ಆರ್ಥಿಕ ಹಿಂಜರಿತ ಎಂದರೇನು..? ಜಿಡಿಪಿ ಎಂದರೇನು..?

ಆರ್ಥಿಕತೆ ಕುಸಿಯುತ್ತಿದೆ ಅಂತ ಯಾರಾದ್ರೂ ಮಾತನಾಡಿದ್ದನ್ನು ಕೇಳಿದ್ದೀರಾ?
ಖಂಡಿತ ಕೇಳಿರುತ್ತೀರಿ… ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆರ್ಥಿಕತೆ ಕುಸಿದು ಹೋಗುತ್ತಿದೆ, ಆರ್ಥಿಕ ಹಿಂಜರಿತ ಉಂಟಾಗುತ್ತಿದೆ ಅನ್ನೋ ಮಾತುಗಳನ್ನು ನೀವು ಆಗಾಗ ಕೇಳುತ್ತಿರುತ್ತೀರಿ. ಕಂಪನಿಗಳಿಂದ ಕೆಲಸದವರನ್ನು ತೆಗೆದುಹಾಕಲಾಗುತ್ತದೆ. ಹಲವು ಕಂಪನಿಗಳು ಬಾಗಿಲು ಹಾಕಿಕೊಳ್ಳುತ್ತಿವೆ ಅನ್ನೋದನ್ನ ಕೂಡ ನೀವು ಕೇಳಿರುತ್ತೀರಿ. ಆದರೆ ಏನಿದು ಅರ್ಥಿಕ ವ್ಯವಸ್ಥೆ ಕುಸಿಯುವುದು ಅಂದ್ರೆ.? ಏನಿದು ಆರ್ಥಿಕ ಹಿಂಜರಿತ? ಎಸ್ ಇದೇ ಪ್ರಶ್ನೆಗಳಿಗೆ ಇವತ್ತಿನ ವಿಶೇಷ ವರದಿಯಲ್ಲಿ ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ನಾವು ಉತ್ತರಿಸುವ ಪ್ರಯತ್ನವನ್ನು ಮಾಡುತ್ತೇವೆ.

ಆರ್ಥಿಕ ಹಿಂಜರಿತ ಎಂದರೇನು?
ಒಂದೇ ಲೈನ್ ನಲ್ಲಿ ಹೇಳಬೇಕು ಅಂದ್ರೆ ಯಾವುದೇ ದೇಶದ ಜಿಡಿಪಿ ಕಂಟಿನ್ಯೂಸ್ಲಿ 2 ತ್ರೈಮಾಸಿಕಗಳಲ್ಲಿ ಕುಸಿತ ಕಂಡರೆ ಅದನ್ನ ಆರ್ಥಿಕ ಹಿಂಜರಿತ ಆರಂಭವಾಗಿದೆ ಅಂತ ಹೇಳಬಹುದು. ಅಂದ್ರೆ ಕಂಟಿನ್ಯೂಸ್ಲಿ ಆರು ತಿಂಗಳ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಲೇ ಸಾಗಿದರೆ ಆರ್ಥಿಕ ಹಿಂಜರಿತ ಶುರುವಾಗಿದೆ ಎಂದು ಅರ್ಥ. ಇದನ್ನ ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದರೆ ಜಿಡಿಪಿ ಅಂದರೆ ಏನು ಅಂತ ಮೊದಲು ತಿಳಿದುಕೊಳ್ಳಬೇಕು.

ಜಿಡಿಪಿ ಎಂದರೇನು?
ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಷನ್ ಅಥವಾ ಒಟ್ಟು ರಾಷ್ಟ್ರೀಯ ಉತ್ಪನ್ನ ಅಂತ ಅರ್ಥ. ಅಂದರೆ ಒಂದು ದೇಶದ ಅರ್ಥವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ವಾಲ್ಯುಯೇಶನ್. ಅಂದ್ರೆ ಕೃಷಿ ಉತ್ಪನ್ನ, ಕೈಗಾರಿಕಾ ಉತ್ಪನ್ನ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದಲ್ಲಿನ ವಹಿವಾಟು, ಜನರ ಸಂಬಳ, ಆಮದು ರಫ್ತು ಎಲ್ಲವೂ ಸೇರಿ ಲೆಕ್ಕ ಹಾಕಿದಾಗ ಜಿಡಿಪಿ ಎಷ್ಟು ಅಂತ ಗೊತ್ತಾಗುತ್ತದೆ.

ಜಿಡಿಪಿ ಡೌನ್ ಆಗೋದಕ್ಕೂ ಆರ್ಥಿಕ ಹಿಂಜರಿತಕ್ಕೂ ಏನ್ ಸಂಬಂಧ?
ಸಂಬಂಧ ಇದೆ. ಆರ್ಥಿಕ ಹಿಂಜರಿತ ಉಂಟಾದಾಗ, ಜನ ಖರ್ಚು ಮಾಡೋದನ್ನ ಕಮ್ಮಿ ಮಾಡುತ್ತಾರೆ. ಮೊದಮೊದಲಿಗೆ ದುಬಾರಿ ಖರ್ಚುಗಳಾದ ಮನೆ, ಕಟ್ಟಡ ನಿರ್ಮಾಣ ಕಮ್ಮಿಯಾಗುತ್ತದೆ. ನಂತರದ ಹಂತದಲ್ಲಿ ಕಾರು ಇತ್ಯಾದಿ ವಾಹನಗಳ ಮಾರಾಟ ಕುಸಿಯುತ್ತದೆ. ಹಿಂಜರಿತ ಮತ್ತೂ ಜಾಸ್ತಿಯಾದಾಗ ಜನ ತಮ್ಮ ದಿನಬಳಕೆಯ ವಸ್ತುಗಳ ವಿಚಾರದಲ್ಲೂ ಕಂಜೂಸುತನ ಶುರು ಮಾಡುತ್ತಾರೆ. ಕೆಲವರ ಬಳಿ ದುಡ್ಡು ಇರುವುದಿಲ್ಲ. ಇನ್ನು ಕೆಲವರು ದುಡ್ಡಿದ್ದರೂ ಆರ್ಥಿಕ ಹಿಂಜರಿತ ಅಂತ ದುಡ್ಡು ಬಿಚ್ಚೋದಿಲ್ಲ. ಯಾವುದಕ್ಕೂ ಇರಲಿ ಅಂತ ಒಂದಷ್ಟು ದುಡ್ಡನ್ನು ಸೇಫಾಗಿ ಇಡಲು ಮುಂದಾಗುತ್ತಾರೆ. ಈ ಮೂಲಕ ದುಡ್ಡಿನ ಹರಿವು ಕಮ್ಮಿಯಾಗುತ್ತದೆ.

ಇಷ್ಟಕ್ಕೆ ಆರ್ಥಿಕ ಹಿಂಜರಿತ ಆಗುತ್ತಾ?
ಇದೊಂತರ ಚೈನ್ ಲಿಂಕ್ ರಿಯಾಕ್ಷನ್. ದುಡ್ಡಿನ ಹರಿವು ಕಮ್ಮಿಯಾಗಿ ಜನ ಖರ್ಚು ಮಾಡುವುದನ್ನು ಕಮ್ಮಿ ಮಾಡಿದರೆ, ಕಂಪನಿಗಳ ಉತ್ಪನ್ನಗಳಿಗೆ ಡಿಮಾಂಡ್ ಕಮ್ಮಿಯಾಗುತ್ತದೆ. ಕಂಪನಿಗಳ ಐಟಂಗಳು ಮಾರಾಟ ಆಗೋದಿಲ್ಲ. ಆಗ ಕಂಪನಿಗಳು ಅನಿವಾರ್ಯವಾಗಿ ಉತ್ಪಾದನೆಯನ್ನು ಕಮ್ಮಿ ಮಾಡಬೇಕಾಗುತ್ತದೆ. ಉತ್ಪಾದನೆ ಕಮ್ಮಿ ಮಾಡಿದಮೇಲೆ ಉದ್ಯೋಗಿಗಳನ್ನು ಇಟ್ಟುಕೊಂಡು ಏನು ಮಾಡುವುದು? ಆಗ ಅನಿವಾರ್ಯವಾಗಿ ಹೆಚ್ಚಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಮನೆಗೆ ಕಳಿಸಬೇಕಾಗುತ್ತದೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗುತ್ತದೆ. ಇದೊಂಥರ ವಿಷಚಕ್ರ ಇದ್ದಹಾಗೆ. ಏಕೆಂದರೆ ಜನ ನಿರುದ್ಯೋಗಿಗಳಾಗೋದ್ರಿಂದ ಮಾರ್ಕೆಟ್ನಲ್ಲಿ ದುಡ್ಡಿನ ಓಡಾಟ ಇನ್ನಷ್ಟು ಕಮ್ಮಿಯಾಗುತ್ತದೆ. ಆರ್ಥಿಕ ಹಿಂಜರಿತ ಇನ್ನು ಜೋರಾಗುತ್ತದೆ.

ಆರ್ಥಿಕ ಹಿಂಜರಿತ ಸರಿಯಾಗೋದು ಹೇಗೆ?
ಆರ್ಥಿಕ ತಜ್ಞರ ಪ್ರಕಾರ ಇದೊಂದು ಸಹಜ ಪ್ರಕ್ರಿಯೆ. ಪ್ರತಿಯೊಂದು ದೇಶದ ಆರ್ಥಿಕತೆಯಲ್ಲಿ ಪ್ರತಿ ಕೆಲವು ವರ್ಷಗಳಿಗೊಮ್ಮೆ ಈ ರೀತಿ ಆಗುತ್ತದೆ. 2007ರಲ್ಲಿ ಇಡೀ ಜಗತ್ತಿನಲ್ಲಿ ಆರ್ಥಿಕ ಹಿಂಜರಿತ ಉಂಟಾಗಿತ್ತು. ಅದರ ಪರಿಣಾಮ 2008 – 9ರಲ್ಲಿ ಭಾರತದಲ್ಲಿ ಅತ್ಯಂತ ಕೆಟ್ಟ ಪ್ರಮಾಣದ ಆರ್ಥಿಕ ಹಿಂಜರಿತ ಉಂಟಾಗಿತ್ತು. ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಭಾರತದ ಜಿಡಿಪಿ ಶೇಕಡಾ 4ರವರೆಗೂ ಇಳಿದಿತ್ತು. ಈಗ ಸರಿಯಾಗಿ ಹತ್ತು ವರ್ಷಗಳ ಬಳಿಕ ಮತ್ತೆ ಜಾಗತಿಕ ಆರ್ಥಿಕ ಹಿಂಜರಿತ ಬಂದುನಿಂತಿದೆ. ಭಾರತದಲ್ಲೂ ಅದರ ಪರಿಣಾಮ ಕಾಣುತ್ತಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಅನ್ನುವಂತಹ ಹಣೆಪಟ್ಟಿಯಿಂದ ಜಾರಿರುವ ಭಾರತದ ಜಿಡಿಪಿ 8 ಪರ್ಸೆಂಟ್ ಇದ್ದಿದ್ದು ಈಗ 5 ಪರ್ಸೆಂಟ್ ಗೆ ಇಳಿದಿದೆ. ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ಪಡುತ್ತಿದೆ. ಮುಂದೆ ಹಬ್ಬಗಳು ಬರ್ತಾ ಇರೋದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಅನ್ನುವ ಲೆಕ್ಕಾಚಾರದಲ್ಲಿ ಸರ್ಕಾರ ಇದೆ. ಸುಧಾರಿಸಿದರೆ ಓಕೆ. ಇಲ್ಲದೆ ಹೋದರೆ ಸರ್ಕಾರ ಏನು ಮಾಡುತ್ತೆ ಅಂತ ಕಾದು ನೋಡಬೇಕು.

Contact Us for Advertisement

Leave a Reply