ಚೀನಾ ಗಡಿ ಪ್ರದೇಶ ಲಡಾಖ್‌ನಲ್ಲಿ ಗಸ್ತು ಕೇಂದ್ರಗಳನ್ನು ಕಳೆದುಕೊಳ್ತಾ ಭಾರತ?

masthmagaa.com:

ಭಾರತ- ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇರೋವಾಗ್ಲೆ ಪೂರ್ವ ಲಡಾಖ್‌ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಪೂರ್ವ ಲಡಾಖ್‌ ಗಡಿಯಲ್ಲಿರೋ ಒಟ್ಟು 65 ಪ್ಯಾಟ್ರೋಲ್‌ ಪಾಯಿಂಟ್‌ ಅಂದ್ರೆ ಗಸ್ತು ಕೇಂದ್ರಗಳಲ್ಲಿ ಭಾರತ 26 ಕೇಂದ್ರಗಳ ಮೇಲೆ ನಿಯಂತ್ರಣ ಕಳೆದುಕೊಂಡಿದೆ ಅಂತ ಹೇಳಲಾಗಿದೆ. ಈ ಕುರಿತು ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಹಿರಿಯ ಪೊಲೀಸ್‌ ಅಧಿಕಾರಿ ಒಬ್ರು ಮಾಹಿತಿ ನೀಡಿದ್ದಾರೆ. ಈ 65 ಗಸ್ತು ಕೇಂದ್ರಗಳು ಕಾರಕೋರಂ ಪಾಸ್‌ನಿಂದ ಚುಮುರ್‌ವರೆಗೆ ಇದ್ದು, ಇವುಗಳನ್ನ ISF(Indian Security Forces) ಗಸ್ತು ತಿರುಗೋ ಮೂಲಕ ನಿಯಂತ್ರಿಸುತ್ತದೆ. ಆದ್ರೆ 26 ಗಸ್ತು ಕೇಂದ್ರಗಳಲ್ಲಿ ಭದ್ರತಾ ಪಡೆಗಳ ಉಪಸ್ಥಿತಿ ಇಲ್ಲ ಅಂತ ಲೇಹ್‌ನ ಎಸ್‌ಪಿ ಪಿಡಿ ನಿತ್ಯಾ ತಿಳಿಸಿದ್ದಾರೆ. ಈ 26 ಗಸ್ತು ಕೇಂದ್ರಗಳಲ್ಲಿ ಭಾರತೀಯ ಪಡೆಗಳು ಇಲ್ಲದಿರೋ ಕಾರಣಕ್ಕೆ ಇದನ್ನ ಬಫರ್‌ ಝೋನ್‌ ಅಂತ ಕರೆಯೋಕೆ ಚೀನಾ ಹಾತೊರೆಯುತ್ತಿದೆ. ಇದ್ರಿಂದ ಅಂತಿಮವಾಗಿ ಭಾರತ ಈ ಪ್ರದೇಶಗಳ ಮೇಲಿನ ನಿಯಂತ್ರಣ ಕಳೆದುಕೊಳ್ಳೋಕೆ ಕಾರಣವಾಗ್ಬೋದು. ನಮ್ಮ ಭೂಮಿ ವಶಪಡಿಸಿಕೊಳ್ಳೋ ಚೀನಾದ ತಂತ್ರವನ್ನ ʻಸಲಾಮಿ ಸ್ಲೈಸಿಂಗ್‌ʼ ಅಂತ ಕರೆಯಲಾಗುತ್ತೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೆ ಅಲ್ದೆ ಚೀನಾ ತನ್ನ ಅತ್ಯುತ್ತಮ ಕ್ಯಾಮೆರಾಗಳನ್ನ, ಶಿಖರಗಳ ಮೇಲೆ ಇರಿಸೋ ಮೂಲಕ ನಮ್ಮ ಚಲನವಲನದ ಮೇಲೆ ನಿಗಾ ಇಟ್ಟಿದೆ. ಕೋರ್‌ ಕಮಾಂಡರ್‌ಗಳ ಮಾತುಕತೆಯಲ್ಲಿ ಈ ಗಸ್ತು ಕೇಂದ್ರಗಳನ್ನ ಬಫರ್‌ ಝೋನ್‌ಗಳಾಗಿ ಚೇಂಜ್‌ ಮಾಡೋಕೆ ಚೀನಾ ಒತ್ತಾಯಿಸುತ್ತಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಈ ವರದಿಯನ್ನ ಕಳೆದ ವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದ ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಸಲ್ಲಿಸಲಾಗಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply