masthmagaa.com:

ವಾಯು ಮಾಲಿನ್ಯದ ವಿಚಾರದಲ್ಲಿ ಭಾರತ ಆಗಾಗ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮಾತನಾಡಿ, ‘ವಾಯು ಮಾಲಿನ್ಯ ಹೆಚ್ಚಲು ಭಾರತ, ಚೀನಾ, ರಷ್ಯಾದಂತಹ ದೇಶಗಳೇ ಕಾರಣ’ ಅಂತ ಹೇಳಿದ್ದರು. ಇದರ ಬೆನ್ನಲ್ಲೇ ಅಮೆರಿಕದ Health Effects Institute (HEI) ಬಿಡುಗಡೆ ಮಾಡಿರುವ State of Global Air-2020 (SoGA) ವರದಿಯಲ್ಲಿ ಆಘಾತಕಾರಿ ವಿಚಾರವೊಂದನ್ನು ಪ್ರಕಟಿಸಲಾಗಿದೆ.

ಇದರ ಪ್ರಕಾರ, ಕಳೆದ ವರ್ಷ ಭಾರತದಲ್ಲಿ ವಾಯು ಮಾಲಿನ್ಯದಿಂದ 1,16,000ಕ್ಕೂ ಹೆಚ್ಚು ಮಕ್ಕಳು ಹುಟ್ಟಿದ ಒಂದು ತಿಂಗಳೊಳಗೆ ಮೃತಪಟ್ಟಿವೆ ಅಂತ ವರದಿ ಹೇಳಿದೆ. ಇದರಲ್ಲಿ ಅರ್ಧಕ್ಕೂ ಹೆಚ್ಚು ಸಾವುಗಳು ಹೊರಾಂಗಣದ ವಾಯು ಮಾಲಿನ್ಯದಿಂದಾದರೆ, ಉಳಿದ ಸಾವು ಮನೆಯೊಳಗಿನ ಅಂದ್ರೆ ಅಡುಗೆಗೆ ಬಳಸುವ ಬೆರಣಿ, ಕಟ್ಟಿಗೆಯ ಹೊಗೆ, ಕಲ್ಲಿದ್ದಲಿನ ಮಾಲಿನ್ಯದಿಂದ ಸಂಭವಿಸಿವೆಯಂತೆ. ಇನ್ನು ಅವಧಿಗೂ ಮುನ್ನ ಜನಿಸುವ ಶಿಶುಗಳು ಮತ್ತು ಕಡಿಮೆ ಜನನ ತೂಕ ಹೊಂದಿರುವ ಶಿಶುಗಳು ಸುಲಭವಾಗಿ ವಾಯುಮಾಲಿನ್ಯದ ಪ್ರಭಾವಕ್ಕೆ ಒಳಗಾಗಿ ಮರಣ ಹೊಂದುತ್ತಿವೆ. ಮತ್ತೊಂದು ವಿಚಾರ ಅಂದ್ರೆ ನವಜಾತ ಶಿಶುಗಳ ಮರಣದಲ್ಲಿ ಭಾರತ ನಂಬರ್ 1 ಸ್ಥಾನದಲ್ಲಿದ್ರೆ, ನೈಜಿರಿಯಾ (67,900), ಪಾಕಿಸ್ತಾನ (56,500), ಇಥಿಯೋಪಿಯಾ (22,900) ಮತ್ತು ಕಾಂಗೋ (1,200) ನಂತರದ ಸ್ಥಾನದಲ್ಲಿವೆ ಅಂತ ವರದಿ ಹೇಳಿದೆ.

ಇಷ್ಟೇ ಅಲ್ಲ, ವಾಯು ಮಾಲಿನ್ಯಕ್ಕೆ ದೀರ್ಘ ಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಭಾರತದಲ್ಲಿ ಪಾರ್ಶ್ವವಾಯು, ಹೃದಯಾಘಾತ, ಮಧುಮೇಹ, ಶ್ವಾಸಕೋಶದ ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶ ಕಾಯಿಲೆ ಮತ್ತು ನವಜಾತ ಶಿಶುವಿನ ಕಾಯಿಲೆಗಳಿಂದ ಕಳೆದ ವರ್ಷ 16.70 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಅಂತ ವರದಿ ಹೇಳಿದೆ.

ಅಂದ್ಹಾಗೆ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಕೊರೋನಾಗೆ ಭಾರತದಲ್ಲಿ ಈಗಾಗಲೇ 1.15 ಲಕ್ಷಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲೇ ಬಿಡುಗಡೆಯಾಗಿರುವ State of Global Air-2020 ವರದಿ ಸಾಕಷ್ಟು ಕುತೂಹಲ ಕೆರಳಿಸಿದೆ. ಯಾಕಂದ್ರೆ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ವಾಯು ಮಾಲಿನ್ಯವೇ ಮುಖ್ಯ ಕಾರಣ. ಹೀಗಾಗಿ ಕೊರೋನಾ ಮತ್ತು ವಾಯು ಮಾಲಿನ್ಯಕ್ಕೂ ಏನಾದ್ರೂ ಸಂಬಂಧವಿದೆಯಾ..? ಅದರಿಂದಲೇ ಹೆಚ್ಚೆಚ್ಚು ಸೋಂಕಿತರು ಬಲಿಯಾಗುತ್ತಿದ್ದಾರಾ..? ಅನ್ನೋ ಅನುಮಾನಗಳು ಮೂಡಿವೆ.

-masthmagaa.com

Contact Us for Advertisement

Leave a Reply