ಭಾರತ ಗಡಿಯಲ್ಲಿ ಬರ್ಮಾ ಏರ್‌ಸ್ಟ್ರೈಕ್‌? ಭಾರತಕ್ಕೆ ನುಗ್ಗಿತ್ತಾ ಮಯನ್ಮಾರ್‌?

masthmagaa.com:

ಭಾರತದ ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಸಂಘರ್ಷಗಳು ವರದಿಯಾಗ್ತಿರೋ ಹೊತ್ತಲ್ಲೇ ಆ ಕಡೆ ಭಾರತ ಹಾಗೂ ಮಯನ್ಮಾರ್‌ ಗಡಿಯಿಂದ ಬರ್ತಿರೋ ಸುದ್ದಿ ಕೋಲಾಹಲಕ್ಕೆ ಕಾರಣವಾಗಿದೆ. ಮಯನ್ಮಾರ್‌ ಜೊತೆ ಗಡಿ ಹೊಂದಿರೊ ಮಿಜೋರಾಮ್‌ನ ಚಂಪಾಯ್‌ ಜಿಲ್ಲೆಯ ಬಳಿ ಬಂಡುಕೋರ ಗುಂಪಿನ ಮೇಲೆ ಮಯನ್ಮಾರ್‌ ಸೇನೆ ದಾಳಿ ಮಾಡಿದೆ. ಪ್ರಜಾಪ್ರಭುತ್ವ ಪರ ಗುಂಪಾದ ಚಿನ್‌ ನ್ಯಾಷನಲ್‌ ಆರ್ಮಿಯ ವಿಕ್ಟೋರಿಯಾ ಕ್ಯಾಂಪ್‌ ಮೇಲೆ ಕಳೆದ ಮಂಗಳವಾರ ಮಯನ್ಮಾರ್‌ ಸೇನೆ ವೈಮಾನಿಕ ದಾಳಿ ಮಾಡಿದೆ ಅಂತ ವರದಿಯಾಗಿದೆ. ಅಂದ್ಹಾಗೆ ಈ ಚಿನ್‌ ನ್ಯಾಷನಲ್‌ ಆರ್ಮಿ ಮಯನ್ಮಾರ್‌ನಲ್ಲಿರೊ ಚಿನ್‌ ಜನಾಂಗೀಯರ ಸೇನಾ ಗುಂಪಾಗಿದ್ದು ದಾಳಿಯಲ್ಲಿ 5 ಚಿನ್‌ ಬಂಡುಕೋರರು ಮೃತಪಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಇದು ಭಾರತದ ಗಡಿಯಲ್ಲಿ ನಡೆದಿದ್ದು ಈ ದಾಳಿಯಿಂದ ಭಾರತಕ್ಕೆ ಯಾವುದೇ ಅಫೆಕ್ಟ್‌ ಆಗಿಲ್ಲ ಅಂತ ಅಸ್ಸಾಂ ರೈಫಲ್ಸ್‌ ಅಧಿಕಾರಿಗಳು ಹೇಳಿದ್ದಾರೆ. ಭಾರತ ಈ ಬಗ್ಗೆ ಇದುವರೆಗೂ ಅಧಿಕೃತವಾಗಿ ಯಾವುದೇ ಉತ್ತರ ಕೊಟ್ಟಿಲ್ಲ. ಆದ್ರೆ ಸ್ಥಳೀಯರು ಸ್ಪೋಟಕವೊಂದು ಭಾರತದ ಪ್ರದೇಶದಲ್ಲಿ ಬಿದ್ದಿದೆ ಅಂತ ಹೇಳಿದ್ದು ತೀವ್ರ ಕುತೂಹಲಕ್ಕೆ ಹಾಗೇ ಆತಂಕಕ್ಕೆ ಕಾರಣವಾಗಿದೆ. ಅಲ್ದೇ ದಾಳಿಯ ಬಳಿಕ ಸ್ಪೋಟಕದ ಚೂರುಗಳು ಮಿಜೋರಾಮ್‌ನ ಗಡಿ ಭಾಗದ ಪ್ರದೇಶದಲ್ಲಿ ಪತ್ತೆಯಾಗಿವೆ. ಆದ್ರೆ ಇದು ಭಾರತದಲ್ಲಿ ಸ್ಪೋಟಗೊಂಡ ಸ್ಪೋಟಕದ ಪೀಸ್‌ಗಳು ಅನ್ನೊದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಅಂತ ಚಂಪಾಯ್‌ ಜಿಲ್ಲೆಯ ಡಿ.ಸಿ ಹೇಳಿದ್ದಾರೆ. ಇತ್ತ ಮಯನ್ಮಾರ್‌ ಸೇನೆಯ ದಾಳಿಯನ್ನ ಖಂಡಿಸಿ ಮಿಜೋರಾಮ್‌ನ ಯಂಗ್‌ ಮಿಜೋ ಅಸೋಸಿಯೇಷನ್‌, ಈ ದಾಳಿ ವಿರುದ್ದ ಸರಿಯಾದ ಕ್ರಮವನ್ನ ತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ಅಲ್ದೇ ಮಯನ್ಮಾರ್‌ ಜುಂಟಾಗೆ ಅಂದರೆ ಅಲ್ಲಿ ಸಧ್ಯಕ್ಕೆ ಆಡಳಿತ ಮಾಡ್ತಿರೋ ಸೇನೆಗೆ ಭಾರತದ ವಾಯು ಪ್ರದೇಶವನ್ನ ಬಳಸದಂತೆ ತಡಿಬೇಕು. ಗಡಿ ಪ್ರದೇಶದಲ್ಲಿರೊ ಭಾರತೀಯ ನಾಗರಿಕರನ್ನ ಹಾಗೂ ಚಿನ್‌ ಜನಾಂಗೀಯದವ್ರನ್ನ ರಕ್ಷಿಸಬೇಕು ಅಂತ ಮಾನವ ಹಕ್ಕುಗಳ ಗುಂಪು ಫೋರ್ಟಿಫೈ ರೈಟ್ಸ್‌ ಭಾರತಕ್ಕೆ ಆಗ್ರಹಿಸಿದೆ. ಅಂದ್ಹಾಗೆ ಈ ಚಿನ್‌ ಜನಾಂಗೀಯ ಗುಂಪು 2015ರಲ್ಲಿ ಮಯನ್ಮಾರ್‌ ಸೇನೆ ಜೊತೆ ಕದನ ವಿರಾಮಕ್ಕೆ ಸಹಿ ಹಾಕಿತ್ತು. ಆದ್ರೆ 2021ರಲ್ಲಿ ಮಯನ್ಮಾರ್‌ನಲ್ಲಿದ್ದ ಪ್ರಜಾಪ್ರಭುತ್ವ ಸರ್ಕಾರವನ್ನ ಉರುಳಿಸಿ ಸೇನೆ ಆಡಳಿತಕ್ಕೆ ಬಂತು. ಆಗ ಈ ಇಬ್ರ ಮಧ್ಯೆ ಸಂಘರ್ಷ ಜೋರಾಗಿದೆ. ಈ ಚಿನ್‌ ನ್ಯಾಷನಲ್‌ ಆರ್ಮಿ 1988ರ ಮಾರ್ಚ್‌ 20ರಂದು ಸ್ಥಾಪನೆಯಾಗಿದ್ದು, ಮಯನ್ಮಾರ್‌ನಲ್ಲಿ ಫೆಡರಲ್‌ ವ್ಯವಸ್ಥೆಯನ್ನ ಜಾರಿಗೊಳಿಸೋದು, ದೇಶದಲ್ಲಿರೊ ಎಲ್ಲ ಜನಾಂಗೀಯ ಗುಂಪುಗಳಲ್ಲಿ ಶಾಂತಿ ಸ್ಥಾಪಿಸೋ ಉದ್ದೇಶವನ್ನ ಈ ಗುಂಪು ಹೊಂದಿದೆ. ಆದ್ರೆ ಮಯನ್ಮಾರ್‌ನ ಸೇನೆ ಮಾತ್ರ ಇವರ ಮೇಲೆ ದಾಳಿಗಳನ್ನ ಮಾಡ್ತಾ ಇದ್ದು ಈಗ ಕೂಡ ಭಾರತದ ಗಡಿಯಲ್ಲಿ ಏರ್‌ಸ್ಟ್ರೈಕ್‌ ಮಾಡಿದೆ ಅಂತ ಹೇಳಲಾಗಿದೆ. ಅಂದ್ಹಾಗೆ 1,640 ಕಿಲೋ ಮೀಟರ್‌ ಉದ್ದದ ಗಡಿಯನ್ನ ಭಾರತದ ಜೊತೆ ಮಯನ್ಮಾರ್‌ ಹೊಂದಿದೆ. ಉಭಯ ದೇಶಗಳು ಈಶಾನ್ಯ ಭಾಗದಲ್ಲಿರೊ ಬಂಡುಕೋರ ಗುಂಪುಗಳ ವಿರುದ್ದ ಆಗಾಗ ಕಾರ್ಯಾಚರಣೆ ಮಾಡ್ತಾ ಇರುತ್ತವೆ. ಇತ್ತೀಚೆಗೆ ಅಂದರೆ 2019ರಲ್ಲಿ ಎರಡು ದೇಶಗಳ ಸೇನೆ ಜೊತೆಯಾಗಿ ಮಣಿಪುರ, ನಾಗಾಲ್ಯಾಂಡ್‌ ಹಾಗೂ ಅಸ್ಸಾಂನಲ್ಲಿರೊ ಉಗ್ರ ಗುಂಪುಗಳ ವಿರುದ್ದ 3 ವಾರಗಳ ಜಂಟಿ ಕಾರ್ಯಚಾರಣೆ ಮಾಡಿದ್ವು. ಅಲ್ದೇ ಕೆಲವು ಬಾರಿ ಭಾರತೀಯ ಸೇನೆಗೆ ಮಯನ್ಮಾರ್‌ನಲ್ಲಿ ಕಾರ್ಯಾಚರಣೆ ಮಾಡೋಕೂ ಮಯನ್ಮಾರ್‌ ಸೇನೆ ಅವಕಾಶ ಕೊಟ್ಟಿತ್ತು. ಇದಿಷ್ಟೇ ಅಲ್ಲ ಅನೇಕ ಕಾರ್ಯಾಚಾರಣೆಯಲ್ಲಿ ಭಾರತೀಯ ಸೇನೆ ಹಾಗೂ ಅಸ್ಸಾಂ ರೈಫಲ್ಸ್‌ ಜೊತೆ ಮಯನ್ಮಾರ್‌ ಸೇನೆ ಕೂಡ ಕೈಜೋಡಿಸಿದೆ.ಹೀಗೆ ಎರಡು ದೇಶಗಳ ಮಿಲಿಟರಿಗಳು ಆಗಾಗ ಒಬ್ರಿಗೊಬ್ರು ಹೆಲ್ಫ್‌ ಮಾಡ್ಕೊಂಡು ಕಾರ್ಯಾಚರಣೆ ಮಾಡ್ತಾ ಇರ್ತವೆ. ಆದ್ರೆ ಈ ಬಾರಿ ವೈಮಾನಿಕ ದಾಳಿ ಕುರಿತು ಭಾರತಕ್ಕೆ ಯಾವುದೇ ಮಾಹಿತಿ ತಿಳಿಸಿಲ್ಲ ಅಂತ ಹೇಳಲಾಗ್ತಿದೆ. ಇದು ಈಗ ಗೊಂದಲಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply