masthmagaa.com:

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕೃಷಿ ಕಾಯ್ದೆಗಳು ಈಗ ರಾಜ್ಯ-ರಾಜ್ಯಗಳ ನಡುವೆ ಜಗಳ ತಂದಿಟ್ಟಿದೆ. ಏನಾಗಿದೆ ಅಂದ್ರೆ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ಸೇರಿದಂತೆ ವಿವಿಧ ರಾಜ್ಯದ ರೈತರು ‘ದೆಹಲಿ ಚಲೋ’ ಮೆರವಣಿಗೆ ಕೈಗೊಂಡಿದ್ದಾರೆ. ಆದ್ರೆ ಪ್ರತಿಭಟನಾಕಾರರನ್ನ ಹರಿಯಾಣದಲ್ಲೇ ತಡೆ ಹಿಡಿಯಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್, ‘ರೈತರು ದೆಹಲಿಗೆ ಹೋಗೋದನ್ನ ಹರಿಯಾಣ ಸರ್ಕಾರ ತಡೆಯುತ್ತಿದೆ. ಇಂತಹ ಕ್ರಮ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ. ಇದನ್ನ ನಾವು ಖಂಡಿಸುತ್ತೇವೆ’ ಅಂತ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಆಡಳಿತವಿರುವ ಹರಿಯಾಣ ಸಿಎಂ ಮನೋಹರ್​ಲಾಲ್ ಖಟ್ಟರ್, ‘ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೇ ನಾನು ಮತ್ತೊಮ್ಮೆ ಹೇಳ್ತಿದ್ದೀನಿ, ಕಾಯ್ದೆಯಿಂದ ಕನಿಷ್ಠ ಬೆಂಬಲ ಬೆಲೆಗೆ (MSP) ಏನಾದ್ರೂ ತೊಂದರೆ ಇದ್ರೆ ನಾನು ರಾಜಕೀಯವನ್ನೇ ಬಿಟ್ಟುಬಿಡ್ತೀನಿ. ಹೀಗಾಗಿ ದಯವಿಟ್ಟು ಮುಗ್ಧ ರೈತರನ್ನು ಪ್ರಚೋದಿಸುವುದನ್ನು ನಿಲ್ಲಿಸಿ. ಕಳೆದ 3 ದಿನಗಳಿಂದ ನಿಮ್ಮನ್ನ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಆದ್ರೆ ನೀವು ಮಾತ್ರ ನಂಗೆ ಸಿಗ್ಲೇ ಬಾರ್ದು ಅನ್ಕೊಂಡಿದ್ದೀರಾ ಅನ್ಸುತ್ತೆ’ ಅಂತ ಟಾಂಗ್ ಕೊಟ್ಟಿದ್ದಾರೆ.

ಹೀಗೆ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದ ಎರಡು ರಾಜ್ಯಗಳು ಕಿತ್ತಾಡಿಕೊಂಡ್ರೆ ಅತ್ತ ದೆಹಲಿಯ ಆಮ್​ ಆದ್ಮಿ ಸರ್ಕಾರ ಕೂಡ ಇದಕ್ಕೆ ಎಂಟ್ರಿಕೊಟ್ಟಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಏನ್ ಹೇಳಿದ್ದಾರೆ ಅಂದ್ರೆ, ‘ಕೇಂದ್ರ ಸರ್ಕಾರದ ಮೂರೂ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿದೆ. ಈ ಕಾಯ್ದೆಗಳನ್ನ ವಾಪಸ್ ಪಡೆಯುವ ಬದಲು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ರೈತರಿಗೆ ಅಡ್ಡಿಪಡಿಸಲಾಗ್ತಿದೆ. ಅವರ ಮೇಲೆ ಜಲ ಫಿರಂಗಿಗಳನ್ನ ಪ್ರಯೋಗಿಸಲಾಗ್ತಿದೆ. ರೈತರ ಮೇಲಿನ ಈ ಕ್ರಮ ಸರಿ ಇಲ್ಲ. ಶಾಂತಿಯುತ ಪ್ರತಿಭಟನೆ ಅವರ ಸಾಂವಿಧಾನಿಕ ಹಕ್ಕು’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply