ರಷ್ಯಾಗೆ ಭೇಟಿ ನೀಡಿದ ಜೈಶಂಕರ್‌…!ಅಮೆರಿಕ ಹಾಗೂ ಪಾಶ್ಚೀಮಾತ್ಯರಿಗೆ ಮಾತಿನಲ್ಲೇ ಚಾಟಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ರಷ್ಯಾಗೆ ಭೇಟಿ ನೀಡಿದ್ದಾರೆ. ಯುಕ್ರೇನ್‌ ಸಂಘರ್ಷದಿಂದ ಇಡೀ ವಿಶ್ವವೇ ರಷ್ಯಾವನ್ನ ವಿಲನ್‌ ಸ್ಥಾನದಲ್ಲಿ ನಿಲ್ಲಿಸಿರೋ ಹೊತ್ತಲ್ಲಿ ಭಾರತದ ಉನ್ನತ ನಾಯಕರೊಬ್ರು ರಷ್ಯಾಗೆ ಹೋಗಿದ್ದಾರೆ. ಈ ವೇಳೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್‌ ಜೊತೆಗೆ ಸಭೆ ನಡೆಸಿದ್ದಾರೆ. ದ್ವಿಪಕ್ಷೀಯ ಸಹಕಾರ, ಅಂತಾರಾಷ್ಟ್ರೀಯ ಪರಿಸ್ಥಿತಿ ಮತ್ತು ಉಭಯ ದೇಶಗಳ ಹಿತಾಸಕ್ತಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಅಂತ ಜೈಶಂಕರ್‌ ಹೇಳಿದ್ದಾರೆ. ಜೊತೆಗೆ ಯುಕ್ರೇನ್‌ ಬಿಕ್ಕಟ್ಟಿನ ಬಗ್ಗೆ ಮಾತಾಡಿದ ಜೈಶಂಕರ್‌ ಇದು ಯುದ್ಧದ ಯುಗ ಅಲ್ಲ ಅಂತ ಮೋದಿ ಪುಟಿನ್‌ಗೆ ಹೇಳಿದ್ದ ಮಾತನ್ನ ಪುನಃ ಉಚ್ಚರಿಸಿದ್ದಾರೆ. ನಾವು ಈಗ ಯುಕ್ರೇನ್ ಯುದ್ಧದ ಪರಿಣಾಮಗಳನ್ನ ನೋಡ್ತಿದಿವಿ. ಇದ್ರೊಟ್ಟಿಗೆ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯಂತ ಸಮಸ್ಯೆಗಳೂ ಇವೆ. ಇವೆರಡೂ ಅಭಿವೃದ್ಧಿಯ ಮೇಲೆ ಪರಿಣಾಮವನ್ನ ಬೀರ್ತಿವೆ ಅಂತ ಜೈಶಂಕರ್‌ ಹೇಳಿದ್ದಾರೆ. ಜೊತೆಗೆ ಅಫ್ಘಾನಿಸ್ತಾನದ ವಿಚಾರದಲ್ಲಿ ಭಾರತದ ನಿಲುವಿನ ಬಗ್ಗೆ ಕೂಡ ಮಾತನಾಡಿದ್ದಾರೆ. ಅಂದ್ಹಾಗೆ ಯುಕ್ರೇನ್‌ ಸಂಘರ್ಷ ಶುರು ಆದಾಗಿನಿಂದ ಲಾವ್ರೊವ್‌ ಮತ್ತು ಜೈಶಂಕರ್‌ ಇದುವರೆಗೂ ನಾಲ್ಕು ಸಲ ಭೇಟಿಯಾಗಿದ್ದಾರೆ. ಆದ್ರೆ ಯುಕ್ರೇನ್‌ ಯುದ್ದ ಶುರುವಾದ್ಮೇಲೆ ಸ್ವತಃ ಜೈಶಂಕರ್ ರಷ್ಯಾಗೆ ಭೇಟಿಯಾಗಿದ್ದು ಇದೇ ಮೊದಲು. ಇನ್ನು ಭೇಟಿ ವೇಳೆ ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತೆ ಅಂತ ಜೈಶಂಕರ್‌ ಮತ್ತೆ ಪುನರುಚ್ಚಾರ ಮಾಡಿದ್ದಾರೆ. ರಷ್ಯಾದೊಂದಿಗೆ ತೈಲ ಸಂಬಂಧದ ಕುರಿತು ಪಾಶ್ಚಿಮಾತ್ಯಗಳ ಒತ್ತಡಕ್ಕೆ ಭಾರತ ಹೇಗೆ ಪ್ರತಿಕ್ರಿಯಿಸುತ್ತೆ ಅಂತ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್‌, ತೈಲ ಮಾರುಕಟ್ಟೆ ವಿಚಾರಕ್ಕೆ ಬಂದ್ರೆ, ಈಗಾಗಲೇ ಇಂಧನ ಮಾರುಕಟ್ಟೆಯಲ್ಲಿ ಹೆಚ್ಚಿನ ಒತ್ತಡವಿದೆ. ಹಲವಾರು ಅಂಶಗಳಿಂದ ಮಾರುಕಟ್ಟೆಯಲ್ಲಿ ಈ ಒತ್ತಡ ಉಂಟಾಗಿದೆ. ವಿಶ್ವದ ಮೂರನೇ ಅತಿದೊಡ್ಡ ತೈಲ ಹಾಗೂ ಅನಿಲ ಗ್ರಾಹಕ ದೇಶವಾಗಿರೋ ನಾವು, ಕಡಿಮೆ ಬೆಲೆಗೆ ತೈಲ ಖರೀದಿ ಮಾಡೋಕೆ ನೋಡ್ತಿವಿ. ಈ ನಿಟ್ಟಿನಲ್ಲಿ ರಷ್ಯಾ ಜೊತೆಗಿನ ಸಂಬಂಧ ನಮಗೆ ಪೂರಕವಾಗಿದೆ. ಇದನ್ನ ನಾವು ಕಂಟಿನ್ಯೂ ಮಾಡ್ತೀವಿ ಅಂತ ಹೇಳಿದ್ದಾರೆ. ಈ ಮೂಲಕ ರಷ್ಯಾದ ತೈಲ ವಿಚಾರದಲ್ಲಿ ಭಾರತದ ನಿಲುವು ಏನು ಅನ್ನೋದನ್ನ ಅಮೆರಿಕ ಮತ್ತು ಮಿತ್ರರಿಗೆ ಸ್ಪಷ್ಟವಾಗಿ ಮತ್ತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಂದ್ಹಾಗೆ ಯುಕ್ರೇನ್‌ ಸಂಘರ್ಷ ಉಂಟಾದ್ಮೇಲೆ ರಷ್ಯಾದ ಮೇಲೆ ನಿರ್ಬಂಧಗಳನ್ನ ಹೇರಿರುವ ಪಾಶ್ಚಿಮಾತ್ಯ ದೇಶಗಳು, ತಾವೇ ಬೇಕಾದಷ್ಟು ತೈಲ ಖರೀದಿ ಮಾಡ್ತಿದ್ರು, ರಷ್ಯಾದಿಂದ ನೀವು ಮಾತ್ರ ತೈಲವನ್ನ ಖರೀದಿ ಮಾಡಬಾರದು ಅಂತ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಿಗೆ ಒತ್ತಡ ಹೇರ್ತಿವೆ. ಆದ್ರೆ ಈ ಒತ್ತಡಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡದ ಭಾರತ ಮಾತ್ರ, ಈ ಮುಂಚೆಗಿಂತ ಹೆಚ್ಚಿನ ತೈಲವನ್ನ ರಷ್ಯಾದಿಂದ ಖರೀದಿ ಮಾಡ್ತಿದೆ. ಎಷ್ಟರ ಮಟ್ಟಿಗೆ ಅಂದ್ರೆ ಭಾರತಕ್ಕೆ ಸದ್ಯಕ್ಕೆ ಅತಿದೊಡ್ಡ ತೈಲ ಪೂರೈಕೆದಾರ ದೇಶವಾಗಿ ಅಕ್ಟೋಬರ್‌ ತಿಂಗಳಲ್ಲಿ ರಷ್ಯಾ ಹೊರಹೊಮ್ಮಿದೆ. ಇದ್ರ ನಡುವೆಯೇ ರಷ್ಯಾ ನೆಲಕ್ಕೇ ಹೋಗಿರೋ ಜೈ ಶಂಕರ್‌ ರಷ್ಯಾ ಜೊತೆಗೆ ನಮ್ಮ ತೈಲ ವ್ಯಾಪಾರ ಮುಂದುವರೆಯುತ್ತೆ ಅಂತ ಹೇಳಿದ್ದಾರೆ. ಈ ಮೂಲಕ ಅಮೆರಿಕ ಮತ್ತು ಪಾಶ್ಚೀಮಾತ್ಯ ದೇಶಗಳಿಗೆ ಮಾತಿನಲ್ಲೇ ಚಾಟಿ ಬೀಸಿದಾರೆ.

-masthmagaa.com

Contact Us for Advertisement

Leave a Reply