masthmagaa.com:

ಬಾಹ್ಯಾಕಾಶದಲ್ಲಿ ರಾಕೆಟ್ ಮತ್ತು ಉಪಗ್ರಹಗಳ ಸಾಕಷ್ಟು ಅವಶೇಷಗಳಿವೆ. ಇವುಗಳನ್ನು ಬಾಹ್ಯಾಕಾಶ ಕಸ ಅಥವಾ ಸ್ಪೇಸ್ ಡೆಬ್ರಿಸ್ ಅಂತ ಕರೆಯುತ್ತಾರೆ. ಇವು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station-ISS) ಮತ್ತು ಉಳಿದ ಉಪಗ್ರಹಗಳಿಗೆ ಯಾವತ್ತೂ ಅಪಾಯಕಾರಿನೇ. ಇಂತಹ ಅವಶೇಷಗಳು ಇತ್ತೀಚೆಗೆ ISSಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಅದನ್ನು ISSನ ಗಗನಯಾತ್ರಿಗಳು ತಪ್ಪಿಸಿದ್ದಾರೆ ಅಂತ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿದೆ. ಜೊತೆಗೆ ಬಾಹ್ಯಾಕಾಶದಲ್ಲಿರುವ ಅವಶೇಷಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಿದೆ ಅಂತ ಅಂತಾರಾಷ್ಟ್ರೀಯ ಸಮುದಾಯಕ್ಕೆ ಆಗ್ರಹಿಸಿದೆ.

ಎರಡೂವರೆ ನಿಮಿಷದ ಈ ಕಾರ್ಯಾಚರಣೆಯಲ್ಲಿ ರಷ್ಯಾ ಮತ್ತು ಅಮೆರಿಕದ ಗಗನಯಾತ್ರಿಗಳು ಸೇರಿಕೊಂಡು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಕ್ಷೆಯನ್ನು ಸರಿಹೊಂದಿಸಲು ಮತ್ತು ಘರ್ಷಣೆಯನ್ನು ತಪ್ಪಿಸಲು ISSನ ಕಕ್ಷೆಯನ್ನು ಮತ್ತಷ್ಟು ದೂರಕ್ಕೆ ಸರಿಸಿದ್ದಾರೆ. ಇದರ ಪರಿಣಾಮ ಸ್ಪೇಸ್ ಡೆಬ್ರಿಸ್ ISSಗೆ ಡಿಕ್ಕಿ ಹೊಡೆಯದೇ ಕೇವಲ 1.4 ಕಿಲೋ ಮೀಟರ್ ಸಮೀಪದಲ್ಲಿ ಹಾದು ಹೋದವು ಅಂತ ನಾಸಾ ತಿಳಿಸಿದೆ. ಅಂದ್ಹಾಗೆ ISSಗೆ ಡಿಕ್ಕಿ ಹೊಡೆಯಲು ಬರುತ್ತಿದ್ದ ಈ ಸ್ಪೇಸ್ ಡೆಬ್ರಿಸ್ 2018ರ ಜಪಾನ್ ರಾಕೆಟ್​ವೊಂದರ ಅವಶೇಷವಾಗಿವೆ. ಆ ರಾಕೆಟ್​ ಕಳೆದ ವರ್ಷ 77 ತುಂಡುಗಳಾಗಿ ವಿಭಜನೆಯಾಗಿತ್ತು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಭೂಮಿಯಿಂದ ಸುಮಾರು 420 ಕಿಲೋ ಮೀಟರ್ ದೂರಲ್ಲಿ ಸುತ್ತು ಹೊಡೆಯುತ್ತದೆ. ಇದರ ವೇಗ ಗಂಟೆಗೆ 27,358 ಕಿಲೋ ಮೀಟರ್. ಈ ವೇಗದಲ್ಲಿ ಪರಿಭ್ರಮಿಸುವಾಗ ಒಂದು ಸಣ್ಣ ವಸ್ತು ಡಿಕ್ಕಿ ಹೊಡೆದರೂ ISSಗೆ ಗಂಭೀರ ಪ್ರಮಾಣದಲ್ಲಿ ಹಾನಿ ಮಾಡಬಲ್ಲದು.

ಇಂತಹ ಸ್ಪೇಸ್ ಡೆಬ್ರಿಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಕಾರ್ಯಾಚರಣೆ ಆಗಾಗ ನಡೆಯುತ್ತಿರುತ್ತದೆ. 1999 ಮತ್ತು 2018ರ ನಡುವೆ ಇಂತಹ 25 ಕಾರ್ಯಾಚರಣೆ ನಡೆದಿದೆ. ಈ ವರ್ಷ ನಡೆದ 3ನೇ ಕಾರ್ಯಾಚರಣೆ ಇದಾಗಿದೆ ಅಂತ ನಾಸಾ ಮುಖ್ಯಸ್ಥ ಜಿಮ್​ ಬ್ರೈಡೆನ್​ಸ್ಟೈನ್​ ತಿಳಿಸಿದ್ದಾರೆ.

ಕೆಲವೊಮ್ಮೆ ಆಕಸ್ಮಿಕವಾಗಿ ಸ್ಪೇಸ್ ಡಬ್ರಿಸ್ ಸೃಷ್ಟಿಯಾದ್ರೆ, ಇನ್ನೂ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಅವಶೇಷಗಳು ಸೃಷ್ಟಿಯಾಗುತ್ತವೆ. ಕೆಲ ದೇಶಗಳು ಉಪಗ್ರಹ ನಾಶಕ ಕ್ಷಿಪಣಿಗಳನ್ನು ತಯಾರಿಸಿಕೊಂಡಿವೆ. 2019ರಲ್ಲಿ ಭಾರತ ಮತ್ತು 2007ರಲ್ಲಿ ಚೀನಾ ಇಂತಹ ಉಪಗ್ರಹ ನಾಶಕ ಕ್ಷಿಪಣಿಗಳ ಪರೀಕ್ಷೆ ನಡೆಸಿತ್ತು. ಸಾಮಾನ್ಯವಾಗಿ ಉಪಯೋಗಕ್ಕೆ ಬಾರದ ಉಪಗ್ರಹಗಳನ್ನು ಹೊಡೆದು ಹಾಕುವುದು ಇದರ ಉದ್ದೇಶವಾಗಿರುತ್ತದೆ. ಆದ್ರೆ ಇದು ಇಷ್ಟಕ್ಕೇ ಸೀಮಿತವಾಗಿಲ್ಲ. ವೈರಿ ದೇಶಗಳ ಉಪಗ್ರಹಗಳನ್ನ ಕೂಡ ಧ್ವಂಸ ಮಾಡಲು ಉಪಗ್ರಹ ನಾಶಕ ಕ್ಷಿಪಣಿ (anti-satellite missile) ಬಳಸಬಹುದು. ಇದರಿಂದ ಬಾಹ್ಯಾಕಾಶದ ಕಸ ಮತ್ತಷ್ಟು ಜಾಸ್ತಿಯಾಗುತ್ತದೆ.

-masthmagaa.com

Contact Us for Advertisement

Leave a Reply