masthmagaa.com:

ನಮ್ಮ-ನಿಮ್ಮ ಜೀವನದ ಭಾಗವೇ ಆಗಿಹೋಗಿರೋ ವಾಟ್ಸಾಪ್,​ ನಮ್ಮ ಖಾಸಗಿ ಮಾಹಿತಿಗೆ ಕೈಹಾಕ್ತಿದೆ ಅಂತ ಕಳೆದ ಕೆಲ ದಿನಗಳಿಂದ ನಾನಾ ರೀತಿಯ ಚರ್ಚೆ ಆಗ್ತಿದೆ. ಇದೀಗ ಈ ವಿವಾದದಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದೆ. ವಾಟ್ಸಾಪ್ ಬ್ಯಾನ್ ಮಾಡಬೇಕು ಅನ್ನೋ ಮನವಿ ಈಗ ಕೇಂದ್ರ ಸರ್ಕಾರವನ್ನ ತಲುಪಿದೆ. ವಿಚಾರವನ್ನ ಸರಿಯಾಗಿ ಅರ್ಥಮಾಡಿಕೊಳ್ಳಲು ಈ ವರದಿಯನ್ನ ಪೂರ್ತಿ ಓದಿ.

ವಾಟ್ಸಾಪ್​ನ ಹೊಸ ಪ್ರೈವಸಿ ಪಾಲಿಸಿ ಬಗ್ಗೆ ತನಿಖೆ ನಡೆಸಲು ಇನ್ಫಾರ್ಮೇಶನ್ ಟೆಕ್ನಾಲಜಿ ಇಲಾಖೆ ಮುಂದಾಗಿದೆ. ಕೆಲ ದಿನಗಳಿಂದ ವಾಟ್ಸಾಪ್ ನಮಗೆಲ್ಲಾ ಒಂದು ‘ಪಾಪ್-ಅಪ್ ನೋಟಿಫಿಕೇಶನ್’ ತೋರಿಸ್ತಿದೆ. ಅದರಲ್ಲಿ ಹೊಸ ಖಾಸಗಿತನ ನಿಯಮ ಇದೆ ಮತ್ತು ಕೆಳಗೆ ‘ಅಗ್ರೀ ಆರ್ ಕ್ಲೋಸ್’ ಅಂತ ಆಪ್ಶನ್ ಇದೆ. ಕಂಪನಿಯ ಪ್ರಕಾರ ನಾವು ನೀವು ವಾಟ್ಸಾಪ್ ಯೂಸ್ ಮಾಡ್ಬೇಕು ಅಂದ್ರೆ ಇದಕ್ಕೆ ಫೆಬ್ರವರಿ 8ರ ಒಳಗೆ ಓಕೇ ಮಾಡಲೇಬೇಕು. ಈಗಾಗಲೇ ನಮ್ಮಲ್ಲಿ ಬಾಳ ಜನ ಮೆಸೇಜಸ್ ಒದೋ ಅರ್ಜೆಂಟಲ್ಲಿ ‘ಎಂತ ಇದು ಅಡ್ಡ ಬಂತಲ್ಲ’ ಅಂತ ಅಗ್ರೀ ಕೊಟ್ಟಾಗಿರುತ್ತೆ ಬಿಡಿ. ಈಗ ವಾಟ್ಸಾಪ್​​ನ ಈ ಹೊಸ ನಿಗೂಢ ಆಟದ ಬಗ್ಗೆ ವಿವಾದ ಮತ್ತಷ್ಟು ಜಾಸ್ತಿ ಆಗ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಇಡೀ ಪ್ರೈವಸಿ ಪಾಲಿಸಿಯ ಪರಿಶೀಲನೆಗೆ ಮುಂದಾಗಿದೆ.

ಇದುವರೆಗಿನ ಮಾಹಿತಿ ಪ್ರಕಾರ ಈ ಹೊಸ ಪಾಲಿಸಿ ವಾಟ್ಸಾಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್​ಬುಕ್​​ಗೆ ನಿಮ್ಮ ಇಡೀ ಡಿಜಿಟಲ್ ಜಾತಕವನ್ನ ಬೇರೆ ಆಪ್​​ಗಳೊಂದಿಗೆ ಶೇರ್ ಮಾಡೋ ಅಧಿಕಾರ ಕೊಡುತ್ತೆ. ಹೌದು.., ನಿಮ್ಮ ಲೊಕೇಶನ್, ಫೋನ್​ ನಂಬರ್, ಕಾಂಟ್ಯಾಕ್ಟ್ ಲಿಸ್ಟ್ ಸೇರಿದಂತೆ ನೀವು ವಾಟ್ಸಾಪ್​ನಲ್ಲಿ ಏನೇನು ಮಾಡ್ತೀರಿ ಅನ್ನೋದೆಲ್ಲವನ್ನ ತನ್ನ ಇತರ ಅಂಗಸಂಸ್ಥೆಗಳೊಂದಿಗೆ ಶೇರ್ ಮಾಡೋ ಅಧಿಕಾರ, ನೀವು ಅಗ್ರೀ ಕೊಟ್ಟ ಕೂಡಲೇ ವಾಟ್ಸಾಪ್​​ಗೆ ಸಿಗುತ್ತೆ. ಇದನ್ನ ಖಾಸಗಿತನ ಹೋರಾಟಗಾರರು, ಚಾಂಪಿಯನ್ ಉದ್ಯಮಿ ಎಲಾನ್ ಮಸ್ಕ್​ ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳು ಪ್ರಶ್ನೆ ಮಾಡಿವೆ. ‘ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ – CAIT’ ಕೂಡ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಗೆ ಈ ಬಗ್ಗೆ ಪತ್ರ ಬರೆದು ಆತಂಕ ವ್ಯಕ್ತಪಡಿಸಿದೆ. ದೇಶದಲ್ಲಿ ಕೂಡಲೇ ವಾಟ್ಸಾಪ್ ಬ್ಯಾನ್ ಮಾಡಲು ಕ್ರಮ ಕೈಗೊಳ್ಳಬೇಖು ಅಂತ ಆಗ್ರಹಿಸಿದೆ.

ಹೇಳಿಕೇಳಿ ಬಳಕೆದಾರರ ಡೇಟಾ ಹ್ಯಾಂಡಲ್ ಮಾಡೋ ವಿಚಾರದಲ್ಲಿ ಫೇಸ್​​ಬುಕ್​ನ ಹಿಸ್ಟರಿ ಅಷ್ಟೇನು ಚೆನ್ನಾಗಿಲ್ಲ. ಜೊತೆಗೆ ಭಾರತದಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಖಾಸಗಿ ಮಾಹಿತಿ ರಕ್ಷಣೆಯ ಕಾನೂನೇ ಇಲ್ಲ. ಇಂತಹ ಸಂದರ್ಭದಲ್ಲಿ ಕೋಟ್ಯಂತರ ಜನರ ಜುಟ್ಟನ್ನ ವಾಟ್ಸಾಪ್-ಫೇಸ್​​ಬುಕ್ ಕೈಗೆ ಕೊಟ್ಟು ಕೂತರೆ ಗತಿ ಏನು ಅನ್ನೋ ಆತಂಕ ಮನೆ ಮಾಡಿದೆ. ಕೇಂದ್ರ ಸರ್ಕಾರ ಈ ಸಂಬಂಧ ಒಂದು ಕಾನೂನು ತರುತ್ತಿದೆ. ಅದು ಇನ್ನೂ ಪಾರ್ಲಿಮೆಂಟ್​ನಲ್ಲಿದೆ. ಅಲ್ಲಿ ಚರ್ಚೆ ನಡೆದು ಪಾಸ್​​ ಆಗಿ, ರಾಷ್ಟ್ರಪತಿ ಸೈನ್ ಆದ ಬಳಿಕ ಅದಕ್ಕೆ ಕಾನೂನಿನ ಮಾನ್ಯತೆ ಸಿಗುತ್ತೆ. ಅದಕ್ಕಿನ್ನೂ ಸ್ವಲ್ಪ ಟೈಮ್ ಬೇಕು. ಅಲ್ಲೀ ತನಕ ಹೇಳೋರು ಕೇಳೋರು ಯಾರು?

ಈಗಾಗಲೇ ಭಾರತ ಸರ್ಕಾರ ಮತ್ತು ವಾಟ್ಸಾಪ್​​-ಫೇಸ್​ಬುಕ್​​ ನಡುವೆ ಹಲವು ಸುತ್ತಿನ ಜಟಾಪಟಿ ನಡೆದಿದೆ. ಕೇಂಬ್ರಿಜ್ ಅನಾಲಿಟಿಕಾ ಡೇಟಾ ಲೀಕ್ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಸಿಬಿಐ ತನಿಖೆ ನಡೆಯುತ್ತಿದೆ. ಜೊತೆಗೆ ದೇಶದಲ್ಲಿ ನಡೆದ ಕೆಲವು ಗುಂಪು ಘರ್ಷಣೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕೂಡ ವಾಟ್ಸಾಪ್-ಫೇಸ್​ಬುಕ್ ಮತ್ತು ಸರ್ಕಾರದ ಮಧ್ಯೆ ಕಲಹ ಉಂಟಾಗಿತ್ತು. ಘರ್ಷಣೆಗೆ ಕಾರಣವಾದ ‘ಫೇಕ್ ಮೆಸೇಜ್’ ಹರಡಿದ ಮೂಲ ವ್ಯಕ್ತಿ ಯಾರು ಅಂತ ಕಂಡುಹಿಡಿಯಲು ಸಹಕಾರ ನೀಡಿ ಅಂತ ಸರ್ಕಾರ ‘ವಾಟ್ಸಾಪ್-ಫೇಸ್​ಬುಕ್​’ಗೆ ಮನವಿ ಮಾಡಿತ್ತು. ಆದ್ರೆ, ನಮ್ಮ ಆಪ್​ನಲ್ಲಿ ಎಲ್ಲಾ ಚಾಟ್​​ಗಳು ‘ಎಂಡ್ ಟು ಎಂಡ್​​ ಇನ್ಕ್ರಿಪ್ಟೆಡ್’. ಇದನ್ನ ಓಪನ್ ಮಾಡಲು ಸಾಧ್ಯವಿಲ್ಲ ಅಂತ ಹೇಳಿ ಕಂಪನಿ ಮುಲಾಜಿಲ್ಲದೇ ತಿರಸ್ಕಾರ ಮಾಡಿತ್ತು.

ಜೊತೆಗೆ ಇದೇ ಹೊಸ ಪ್ರೈವಸಿ ಪಾಲಿಸಿಯಲ್ಲಿ ವಾಟ್ಸಾಪ್-ಫೇಸ್​ಬುಕ್ ಭಾರತದೊಂದಿಗೆ ತಾರತಮ್ಯ ಮಾಡಿದೆ ಅನ್ನೋದು ಸರ್ಕಾರದ ಅಸಮಾಧಾನಕ್ಕೆ ಮತ್ತೊಂದು ಕಾರಣ. ಸೇಮ್ ಪ್ರೈವಸಿ ಪಾಲಿಸಿ ಯೂರೋಪಿಯನ್ ಯೂನಿಯನ್​​ಗೆ ಒಂದು ಥರ, ಭಾರತಕ್ಕೆ ಒಂದು ಥರ ಮಾಡಿದ್ದಾರೆ. ಇಲ್ಲಿ ಬಳಕೆದಾರರ ಇಡೀ ಡಿಜಿಟಲ್ ಜಾತಕಕ್ಕೇ ಕೈಹಾಕಲು ಟ್ರೈ ಮಾಡ್ತಿದಾರೆ. ಆದ್ರೆ ಯುರೋಪ್​ನಲ್ಲಿ ಪಾಲಿಸಿ ಅಷ್ಟೆಲ್ಲಾ ಡೇಟಾ ಕೇಳ್ತಿಲ್ಲ. ಭಾರತ ಅಂದ್ರೆ ಏನ್ ಬೇಕಾದ್ರೂ ಮಾಡಬೋದು ಅನ್ನೋ ಮನೋಭಾವನೆನಾ ಅನ್ನೋದು ಪ್ರಶ್ನೆ.

ಹೀಗಾಗಿ ಸರ್ಕಾರದ ಮಟ್ಟದಲ್ಲಿ ಈ ವಿದೇಶೀ ಟೆಕ್ ಕಂಪನಿಗಳ ವರ್ತನೆ ಬಗ್ಗೆ ಒಂದು ಅಸಮಾಧಾನ ಮೊದಲಿಂದಲೂ ಇದ್ದೇ ಇದೆ. ‘ದೊಡ್ಡ ಲಾರ್ಡುಗಳಂತೆ ಆಡುತ್ತಾರೆ ಇವರು.. ಸಾರ್ವಭೌಮ ಸರ್ಕಾರಕ್ಕೆ ಕಿಮ್ಮತ್ತೇ ಕೊಡಲ್ಲ’ ಅಂತ. ಈಗ ಲೇಟೆಸ್ಟಾಗಿ ಶುರುವಾಗಿರೋ ವಾಟ್ಸಾಪ್ ಪ್ರೈವಸಿ ಪಾಲಿಸಿ ವಿವಾದವನ್ನಂತೂ ಬಹಳ ಸೀರಿಯಸ್ಸಾಗಿ ಪರಿಗಣಿಸಿರೋ ಕೇಂದ್ರ ಸರ್ಕಾರ ಈ ಬಗ್ಗೆ ಈಗಾಗಲೇ ಹೈ ಲೆವೆಲ್​ನಲ್ಲೇ ಡಿಸ್ಕಶನ್ ನಡೆಸಿದೆ ಅಂತ ಗೊತ್ತಾಗಿದೆ. ಶೀಘ್ರದಲ್ಲೇ ಸರ್ಕಾರ ವಾಟ್ಸಾಪ್​ ಹತ್ತಿರ ಕೆಲ ವಿಚಾರ ಸಂಬಂಧ ಕ್ಲಾರಿಟಿ ಕೇಳಿ ನೋಟಿಸ್​ ನೀಡೋ ಸಾಧ್ಯತೆ ಕೂಡ ಇದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply