ಅನರ್ಹರು ಸ್ಪರ್ಧಿಸದಿದ್ರೆ ಕುಟುಂಬದಲ್ಲಿ ಯಾರನ್ನು ಕಣಕ್ಕಿಳಿಸಬಹುದು..?

ದೋಸ್ತಿ ಸರ್ಕಾರವನ್ನ ಅಡ್ಡ ಬೀಳಿಸಿದ್ದ ಅನರ್ಹ ಶಾಸಕರ ರಾಜಕೀಯ ಭವಿಷ್ಯ ಅತಂತ್ರವಾಗಿದೆ. ಬೈ ಎಲೆಕ್ಷನ್ ಗೆ ನಿಲ್ಲಲು ಚಾನ್ಸ್ ಸಿಗುತ್ತೆ ಅಂತ ಕೆಲವರು ಕಾಯುತ್ತಿದ್ರೆ.. ಇನ್ನು ಕೆಲವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡಾಗಿದೆ. ಅಂದ್ರೆ ತಮ್ಮ ಬದಲಾಗಿ ಮಗನನ್ನೋ, ಮಗಳನ್ನೋ ಅಥವಾ ಪತ್ನಿಯನ್ನೆ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಹಾಗಾದರೆ ತಂದೆ ಪರವಾಗಿ ಬೈ ಎಲೆಕ್ಷನ್ ಅಖಾಡದಲ್ಲಿ ಧೂಳೆಬ್ಬಿಸಲು ರೆಡಿಯಾಗಿರೋ ಮಕ್ಕಳ್ಯಾರು..? ಗಂಡನ ಪರವಾಗಿ ಉಪಚುನಾವಣೆಗೆ ನಿಲ್ಲೋ ಹೆಂಡತಿ ಯಾರು ಅಂತ ನೋಡ್ತಾ ಹೋಗೋಣ.

ಬಿ.ಸಿ. ಪಾಟೀಲ್ ಪರವಾಗಿ ಪುತ್ರಿ ಕಣಕ್ಕೆ..?
ಹಿರೇಕೆರೂರು ಅನರ್ಹ ಶಾಸಕ ಬಿಸಿ ಪಾಟೀಲ್ ಗೆ ಅವಕಾಶ ಸಿಕ್ಕರೆ ಅವ್ರೇ ಉಪಚುನಾವಣೆಗೆ ನಿಲ್ಲಲಿದ್ದಾರೆ. ಒಂದು ವೇಳೆ ಚಾನ್ಸ್ ಇಲ್ಲ ಅಂದ್ರೆ, ಅವರ ಪುತ್ರಿ ಹಾಗೂ ನಟಿಯೂ ಆಗಿರುವ ಸೃಷ್ಟಿ ಪಾಟೀಲ್ ಬೈ ಎಲೆಕ್ಷನ್ ಅಖಾಡಕ್ಕೆ ಧುಮುಕುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಸೃಷ್ಟಿ ಪಾಟೀಲ್ ಹಿಂದೇಟು ಹಾಕಿದ್ರೆ ಅಳಿಯ ಸೃಜಯ್ ರನ್ನ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಬಿಸಿ ಪಾಟೀಲ್ ಇದ್ದಾರೆ ಎನ್ನಲಾಗುತ್ತಿದೆ.

ವಿಜಯನಗರದಿಂದ ಮಿಸಸ್ ಸಿಂಗ್ ಅಥವಾ ಪುತ್ರ..?
ಬಳ್ಳಾರಿಯ ವಿಜಯನಗರ ಕ್ಷೇತ್ರದಿಂದ ಆನಂದ್ ಸಿಂಗ್ ಗೆ ಅವಕಾಶ ಮಿಸ್ ಆದ್ರೆ ಅವರ ಮಿಸ್ಸಸ್ ಉಪಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಹೆಂಡತಿಗೆ ಟಿಕೆಟ್ ಸಿಗದಿದ್ದರೆ ಮಗ ಸಿದ್ದಾರ್ಥ್ ಸಿಂಗ್ ನನ್ನ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಆನಂದ್ ಸಿಂಗ್ ಇದ್ದಾರೆ.

ಡಾ.ಕೆ.ಸುಧಾಕರ್ ಪತ್ನಿ.. ಅಥವಾ ತಂದೆ ಕಣಕ್ಕೆ..?
ಅವಕಾಶ ಸಿಕ್ಕರೆ ಚಿಕ್ಕಬಳ್ಳಾಪುರದಿಂದ ಮತ್ತೊಮ್ಮೆ ಚುನಾವಣೆಗೆ ನಿಲ್ಲಲು ಡಾಕ್ಟರ್ ಕೆ.ಸುಧಾಕರ್ ಸಾಧ್ಯವಾಗದೇ ಹೋದರೆ ಅವರ ಪತ್ನಿ ಡಾಕ್ಟರ್ ಪ್ರೀತಿ ಅವರನ್ನ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅದೂ ಆಗದಿದ್ದರೆ ತಮ್ಮ ತಂದೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಅದ ಕೇಶವ ರೆಡ್ಡಿಯನ್ನ ಉಪ ಚುನಾವಣೆಗೆ ನಿಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‍ನಿಂದ ಹೇಮಲತಾ ಕಣಕ್ಕೆ..?
ಮಹಾಲಕ್ಷ್ಮಿಲೇಔಟ್ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ದಿಸಲು ಗೋಪಾಲಯ್ಯ ಅವರಿಗೆ ಅವಕಾಶ ಸಿಗದಿದ್ದರೆ, ಅವರ ಪತ್ನಿ ಎಸ್.ಪಿ. ಹೇಮಲತಾ ಕಣಕ್ಕಿಳಿಯುವುದು ಬಹುತೇಕ ಪಕ್ಕ. ಇವರು ಬಿಬಿಎಂಪಿ ಮಾಜಿ ಉಪ ಮೇಯರ್ ಕೂಡ ಹೌದು.

ಪುತ್ರನನ್ನ ಕಣಕ್ಕಿಳಿಸ್ತಾರಾ ಶ್ರೀಮಂತ ಶಾಸಕ..?
ಫ್ರೆಂಡ್ಸ್ ಎಂಟಿಬಿ ನಾಗರಾಜ್ ಕಳೆದ ಸಲ ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿಕೊಂಡು ರಾಜ್ಯದ ಶ್ರೀಮಂತ ಎಂಎಲ್‍ಎ ಅಂತ ಗುರುತಿಸಿಕೊಂಡಿದ್ರು. ಈ ಬಾರಿ ಅವಕಾಶ ಸಿಕ್ಕರೆ ಅದೆಷ್ಟು ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಳ್ಳುತ್ತಾರೆ ಗೊತ್ತಿಲ್ಲ. ಆದರೆ ಉಪಚುನಾವಣೆಗೆ ಬಹುತೇಕ ತಮ್ಮ ಪುತ್ರ ನಿತೀಶ್ ಪುರುಷೋತ್ತಮ್.. ಕಣಕ್ಕಿಳಿಸಲು ಎಂಟಿಬಿ ನಿರ್ಧರಿಸಿದ್ದಾರೆ.

ನಾರಾಯಣಗೌಡ ಪರವಾಗಿ ಪತ್ನಿ ಅಖಾಡಕ್ಕೆ..?
ಉಪಚುನಾವಣೆಗೆ ಸ್ಪರ್ಧಿಸುವ ಆಶಯದಿಂದಲೇ ಕೆಸಿ ನಾರಾಯಣ ಗೌಡ ಕೆ.ಆರ್.ಪೇಟೆಯಲ್ಲಿ ಕಳೆದೊಂದು ತಿಂಗಳಿಂದ ಫುಲ್ ಆಕ್ಟಿವ್ ಆಗಿದ್ದಾರೆ. ಒಂದು ವೇಳೆ ತಮ್ಮ ಸ್ಪರ್ಧೆ ಸಾಧ್ಯವಾಗದಿದ್ದರೆ ಪತ್ನಿ ದೇವಕಿಯನ್ನು ಬೈ ಎಲೆಕ್ಷನ್ ಗೆ ನಿಲ್ಲಿಸಿ ಗೆಲ್ಲಿಸಲು ನಾರಾಯಣಗೌಡ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಇದರ ಜೊತೆಗೆ ಕೆ ಆರ್ ಪೇಟೆಯಿಂದ ಬಿಎಸ್ ವೈ ಪುತ್ರ ವಿಜಯೇಂದ್ರ ಅವರ ಹೆಸರು ಕೂಡ ಕೇಳಿ ಬರ್ತಾಯಿದೆ ಅನ್ನೋದು ವೆರಿವೆರಿ ಇಂಟರೆಸ್ಟಿಂಗ್.

ಸಾಹುಕಾರನ ಬದಲು ಅಂಬಿರಾವ್ ಕಣಕ್ಕೆ..?
ಬೆಳಗಾವಿ ಸಾಹುಕಾರ್ ರಮೇಶ ಜಾರಕಿಹೊಳಿ ಉಪ ಚುನಾವಣೆಗೆ ನಿಲ್ಲಲು ಕಾತರದಿಂದ ಕಾಯುತ್ತಿದ್ದಾರೆ. ರಮೇಶ್ ಗೆ ಅವಕಾಶ ಸಿಕ್ಕರೆ ಓಕೆ. ಇಲ್ಲದಿದ್ದರೆ ಅಳಿಯ ಅಂಬಿರಾವ್ ಪಾಟೀಲ್‍ರನ್ನ ಗೋಕಾಕ್ ನಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ.

ಹುಣಸೂರಿನಿಂದ ವಿಶ್ವನಾಥ್ ಪುತ್ರ ಸ್ಪರ್ಧೆ..?
ಫ್ರೆಂಡ್ಸ್ ಹುಣಸೂರು ಕ್ಷೇತ್ರದಿಂದ ಹೆಚ್ ವಿಶ್ವನಾಥ್ ಉಪ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಅನುಮಾನ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಾಗ ವಿಶ್ವನಾಥ್ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಹೀಗಾಗಿ ಬೈ ಎಲೆಕ್ಷನ್ಗೆ ಮಗ ಅಮಿತ್ ದೇವರಹಟ್ಟಿಯನ್ನ ಹಾಕಿಸುವುದು ಪಕ್ಕಾ ಎನ್ನಲಾಗುತ್ತಿದೆ.

ಕೆ.ಆರ್. ಪುರದಿಂದ ಬಸವರಾಜು ಪತ್ನಿ..?
ಒಂದು ವೇಳೆ ಬೈರತಿ ಬಸವರಾಜುಗೆ ಅವಕಾಶ ಸಿಗದಿದ್ದರೆ ಅವರ ಪತ್ನಿ ಪದ್ಮಾವತಿಗೆ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆಯಿದೆ. ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತು ರೌಂಡ್ಸ್ ಹೊಡೆದಿರೋ ಪದ್ಮಾವತಿ.. ಬೈ ಎಲೆಕ್ಷನ್ ಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಒಂದು ವೇಳೆ ಬೈರತಿ ಬಸವರಾಜು ಪತ್ನಿ ಕಣಕ್ಕಿಳಿದ್ರೆ, ಅತ್ತ ಕಾಂಗ್ರೆಸ್ನಿಂದ ಬೈರತಿ ಸುರೇಶ್ ಪತ್ನಿ ಅಖಾಡಕ್ಕೆ ಇಳಿಯುವ ಸಾಧ್ಯತೆಯಿದೆ. ಒಂದು ವೇಳೆ ಹೀಗಾದಲ್ಲಿ ಅವರ ಕುಟುಂಬದ ನಡುವೆ ಬಿಗ್ ಫೈಟ್ ನಡೆಯಲಿದೆ.

ಯಶವಂತಪುರದಿಂದ ರಾಧಾ ಅಖಾಡಕ್ಕೆ..?
ಇನ್ನು ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಎಸ್ ಟಿ ಸೋಮಶೇಖರ್ ಪತ್ನಿ ರಾಧಾ ಅವರನ್ನ ಕಣಕ್ಕಿಳಿಸಲು ತಯಾರಿ ನಡೆದಿದೆ. ಆದರೆ ಎಸ್ ಟಿ ಸೋಮಶೇಖರ್ ಗೆ ಅವಕಾಶ ಸಿಕ್ಕರೆ ಅವರೇ ಉಪಚುನಾವಣೆಗೆ ನಿಲ್ಲಬಹುದು.

ಶಿವಾಜಿನಗರದಿಂದ ರೋಷನ್ ಬೇಗ್ ಪುತ್ರ..?
ಇನ್ನು ಬೆಂಗಳೂರಿನ ಮತ್ತೊಂದು ಕ್ಷೇತ್ರವಾದ ಶಿವಾಜಿನಗರದಿಂದ ರೋಷನ್ ಬೇಗ್ ಪುತ್ರ ರುಮಾನ್ ಬೇಗ್ ಗೆ ಬಿಜೆಪಿ ಟಿಕೆಟ್ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ರೋಷನ್ ಬೇಗ್ ಸಿದ್ಧತೆ ನಡೆಸಿದ್ದಾರೆ.

ಇನ್ನುಳಿದಂತೆ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್ ತಮ್ಮ ಪುತ್ರನನ್ನ ರಾಜಕೀಯಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅತ್ತ ಉತ್ತರಕನ್ನಡದ ಎಲ್ಲಾಪುರ ಕ್ಷೇತ್ರದಿಂದ ಮಗನನ್ನು ಕಣಕ್ಕಿಳಿಸಲು ಶಿವರಾಂ ಹೆಬ್ಬಾರ್ ಚಿಂತನೆ ನಡೆಸಿದ್ದಾರೆ. ಅಥಣಿ ಕ್ಷೇತ್ರದಿಂದ ಮಹೇಶ್ ಕುಮಟಳ್ಳಿ ಬದಲಾಗಿ ಡಿಸಿಎಂ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ಕೊಡಬಹುದು. ಇನ್ನು ರಾಣಿಬೆನ್ನೂರು ಕ್ಷೇತ್ರದಲ್ಲಿ ಅವಕಾಶ ಸಿಕ್ಕರೆ ಆರ್ ಶಂಕರ್ ತಾವೇ ಚುನಾವಣೆಗೆ ನಿಲ್ಲಲಿದ್ದಾರೆ.

ಫ್ರೆಂಡ್ಸ್ ಇದಿಷ್ಟು ಯಾವ ಕ್ಷೇತ್ರದಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋದರ ಬಗ್ಗೆ ಒಂದು ರಿಪೋರ್ಟ್. ಇದನ್ನು ನೋಡ್ತಿದ್ರೆ ಅನರ್ಹ ಶಾಸಕರಿಗೆ ಅವಕಾಶ ಸಿಕ್ಕರೆ ಬಹುತೇಕ ಅವರೇ ಉಪ ಚುನಾವಣೆಗೆ ನಿಲ್ಲಲಿದ್ದಾರೆ. ಇಲ್ಲದಿದ್ದರೆ ಅವರ ಪರವಾಗಿ ಪತ್ನಿ ಮಕ್ಕಳು ಅಥವಾ ಸಂಬಂಧಿಕರು ಬೈ ಎಲೆಕ್ಷನ್ ಅಖಾಡದಲ್ಲಿ ಧೂಳೆಬ್ಬಿಸಲಿದ್ದಾರೆ.

Contact Us for Advertisement

Leave a Reply