masthmagaa.com:

ಕೊರೋನಾ ಸಂದರ್ಭದಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಕಾರ್ಯನಿರ್ವಹಣೆ ಬಗ್ಗೆ ಸಾಕಷ್ಟು ಪ್ರಶ್ನೆ ಎದ್ದಿತ್ತು. ಆರೋಗ್ಯ ಸಚಿವ ರಾಮುಲು ಆಗಿದ್ದರೂ ಆ ಜವಾಬ್ದಾರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ನಿರ್ವಹಿಸುತ್ತಿದ್ದಂತೆ ಕಾಣುತ್ತಿತ್ತು. ಇದರ ಬೆನ್ನಲ್ಲೇ ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್​ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಜೊತೆಗೆ ರಾಮುಲು ಬಳಿ ಇದ್ದ ಮತ್ತೊಂದು ಖಾತೆಯಾದ ಹಿಂದುಳಿದ ವರ್ಗಗಳ ಖಾತೆಯನ್ನು ಸ್ವತಃ ಸಿಎಂ ತಮ್ಮ ಬಳಿ ಇಟ್ಟುಕೊಂಡು ರಾಮುಲುಗೆ ಸಮಾಜ ಕಲ್ಯಾಣ ಖಾತೆ ನೀಡಿದ್ದಾರೆ. ಸಮಾಜ ಕಲ್ಯಾಣ ಖಾತೆ ಈ ಹಿಂದೆ ಡಿಸಿಎಂ ಗೋವಿಂದ ಕಾರಜೋಳ ಬಳಿ ಇತ್ತು.

ಒಟ್ಟಾರೆಯಾಗಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದುಕೊಂಡು ಆರೋಗ್ಯ ಖಾತೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದದ್ದ ಡಾ. ಕೆ. ಸುಧಾಕರ್​ಗೆ ಹೆಚ್ಚುವರಿಯಾಗಿ ಆರೋಗ್ಯ ಖಾತೆಯನ್ನ ನೀಡಲಾಗಿದೆ.  ಈ ಮೂಲಕ ವೈದ್ಯಕೀಯ ಶಿಕ್ಷಣ ಸಚಿವರು ಅವರೇ, ರಾಜ್ಯದ ಆರೋಗ್ಯ ಸಚಿವರು ಅವರೇ ಆಗಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಈಗ ಸಮಾಜ ಕಲ್ಯಾಣ ಸಚಿವರಾಗಿದ್ದಾರೆ. ಇತ್ತೀಚೆಗೆ ಶ್ರೀರಾಮುಲು ಅವರು ದೇವಿಗೆ ಹರಕೆ ಚೀಟಿ ಬರೆದು ಹಾಕಿದ್ದರು. ಅದರಲ್ಲಿ ‘ನನ್ನನ್ನು ಉಪಮುಖ್ಯಮಂತ್ರಿ ಮಾಡು ತಾಯಿ’ ಅಂತ ಬರೆದಿದ್ದರು. ಡಿಸಿಎಂ ಹುದ್ದೆಯ ಕನಸು ಕಾಣ್ತಿದ್ದ ಶ್ರೀರಾಮುಲುಗೆ ಈಗ ಆರೋಗ್ಯ ಖಾತೆಯೇ ಖೋತಾ ಆಗಿದೆ.

-masthmagaa.com

Contact Us for Advertisement

Leave a Reply