masthmagaa.com:

ಬಾಲಿವುಡ್ ನಟಿ ಕಂಗನಾ ರನಾವತ್​ಗೆ ಕೇಂದ್ರ ಭದ್ರತಾ ಸಂಸ್ಥೆಗಳು Y+ ಕೆಟಗರಿಯ ಭದ್ರತೆಯನ್ನು ನೀಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಆತ್ಮಹತ್ಯೆಯಲ್ಲ ಅದೊಂದು ಪೂರ್ವನಿಯೋಜಿತ ಕೊಲೆ ಅಂತ ಸಂದರ್ಶನವೊಂದರಲ್ಲಿ ಕಂಗನಾ ಹೇಳಿದ ಬಳಿಕ ಪ್ರಕರಣದ ಚಿತ್ರಣವೇ ಬದಲಾಗಿದೆ. ಇದೀಗ ಪ್ರಕರಣದಲ್ಲಿ ಮಾದಕ ವಸ್ತು ಆಯಾಮದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದರಿಂದ ಕಂಗನಾಗೆ ಸಾಕಷ್ಟು ಬೆದರಿಕೆ ಕರೆಗಳು ಕೂಡ ಬಂದಿದ್ದವು. ಜೊತೆಗೆ ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಅಂತ ಕರೆದಿದ್ದ ಕಂಗನಾ​ಗೆ​ ಮುಂಬೈನಲ್ಲಿ ಕಾಲಿಡುವ ಅರ್ಹತೆ ಇಲ್ಲ ಅಂತ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್ ಮತ್ತು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದರು. ಆದ್ರೆ ಮಹಾರಾಷ್ಟ್ರ ನಿಮ್ಮದಲ್ಲ, ಸೆಪ್ಟೆಂಬರ್ 9ರಂದು ಮುಂಬೈಗೆ ಬರ್ತೀನಿ, ಏನ್ ಮಾಡ್ತೀರಿ ಮಾಡಿಕೊಳ್ಳಿ ಅಂತ ಕಂಗನಾ ರನಾವತ್ ಗುಡುಗಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಕೇಂದ್ರ ಸರ್ಕಾರ Y+ ಕೆಟಗರಿಯ ಭದ್ರತೆ ನೀಡಲು ನಿರ್ಧರಿಸಿದೆ. ಇದಕ್ಕೂ ಮೊದಲು ಮೂಲತಃ ಹಿಮಾಚಲ ಪ್ರದೇಶದವರಾದ ಕಂಗನಾ ರನಾವತ್​ಗೆ ರಕ್ಷಣೆ ನೀಡುವುದಾಗಿ ಅಲ್ಲಿನ ಬಿಜೆಪಿ ಸರ್ಕಾರ ಘೋಷಿಸಿತ್ತು.

ಏನಿದು Y+ ಕೆಟಗರಿ ಭದ್ರತೆ..?

ಭಾರತದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಸೇನಾ ಮುಖ್ಯಸ್ಥರು, ಸುಪ್ರೀಂಕೋರ್ಟ್​ ಮತ್ತು ಹೈಕೋರ್ಟ್​ ನ್ಯಾಯಾಧೀಶರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು ಸೇರಿದಂತೆ ವಿಐಪಿ ಮತ್ತು ವಿವಿಐಪಿಗಳಿಗೆ ವಿವಿಧ ಕೆಟಗರಿಯ ಭದ್ರತೆ ನೀಡಲಾಗುತ್ತದೆ. SPG, NSG, ITBP, CRPF, CISF ಮುಂತಾದ ಭದ್ರತಾ ಏಜೆನ್ಸಿಗಳು ಈ ಕೆಲಸವನ್ನು ಮಾಡುತ್ತವೆ. ವ್ಯಕ್ತಿಯ ಹುದ್ದೆ ಮತ್ತು ಅವರಿಗೆ ಇರುವ ಬೆದರಿಕೆಗೆ ಅನುಗುಣವಾಗಿ ಭದ್ರತೆಯನ್ನು 4 ವರ್ಗಗಳಾಗಿ ವಿಂಗಡಿಸಲಾಗುತ್ತದೆ. Z+, Z, Y ಮತ್ತು X.

SPG: ಭಾರತದಲ್ಲಿ ಪ್ರಧಾನ ಮಂತ್ರಿಗೆ ಮಾತ್ರ ಎಸ್​ಪಿಜಿ ಕೆಟಗರಿ ಭದ್ರತೆಯನ್ನು ನೀಡಲಾಗುತ್ತದೆ.

Z+: ಈ ಕೆಟಗರಿಯಲ್ಲಿ 10 ಎನ್​ಎಸ್​ಜಿ ಕಮಾಂಡೋಗಳು ಮತ್ತು ಪೊಲೀಸರು ಸೇರಿ ಒಟ್ಟು 55 ಭದ್ರತಾ ಸಿಬ್ಬಂದಿ ಇರುತ್ತಾರೆ.

Z: ಈ ಕೆಟಗರಿಯಲ್ಲಿ 4ರಿಂದ 5 ಎನ್​ಎಸ್​ಜಿ ಕಮಾಂಡೋಗಳು ಮತ್ತು ಪೊಲೀಸರು ಸೇರಿ ಒಟ್ಟು 22 ಭದ್ರತಾ ಸಿಬ್ಬಂದಿ ಇರುತ್ತಾರೆ.

Y: ಈ ಕೆಟಗರಿಯಲ್ಲಿ ಒಬ್ಬ ಅಥವಾ ಇಬ್ಬರು ಕಮಾಂಡೋಗಳು ಮತ್ತು ಪೊಲೀಸರು ಸೇರಿ 11 ಭದ್ರತಾ ಸಿಬ್ಬಂದಿ ಇರುತ್ತಾರೆ.

X: ಈ ಕೆಟಗರಿಯಲ್ಲಿ ಕಮಾಂಡೋಗಳು ಇರುವುದಿಲ್ಲ. ಸಶ್ತ್ರಸಜ್ಜಿತ ಇಬ್ಬರು ಪೊಲೀಸ್ ಸಿಬ್ಬಂದಿ ಇರುತ್ತಾರೆ.

ಆದ್ರೆ ಕಂಗನಾ ರನಾವತ್​ಗೆ Y+ ಕೆಟಗರಿ ಭದ್ರತೆ ನೀಡಲಾಗಿದೆ. ಇದರ ಪ್ರಕಾರ ವೈಯಕ್ತಿಕ ಭದ್ರತಾ ಅಧಿಕಾರಿ ಮತ್ತು ಕಮಾಂಡೋಗಳು ಸೇರಿದಂತೆ ಒಟ್ಟು 11 ಮಂದಿ ಸಶಸ್ತ್ರ ಪೊಲೀಸರು ಕಂಗನಾಗೆ ರಕ್ಷಣೆ ನೀಡಲಿದ್ದಾರೆ ಅಂತ ಕೇಂದ್ರ ಗೃಹ ಇಲಾಖೆ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply