ಇದು ನಮ್ಮ ಸಂವಿಧಾನದ ಕಥೆ.. ಇದು ನಮ್ಮ ಗಣರಾಜ್ಯದ ಇತಿಹಾಸ..!

masthmagaa.com:

ಹಾಯ್ ಫ್ರೆಂಡ್ಸ್, ಇವತ್ತು ಭಾರತಕ್ಕೆ 72ನೇ ಗಣರಾಜ್ಯೋತ್ಸವದ ಸಂಭ್ರಮ.. ಪ್ರತಿವರ್ಷ ಧ್ವಜ ಹಾರಿಸಿ, ಪರೇಡ್ ಮಾಡಿ, ಸಿಹಿ ಹಂಚಿ ಈ ರಾಷ್ಟ್ರೀಯ ಹಬ್ಬವನ್ನು ಆಚರಿಸಲಾಗುತ್ತೆ. ಆದ್ರೆ ಜನವರಿ 26ರಂದೇ ಯಾಕೆ ಆಚರಣೆ ಮಾಡ್ತಾರೆ ಅನ್ನೋ ಪ್ರಶ್ನೆ ಯಾರಿಗಾದ್ರೂ ಮೂಡಿದ್ಯಾ..? 1950ರ ಜನವರಿ 26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯ್ತು. ಹೀಗಾಗಿ ಆ ದಿನವನ್ನು ಗಣರಾಜ್ಯೋತ್ಸವವನ್ನಾಗಿ ಆಚರಿಸಲಾಗುತ್ತೆ ಅಂತ ನೀವು ಹೇಳ್ಬೋದು.. ಹಾಗಾದ್ರೆ ಸಂವಿಧಾನವನ್ನು ಜನವರಿ 26ರಂದೇ ಯಾಕೆ ಅಳವಡಿಸಿಕೊಳ್ಳಲಾಯ್ತು ಅನ್ನೋ ಪ್ರಶ್ನೆ ಮೂಡುತ್ತೆ.

ಅದ್ರ ಹಿಂದೆ ಒಂದ್ ಕಥೆ ಇದೆ.. ಆಗ ಬ್ರಿಟಿಷರು ಭಾರತದಲ್ಲಿ ಆಳ್ವಿಕೆ ನಡೆಸ್ತಾ ಇದ್ರು. ಭಾರತದಲ್ಲಿ ಸ್ವಾತಂತ್ರ್ಯದ ಕೂಗು ದಿನೇ ದಿನೇ ಜಾಸ್ತಿ ಆಗ್ತಿದ್ದ ಸಮಯವದು.. ಹೀಗಿರಬೇಕಾದ್ರೆ 1,929ರಲ್ಲಿ ಲಾಹೋರ್​​​​ನಲ್ಲಿ ಕಾಂಗ್ರೆಸ್ ಅಧಿವೇಶನ ನಡೀತು.. ಲಾಹೋರ್ ಆಗಿನ್ನೂ ಭಾರತದಲ್ಲೇ ಇತ್ತು.. ಯಾಕಂದ್ರೆ ಅಗಿನ್ನೂ ಭಾರತ, ಪಾಕಿಸ್ತಾನ ಡಿವೈಡ್ ಆಗಿರಲಿಲ್ಲ. ಕಾಂಗ್ರೆಸ್ ಅಧಿವೇಶನ ಅಂದ್ರೆ ಇಂದಿನ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಾಂಗ್ರೆಸ್ ಅಲ್ಲ.. ಸ್ವಾತಂತ್ರ್ಯಕ್ಕಾಗಿ ಹೋರಾಡಿತ್ತಲ್ವಾ ಆ ಕಾಂಗ್ರೆಸ್.. ಆ ಅಧಿವೇಶನದ ಅಧ್ಯಕ್ಷತೆಯನ್ನು ಜವಾಹರ್ ಲಾಲ್ ನೆಹರೂ ವಹಿಸಿಕೊಂಡಿದ್ರು. ಇಲ್ಲಿ ಒಂದು ನಿರ್ಣಯ ಅಂಗೀಕರಿಸಲಾಯ್ತು. ಅದೇನಂದ್ರೆ 1,930ರ ಜನವರಿ 26ರ ಒಳಗಾಗಿ ಬ್ರಿಟಿಷರು ನಮಗೆ ಸ್ವರಾಜ್ಯದ ಅಧಿಕಾರ ನೀಡಬೇಕು.. ಸ್ವರಾಜ್ಯ ಅಂದ್ರೆ ಭಾರತದ ಆಡಳಿತದ ಚುಕ್ಕಾಣಿಯನ್ನು ಭಾರತೀಯರಿಗೇ ನೀಡೋದು. ಒಂದ್ವೇಳೆ ಸ್ವರಾಜ್ಯದ ಅಧಿಕಾರ ನೀಡದೇ ಇದ್ರೆ ಕ್ರಾಂತಿಯಾಗುತ್ತೆ.. ಭಾರತವೇ ತನ್ನ ಒಕ್ಕೂಟದ ಸ್ವಾತಂತ್ರ್ಯ ಘೋಷಿಸಿಕೊಳ್ಳುತ್ತೆ.. ದೊಡ್ಡ ಕ್ರಾಂತಿಯಾಗುತ್ತೆ ಅನ್ನೋದು ಆ ನಿರ್ಣಯವಾಗಿತ್ತು. ಆದ್ರೆ ಕೆಂಪು ಮೂತಿ ಬ್ರಿಟಿಷರು ಜಗ್ಗಲೇ ಇಲ್ಲ.. ಹೀಗಾಗಿ ರಾವಿ ನದಿ ದಡದಲ್ಲಿ 1,930ರ ಜನವರಿ 26ರಂದು ನೆಹರೂ ಧ್ವಜಾರೋಹಣ ಮಾಡಿದ್ರು. ಜೊತೆಗೆ ಭಾರತ ಸ್ವತಂತ್ರ ದೇಶ ಅಂತ ಘೋಷಿಸಿದ್ರು. ಅಂದಿನಿಂದ ಕಾಂಗ್ರೆಸ್ ಜನವರಿ 26ನ್ನು ಸ್ವರಾಜ್ಯದ ದಿನ ಅಂತ ಆಚರಿಸಿಕೊಂಡು ಬಂತು. ನಂತರ 1,947ರಲ್ಲಿ ಸ್ವಾತಂತ್ರ್ಯ ಬಂತು.. ಡಾ.ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ದೇಶದ ಆತ್ಮ ಸಂವಿಧಾನ ರಚಿಸಲಾಯ್ತು. 1949ರ ನವೆಂಬರ್ 26ರಂದೇ ಸಂವಿಧಾನ ರಚನೆಯಾಗಿತ್ತು. ಆದ್ರೆ ಪೂರ್ಣ ಸ್ವರಾಜ್ಯದ ನೆನಪಲ್ಲಿ 1950 ಜನವರಿ 26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯ್ತು.

ಸಂವಿಧಾನದ ಬಗ್ಗೆ ಪ್ರೈಮರಿ ಸ್ಕೂಲಿಂದಾನೇ ಪಾಠ ಪುಸ್ತಕಗಳಲ್ಲಿ ಓದಿದ್ದೀವಿ.. ದೊಡ್ಡ ದೊಡ್ಡ ನಾಯಕರು ಸಂವಿಧಾನದ ಹೆಸರಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದನ್ನೂ ನೋಡಿದ್ದೀವಿ.. ಹಾಗಾದ್ರೆ ದೇಶದ ಆತ್ಮ, ಆ ಸಂವಿಧಾನ ಹೇಗಿದೆ ಅಂತ ಯಾರಾದ್ರೂ ಯೋಚ್ನೆ ಮಾಡಿದ್ದೀರಾ..? ನಿಮಗೊತ್ತಾ.. ಸಂವಿಧಾನವನ್ನು ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಕೈಬರಹದಿಂದಲೇ ಬರೆಯಲಾಗಿತ್ತು. ಅದರ ಮೇಲಿರೋ ಚಿತ್ರಗಳನ್ನು ಕೈಯಿಂದಲೇ ಬಿಡಿಸಲಾಗಿತ್ತು. ಅದಕ್ಕಾಗಿ ಯಾವುದೇ ಪ್ರಿಂಟ್ ಅಥವಾ ಟೈಪಿಂಗ್ ಮಶೀನ್ ಯೂಸ್ ಮಾಡಿರಲಿಲ್ಲ. ಪ್ರೇಮ್ ಬಿಹಾರಿ ನರೇನ್ ರಾಯ್ ಜಾದಾ ಅನ್ನೋರು ಇಟಾಲಿಯನ್ ಶೈಲಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಂವಿಧಾನ ಬರೆದ್ರು. ಅದೇ ರೀತಿ ಹಿಂದಿಯಲ್ಲಿ ವಸಂತ ಕೃಷ್ಣ ವೈದ್ಯ ಅನ್ನೋರು ಬರೆದ್ರು. ಸಂವಿಧಾನದಲ್ಲಿರೋ ಚಿತ್ರಗಳ ಹಿಂದೆಯೂ ಕಥೆ ಇದೆ. ಒಮ್ಮೆ ನೆಹರೂ ಶಾಂತಿನಿಕೇತನಕ್ಕೆ ಹೋದಾಗ ನಂದಲಾಲ್ ಬೋಸ್ ಅವರನ್ನು ಭೇಟಿಯಾದ್ರು. ಅವರ ಕಲೆ ಕಂಡ ನೆಹರೂ, ಸಂವಿಧಾನ ರಚನೆಯಾಗ್ತಾ ಇದೆ.. ಅದಕ್ಕೆ ನೀವು ಚಿತ್ರಗಳನ್ನು ಬಿಡಿಸಿ, ಅದರ ಅಂದವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ರು. ದೇಶದ ಸಂವಿಧಾನದಲ್ಲಿ ತನ್ನ ಕಲೆಯನ್ನು ಪ್ರದರ್ಶಿಸುವ ಅವಕಾಶ ಸಿಗುತ್ತೆ ಅಂದ್ರೆ ಯಾವ ಕಲಾವಿದ ತಾನೆ ಬೇಡ ಅಂತಾನೆ.. ನಂದಲಾಲ್ ಬೋಸ್ ಕೂಡಲೇ ಒಪ್ಪಿಕೊಂಡ್ರು. ಅದ್ರಂತೆ ಮುಂದಿನ 4 ವರ್ಷಗಳಲ್ಲಿ ಬೋಸ್ ಮತ್ತು ಅವರ ವಿದ್ಯಾರ್ಥಿಗಳು ಸಂವಿಧಾನದ 22 ಅಧ್ಯಾಯಗಳಲ್ಲಿ 22 ಚಿತ್ರಗಳನ್ನು ಬಿಡಿಸಿ, ಹಲವು ಡಿಸೈನ್‍ಗಳನ್ನು ಮಾಡಿದ್ರು.

ಮೊದಲನೆಯದಾಗಿ ಭಾರತದ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ ಬಿಡಿಸಲಾಗಿದೆ. ಇದಲ್ಲದೆ ನಟರಾಜ, ಶ್ರೀಕೃಷ್ಣ, ಶಾಂತಿಯ ಉಪದೇಶ ನೀಡುತ್ತಿರುವ ಬುದ್ಧ, ಯಜ್ಞಗಳನ್ನು ನಡೆಸುತ್ತಿರುವ ಋಷಿ-ಮುನಿಗಳು, ಕಮಲ, ಸ್ವರ್ಗದಿಂದ ಬರುತ್ತಿರುವ ಗಂಗೆ, ರಾಣಿ ಲಕ್ಷ್ಮೀಭಾಯಿ, ಗುರು ಗೋವಿಂದ್ ಸಿಂಗ್ ಹೀಗೆ ಹಲವು ಚಿತ್ರಗಳನ್ನು ಬಿಡಿಸಲಾಗಿದೆ. ಈ ಮೂಲಕ ನಮ್ಮ ದೇಶ ವಿವಿಧ ಸಂಸ್ಕøತಿಯಿಂದ ಕೂಡಿ ನಿರ್ಮಾಣವಾಗಿದೆ ಅನ್ನೋದನ್ನ ತೋರಿಸಲಾಗಿದೆ. ಸಂವಿಧಾನಕ್ಕಾಗಿ ಆಗಿನ ಕಾಲದಲ್ಲೇ 6.3 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇನ್ನೊಂದು ವಿಷ್ಯ ಅಂದ್ರೆ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಅದೇ ರೀತಿ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರೋ ದೇಶ ಕೂಡ ಭಾರತವೇ ಆಗಿದೆ. ಸಂವಿಧಾನದ ಮೊದಲ ಪುಟದಲ್ಲಿ ಸಂವಿಧಾನದ ಆತ್ಮ ಇದೆ.. ಅಂದ್ರೆ ಪ್ರಸ್ತಾವನೆ ಇದೆ.. ಭಾರತೀಯರಾದ ನಾವು ಅನ್ನೋ ಮೂಲಕ ಪ್ರಸ್ತಾವನೆ ಶುರುವಾಗುತ್ತೆ. ಸಂವಿಧಾನದಲ್ಲಿ ತಿದ್ದುಪಡಿ ಆದ್ರೂ ಇದ್ರಲ್ಲಿ ಯಾವುದೇ ತಿದ್ದುಪಡಿ ಮಾಡುವಂತಿಲ್ಲ.. ಆದ್ರೂ ಕೂಡ 1976ರಲ್ಲಿ ಸಮಾಜವಾದ, ಜಾತ್ಯಾತೀತ, ರಾಷ್ಟ್ರೀಯ ಸಮಗ್ರತೆ ಅನ್ನೋ ಪದಗಳನ್ನು ಇದ್ರಲ್ಲಿ ಸೇರಿಸಲಾಯ್ತು. 2 ವರ್ಷ 11 ತಿಂಗಳು 17 ದಿನಗಳನ್ನು ತೆಗೆದುಕೊಂಡು ಸಂವಿಧಾನ ಸಿದ್ಧಪಡಿಸಿದ್ರೂ ಕೂಡ ಅಳವಡಿಸಿಕೊಂಡ ಒಂದೇ ವರ್ಷದಲ್ಲಿ ತಿದ್ದುಪಡಿ ಅನಿವಾರ್ಯವಾಯ್ತು. 1951ರಲ್ಲಿ ಮೊದಲ ತಿದ್ದುಪಡಿ ಮಾಡಿ, ಅಭಿವ್ಯಕ್ತ ಸ್ವಾತಂತ್ರ್ಯ, ಜಮೀನ್ದಾರಿ ಪದ್ಧತಿ ರದ್ದತಿಯ ವಿಚಾರಗಳನ್ನು ಸೇರಿಸಲಾಯ್ತು. ಅಲ್ಲಿಂದ ಇಲ್ಲಿವರೆಗೆ 104 ತಿದ್ದುಪಡಿಗಳನ್ನು ಮಾಡಲಾಗಿದೆ.

ಸಂವಿಧಾನ ತಿದ್ದುಪಡಿ ಹೇಗಾಗುತ್ತೆ..?
ಸಂವಿಧಾನ ರಚಿಸಿದ ಡಾ.ಬಿಆರ್ ಅಂಬೇಡ್ಕರ್ ಅವರೇ ಸಂವಿಧಾನ ತಿದ್ದುಪಡಿಗೂ ಮಾರ್ಗ ಸೂಚಿಸಿದ್ದಾರೆ. ಕೆಲವೊಂದು ತಿದ್ದುಪಡಿಗಳಿಗೆ ಸಂಸತ್‍ನ ಸಾಮಾನ್ಯ ಬಹುಮತ ಸಾಕಾಗುತ್ತೆ. ಇನ್ನು ಕೆಲವು ತಿದ್ದುಪಡಿಗಳಿಗೆ ಸಂಸತ್‍ನ 3ನೇ 2ರಷ್ಟು ಬಹುಮತ ಅಗತ್ಯ.. ಅದೇ ರೀತಿ ಕೆಲವೊಂದು ತಿದ್ದುಪಡಿಗಳಿಗೆ ರಾಜ್ಯಗಳ ವಿಧಾನಮಂಡಲದ ಸಮ್ಮತಿ ಕೂಡ ಬೇಕಾಗುತ್ತೆ. ಹೀಗೆ ಅಂಗೀಕಾರಗೊಂಡ ತಿದ್ದುಪಡಿ ಮಸೂದೆ ರಾಷ್ಟ್ರಪತಿಗಳ ಸಹಿಯೊಂದಿಗೆ ಅಸ್ತಿತ್ವಕ್ಕೆ ಬರುತ್ತೆ.. ಸರ್ಕಾರ ಇದೆ.. ಬಹುಮತ ಇದೆ ಅಂತ ಬಾಯಿಗ್ ಬಂದಂಗೆ ಸಂವಿಧಾನ ತಿದ್ದುಪಡಿ ಮಾಡಕ್ಕಾಗಲ್ಲ. ಸಂವಿಧಾನ ಬದಲಾವಣೆಗೂ ಒಂದು ಲಿಮಿಟ್ ಇದೆ.. ಅಂದ್ರೆ ಯಾವುದೇ ತಿದ್ದುಪಡಿ ಸಂವಿಧಾನದ ಮೂಲಕ್ಕೆ ಧಕ್ಕೆ ತರುವಂತಿಲ್ಲ.. ಲಿಮಿಟ್ ದಾಟಿ ಹೋಗದಂತೆ ಸುಪ್ರೀಂಕೋರ್ಟ್ ನೋಡಿಕೊಳ್ಳುತ್ತೆ.. 72 ವರ್ಷಗಳಷ್ಟು ಹಳೆಯ ಈ ಸಂವಿಧಾನದ ಪುಸ್ತಕವನ್ನು ಸಂಸತ್ ಭವನದ ಲೈಬ್ರರಿಯಲ್ಲಿ ಹೀಲಿಯಂ ತುಂಬಿದ ಬಾಕ್ಸ್​​​​ನಲ್ಲಿ ಇರಿಸಲಾಗಿದೆ.

-masthmagaa.com

Contact Us for Advertisement

Leave a Reply