masthmagaa.com:

ಭಾರಿ ಮಳೆ ಮತ್ತು ಪ್ರವಾಹಕ್ಕೆ ಕಲಬುರಗಿ ಜಿಲ್ಲೆ ತತ್ತರಿಸಿ ಹೋಗಿದೆ. ಮಳೆಯ ಅಬ್ಬರ ಕಡಿಮೆಯಾದ್ರೂ ಪ್ರವಾಹ ಪರಿಸ್ಥಿತಿ ಹಾಗೇ ಇದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ಮಾತ್ರ ಅತ್ತ ಗಮನನೇ ಹರಿಸುತ್ತಿಲ್ಲ. ಈ ಬಗ್ಗೆ ಆಕ್ರೋಶ ಕೇಳಿ ಬಂದ ಬೆನ್ನಲ್ಲೇ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಡಿಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಾನು ಕ್ವಾರಂಟೈನ್​ನಲ್ಲಿದ್ದೆ. ಕೊರೋನಾ ಬಂದಿದ್ದ ಹಿನ್ನೆಲೆ ನನಗೆ ಪ್ರವಾಹಪೀಡಿತ ಪ್ರದೇಶಗಳಿಗೆ ಹೋಗಲು ಆಗಿಲ್ಲ ಅಂತ ಕಾರಣ ನೀಡಿದ್ರು. ಆದ್ರೆ ಅದೇ ಗೋವಿಂದ ಕಾರಜೋಳ ಈಗ ತುಮಕೂರು ಜಿಲ್ಲೆಯ ಸಿರಾ ಉಪಚುನಾವಣೆ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ಸಿರಾ ಬಿಜೆಪಿ ಅಭ್ಯರ್ಥಿ ರಾಜೇಶ್​ಗೌಡ ನಾಮಪತ್ರ ಸಲ್ಲಿಸುವಾಗ ಕಾರಜೋಳ ಕೂಡ ಕಾಣಿಸಿಕೊಂಡರು. ತಮಗೆ ಉಸ್ತುವಾರಿ ನೀಡಿದ್ದ ಜಿಲ್ಲೆಯ ಜನರ ಸಮಸ್ಯೆಗೆ ಕಿವಿಗೊಡದ ಸಚಿವರು ಉಪಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರೋದು ಕಲಬುರಗಿ ಜಿಲ್ಲೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಮತ್ತೊಬ್ಬ ಉಪಮುಖ್ಯಮಂತ್ರಿಯಾದ ಡಾ. ಅಶ್ವತ್ಥ್​ ನಾರಾಯಣ ಟ್ವೀಟ್ ಮಾಡಿ ‘ಸಿರಾದಲ್ಲಿ ಕಮಲ ಅರಳಿದೆ’ ಅಂತ ಬರೆದುಕೊಂಡಿದ್ದಾರೆ. ಆದ್ರೆ ಅವರು ಟ್ವೀಟ್ ಮಾಡಿರುವ ಫೋಟೋಗಳಲ್ಲಿ ಜನರು ಕೊರೋನಾ ನಿಯಮಗಳನ್ನು ಉಲ್ಲಂಘಿಸಿರೋದು ಕಂಡುಬಂತು. ಒಂದುಕಡೆ ನಾಯಕರು ಮತ್ತು ಅಲ್ಲಿ ಸೇರಿದ್ದ ಕಾರ್ಯಕರ್ತರು ದೈಹಿಕ ಅಂತರ ಕಾಪಾಡಿರಲಿಲ್ಲ. ಮತ್ತೊಂದಷ್ಟು ಜನ ಮಾಸ್ಕ್ ಧರಿಸದೇ ಇದ್ದಿದ್ದು ಕಂಡು ಬಂತು. ಆಡಳಿತ ಪಕ್ಷವೇ ಈ ರೀತಿ ಮಾಡಿದ್ರೆ ಹೇಗೆ ಅಂತ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನೀತಿ ಸಂಹಿತೆ ಉಲ್ಲಂಘಿಸಿದ್ರು ಅಂತ ಅವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿತ್ತು ಅನ್ನೋದು ಇಲ್ಲಿ ಗಮನಾರ್ಹ.

ಮತ್ತೊಂದು ಕಡೆ ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾಧವ್ ಕೂಡ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿಲ್ಲ. ಈ ಬಗ್ಗೆ ಅವರನ್ನು ಕೇಳಿದಾಗ ನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ದೆಹಲಿಗೆ ಬಂದಿದ್ದೇನೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply