿರೋಧ ವ್ಯಕ್ತಪಡಿಸುತ್ತಿವೆ. ಇತ್ತೀಚೆಗೆ ತೈವಾನ್ ಜಲಸಂಧಿಯಲ್ಲಿ ಅಮೆರಿಕದ ಯುದ್ಧ ನೌಕೆ ಸಂಚಾರ ನಡೆಸಿತ್ತು ಅಂತ ಚೀನಾ ಆರೋಪಿಸಿತ್ತು. ಕೊರೋನಾ ಬಳಿಕವಂತೂ ಚೀನಾ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದೆ. ತೈವಾನ್​ಗೆ ಅಮೆರಿಕ ಬಹಿರಂಗವಾಗಿಯೇ ಬೆಂಬಲ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಜಿನ್​ಪಿಂಗ್​ ಯುದ್ಧದ ಮಾತುಗಳನ್ನ ಆಡಿರೋದು ಗಮನಾರ್ಹ.

-masthmagaa.com

Contact Us for Advertisement

Leave a Reply