ತಿಂಗಳ ಮೊದಲ ದಿನವೇ ಶಾಕ್​! ಗ್ಯಾಸ್​ ಸಿಲಿಂಡರ್ ಬೆಲೆ ಮತ್ತೆ ಏರಿಕೆ

masthmagaa.com:

ಫೆಬ್ರವರಿ ತಿಂಗಳಲ್ಲಿ 3 ಬಾರಿ ಏರಿಕೆ ಕಂಡು ಜನಸಾಮಾನ್ಯರಿಗೆ ಹೊರೆಯಾಗಿದ್ದ LPG ಸಿಲಿಂಡರ್ ಬೆಲೆ ಮಾರ್ಚ್​ ತಿಂಗಳ ಮೊದಲ ದಿನವೇ ಮತ್ತೆ ಏರಿಕೆ ಕಂಡಿದೆ. ಆಯಿಲ್​ ಮಾರ್ಕೆಟಿಂಗ್ ಕಂಪನಿಗಳು (OMCs) ಗೃಹೋಪಯೋಗಿ ಅಡುಗೆ ಅನಿಲದ ಬೆಲೆಯನ್ನ ಸೋಮವಾರದಿಂದ 25 ರೂಪಾಯಿ ಹೆಚ್ಚು ಮಾಡಿವೆ. ಇದರ ಪರಿಣಾಮ ಬೆಂಗಳೂರಿನಲ್ಲೀಗ 14.2 ಕೆಜಿ ಸಿಲಿಂಡರ್ ಬೆಲೆ 822 ರೂಪಾಯಿ ಆಗಿದೆ. 4 ದಿನದ ಹಿಂದಷ್ಟೇ, ಅಂದ್ರೆ ಫೆಬ್ರವರಿ 25ರಂದು 25 ರೂಪಾಯಿ ಜಾಸ್ತಿ ಮಾಡಲಾಗಿತ್ತು. ಇದೀಗ ಮತ್ತೆ ಏರಿಕೆ ಮಾಡಲಾಗಿದೆ.

ಒಟ್ಟಾರೆ ಫೆಬ್ರವರಿ ಒಂದೇ ತಿಂಗಳಲ್ಲಿ ಒಟ್ಟು 100 ರೂಪಾಯಿ ಜಾಸ್ತಿಯಾಗಿತ್ತು ಗ್ಯಾಸ್ ಸಿಲಿಂಡರ್ ಬೆಲೆ. ಜನವರಿಯಲ್ಲಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಡಿಸೆಂಬರ್​ನಲ್ಲಿ 100 ರೂಪಾಯಿ ಏರಿಕೆಯಾಗಿತ್ತು. ಹೀಗೆ ಕಳೆದ 4 ತಿಂಗಳಲ್ಲಿ ಬರೋಬ್ಬರಿ 225 ರೂಪಾಯಿ ಜಾಸ್ತಿಯಾಗಿದೆ. ಒಂದ್ಕಡೆ ಪೆಟ್ರೋಲ್ ಮತ್ತು ಡೀಸೆಲ್ ರೇಟು ನಿರಂತರವಾಗಿ ಏರಿಕೆಯಾಗುತ್ತಿದೆ. ಅದರ ನಡುವೆಯೇ ಗೃಹ ಉಪಯೋಗಿ LPG ಸಿಲಿಂಡರ್ ಬೆಲೆ ಕೂಡ ಜಾಸ್ತಿಯಾಗ್ತಿರೋದು ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. LPG ನೈಸರ್ಗಿಕ ಅನಿಲ ಮತ್ತು ಕಚ್ಚಾ ತೈಲದ ಉಪ ಉತ್ಪನ್ನ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನೇದಿನೆ ಹಚ್ಚಾಗ್ತಿದೆ. ಇದರ ಪರಿಣಾಮ ಆಯಿಲ್​ ಮಾರ್ಕೆಟಿಂಗ್ ಕಂಪನಿಗಳು ಕೂಡ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಏರಿಸುತ್ತಿವೆ.

-masthmagaa.com

Contact Us for Advertisement

Leave a Reply