masthmagaa.com:

ಕೊರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಕೊರೋನಾ ಬಿಕ್ಕಟ್ಟನ್ನು ಭಾರತಕ್ಕಿಂತ ಪಾಕಿಸ್ತಾನ ಮತ್ತು ಅಫ್ಘನಿಸ್ತಾನದಂತಹ ದೇಶಗಳೇ ಚೆನ್ನಾಗಿ ನಿಭಾಯಿಸಿವೆ’ ಅಂತ ಹೇಳಿದ್ದಾರೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ 10.30%ಯಷ್ಟು ಕುಸಿಯಲಿದೆ ಅಂತ ಅಂದಾಜಿಸಿತ್ತು. ಜಿಡಿಪಿ ಕುಸಿತಕ್ಕೆ ಕೊರೋನಾ ಮತ್ತು ಲಾಕ್​ಡೌನ್​ ಕಾರಣ ಅಂತ ಐಎಂಎಫ್ ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಒಂದು ಗ್ರಾಫ್​ ಅನ್ನು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಬಿಜೆಪಿ ಸರ್ಕಾರದ ಮತ್ತೊಂದು ದೊಡ್ಡ ಸಾಧನೆ. ಪಾಕಿಸ್ತಾನ ಮತ್ತು  ಅಫ್ಘನಿಸ್ತಾನದಂತಹ ದೇಶಗಳೇ ಭಾರತಕ್ಕಿಂತ ಉತ್ತಮ ರೀತಿಯಲ್ಲಿ ಕೊರೋನಾವನ್ನು ನಿಭಾಯಿಸಿವೆ’ ಅಂತ ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ಗ್ರಾಫ್​ನಲ್ಲಿ ಭಾರತದ ಆರ್ಥಕತೆ 2020-21ರಲ್ಲಿ 10.30 ಪರ್ಸೆಂಟ್​ನಷ್ಟು ಕುಸಿತ ಕಂಡರೆ.. ಅಫ್ಘನಿಸ್ತಾನದ ಜಿಡಿಪಿ 5 ಪರ್ಸೆಂಟ್​ನಷ್ಟು ಮತ್ತು ಪಾಕಿಸ್ತಾನದ ಜಿಡಿಪಿ 0.40 ಪರ್ಸೆಂಟ್​ನಷ್ಟು ಮಾತ್ರ ಕುಸಿಯಲಿದೆ ಅಂತ ತೋರಿಸಲಾಗಿದೆ. ಅಂದ್ರೆ ಪಾಕ್ ಮತ್ತು ಅಫ್ಘನಿಸ್ತಾನಗಳು ಕೊರೋನಾವನ್ನು ಉತ್ತಮವಾಗಿ ನಿಭಾಯಿಸಿವೆ. ಇದರಿಂದ ಆ ದೇಶಗಳ ಜಿಡಿಪಿ ಭಾರತದಷ್ಟು ಕುಸಿದಿಲ್ಲ ಅನ್ನೋ ರೀತಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಆದ್ರೆ ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ವೈರಿ ದೇಶ ಪಾಕಿಸ್ತಾನದ ಜೊತೆಗೆ ಭಾರತವನ್ನು ಹೋಲಿಸಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮತ್ತೊಂದು ವಿಚಾರ ಅಂದ್ರೆ ಪಾಕ್​ನಲ್ಲಿ ಪ್ರತಿದಿನ 10ರಿಂದ 15 ಸಾವಿರ ಕೊರೋನಾ ಪರೀಕ್ಷೆಗಳನ್ನ ಮಾತ್ರ ಮಾಡಲಾಗ್ತಿದೆ. ಆದ್ರೆ ಭಾರತದಲ್ಲಿ ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗ್ತಿದೆ. ಅಲ್ಲದೆ ಕೊರೋನಾ ಸೋಂಕಿತರ ಸಂಖ್ಯೆಯನ್ನು ಕೂಡ ಪಾಕ್ ಸರಿಯಾಗಿ ಕೊಡ್ತಿಲ್ಲ ಅನ್ನೋ ಆರೋಪವಿದೆ. ಜೊತೆಗೆ ಗಡಿಯಲ್ಲಿ ಚೀನಾ ಮತ್ತು ಪಾಕ್​ ತಂಟೆ ಮಾಡುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ರೀತಿ ಹೇಳಿರೋದು ಗಮನಾರ್ಹ.

-masthmagaa.com

Contact Us for Advertisement

Leave a Reply