masthmagaa.com:

ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಗೃಹಬಂಧನಕ್ಕೆ ಒಳಗಾಗಿದ್ದ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮಂಗಳವಾರ ತಡರಾತ್ರಿ ಬಿಡುಗಡೆಯಾಗಿದ್ದಾರೆ. ಒಟ್ಟು 14.5 ತಿಂಗಳುಗಳ ಕಾಲ ಅವರು ಗೃಹ ಬಂಧನದಲ್ಲಿದ್ದರು ಅನ್ನೋದು ಇಲ್ಲಿ ಗಮನಾರ್ಹ.

2019ರ ಅಕ್ಟೋಬರ್​ನಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವಾಗ ಮುಂಜಾಗ್ರತಾ ಕ್ರಮವಾಗಿ ಹಲವು ರಾಜಕೀಯ ಮುಖಂಡರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಗೃಹಬಂಧನದಲ್ಲಿ ಇಡಲಾಗಿತ್ತು. ಪರಿಸ್ಥಿತಿ ಸಹಜಸ್ಥಿತಿಗೆ ಬರುತ್ತಿದ್ದಂತೇ ಒಬ್ಬೊಬ್ಬರನ್ನೇ ಬಿಡುಗಡೆ ಮಾಡಲಾಯ್ತು. ಅದರಂತೆ ಈಗ ಮೆಹಬೂಬಾ ಮುಫ್ತಿ ಕೂಡ ಬಿಡುಗಡೆಯಾಗಿದ್ದಾರೆ.

ಬಿಡುಗಡೆ ಬಳಿಕ ಮಾತನಾಡಿರುವ ಮೆಹಬೂಬಾ ಮುಫ್ತಿ, ‘ಕೇಂದ್ರ ಸರ್ಕಾರವು ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ವಿಧಾನಗಳ ಮೂಲಕ ನಮ್ಮಿಂದ ಕಸಿದುಕೊಂಡ ಎಲ್ಲವನ್ನೂ ಮರಳಿ ಪಡೆಯಬೇಕಿದೆ. ಅದಕ್ಕಾಗಿ ಹೋರಾಟ ಮುಂದುವರಿಯುತ್ತದೆ’ ಅಂತ ಹೇಳಿದ್ದಾರೆ. ಈ ಮೂಲಕ ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಿದ್ದ ವಿಶೇಷ ಸ್ಥಾನಮಾನ ಮತ್ತು ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶ ಮಾಡಿದ್ದರ ವಿರುದ್ಧ ಹೋರಾಡುತ್ತೇವೆ ಅನ್ನೋ ರೀತಿ ಮಾತನಾಡಿದ್ದಾರೆ.

ಮತ್ತೊಂದುಕಡೆ ನ್ಯಾಷನಲ್​ ಕಾನ್ಫರೆನ್ಸ್​ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಇವತ್ತು ಮೆಹಬೂಬಾ ಮುಫ್ತಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಓಮರ್ ಅಬ್ದುಲ್ಲಾ, ‘ನಾವು ಮೆಹಬೂಬಾ ಮುಫ್ತಿಯವರನ್ನು ನೋಡಲು ಬಂದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply