‘ಭಾರತವನ್ನು ಕೊಳಕು ಅಂತ ಟ್ರಂಪ್​ ಕರೆದಿದ್ದು ಸರಿಯಲ್ಲ’: ಜೋ ಬೈಡೆನ್

masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆ ಚರ್ಚೆ ವೇಳೆ ಭಾರತವನ್ನು ಟೀಕಿಸಿದ್ದ ಡೊನಾಲ್ಡ್​ ಟ್ರಂಪ್ ವಿರುದ್ಧ ಎದುರಾಳಿ ಅಭ್ಯರ್ಥಿ ಜೋ ಬೈಡೆನ್ ವಾಗ್ದಾಳಿ ನಡೆಸಿದ್ದಾರೆ. ಚರ್ಚೆ ವೇಳೆ ಮಾತನಾಡುವಾಗ ‘ನೋಡಿ ಭಾರತದ ಗಾಳಿ ಎಷ್ಟು ಕೊಳಕಾಗಿದೆ. ಚೀನಾ, ರಷ್ಯಾದ ಗಾಳಿ ಎಷ್ಟು ಕೊಳಕಾಗಿದೆ ’ ಅಂತ ವಾಯು ಮಾಲಿನ್ಯದ ಬಗ್ಗೆ ಟ್ರಂಪ್​ ಕಾಮೆಂಟ್ ಮಾಡಿದ್ರು. ಇದಕ್ಕೆ ಭಾರತದಲ್ಲಿ ಸಾಕಷ್ಟು ವಿರೋಧ ಕೂಡ ಕೇಳಿ ಬಂದಿತ್ತು. ಇದೀಗ ಜೋ ಬೈಡೆನ್ ಮಾತನಾಡಿ, ‘ಡೊನಾಲ್ಡ್​ ಟ್ರಂಪ್ ಭಾರತವನ್ನು ಕೊಳಕು (Filthy) ಅಂತ ಕರೆದಿದ್ದಾರೆ. ಸ್ನೇಹಿತರ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ. ಜೊತೆಗೆ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ರೀತಿ ಇದಲ್ಲ. ನಾನು ಮತ್ತು ಕಮಲಾ ಹ್ಯಾರಿಸ್ ನಮ್ಮ ಸ್ನೇಹಿತರನ್ನು ಗೌರವಿಸುತ್ತೇವೆ. ನಮ್ಮ ವಿದೇಶಾಂಗ ನೀತಿಯಲ್ಲಿ ಗೌರವವನ್ನು ಪುನಃ ಸ್ಥಾಪಿಸುತ್ತೇವೆ’ ಅಂತ ಹೇಳಿದ್ದಾರೆ.

ಅಂದ್ಹಾಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ಉತ್ತಮ ಸ್ನೇಹವಿದೆ. ಇಬ್ಬರೂ ಸಹ ಒಬ್ಬರನ್ನೊಬ್ಬರು ‘ಮೈ ಫ್ರೆಂಡ್’ ಅಂತಾನೇ ಸಂಬೋಧಿಸುತ್ತಾರೆ. ಆದ್ರೆ ಇತ್ತೀಚೆಗೆ ಭಾರತದ ಬಗ್ಗೆ ಟ್ರಂಪ್ ಆಡಿರುವ ಮಾತುಗಳು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಜೋ ಬೈಡೆನ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply