masthmagaa.com:

ದೇಶದ ಪ್ರಧಾನಿಯಿಂದ ಹಿಡಿದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ 60-70 ವರ್ಷ ದಾಟಿದ ಜನ ಸಾಮಾನ್ಯರು, ಜನ ನಾಯಕರು, ಎಲ್ಲರೂ ಆಸ್ಪತ್ರೆಗೆ ಹೋಗಿ ಕೊರೋನಾ ಲಸಿಕೆ ಚುಚ್ಚಿಸಿಕೊಂಡಿದ್ದಾರೆ, ಚುಚ್ಚಿಸಿಕೊಳ್ತಿದ್ದಾರೆ. ಆದ್ರೆ ರಾಜ್ಯದ ಕೃಷಿ ಮಂತ್ರಿ ಬಿ.ಸಿ. ಪಾಟೀಲ್ ಮಾತ್ರ ಲಸಿಕೆಯನ್ನ ಮನೆಗೇ ತರಿಸಿಕೊಂಡು ಹಾಕಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಪತ್ನಿಗೂ ಹಾಕಿಸಿದ್ದಾರೆ. ಬಹುಶಃ ಕೊರೋನಾ ಲಸಿಕೆಯನ್ನ ಮನೆಯಲ್ಲೇ ಹಾಕಿಸಿಕೊಂಡ ದೇಶದ ಮೊದಲ ವ್ಯಕ್ತಿ ಅಂದ್ರೆ ಅದು ಬಿ.ಸಿ. ಪಾಟೀಲ್ ಇರಬಹುದು. ಕೃಷಿ ಸಚಿವರ ಈ ದೌಲತ್ತಿಗೆ ಭಾರಿ ಆಕ್ರೋಶ ಕೇಳಿ ಬಂದಿದೆ. ಆಸ್ಪತ್ರೆಗೆ ಹೋಗಿನೇ ಲಸಿಕೆ ಹಾಕಿಸಿಕೊಳ್ಳಬೇಕು ಅನ್ನೋ ನಿಯಮ ಇದೆ. ಆದ್ರೆ ಬಿ.ಸಿ. ಪಾಟೀಲ್​ ಮಾತ್ರ ನಿಯಮಗಳನ್ನ ಗಾಳಿಗೆ ತೂರಿ ಲಸಿಕೆ ಚುಚ್ಚಿಸಿಕೊಂಡಿದ್ದಾರೆ. ಇಷ್ಟು ಸಾಲದೆಂಬಂತೆ ಈ ಬಗ್ಗೆ ಟ್ವೀಟ್ ಮಾಡಿ, ಎಲ್ಲಾ ಫಲಾನುಭವಿಗಳು ನಿಯಮಗಳನ್ನ ಫಾಲೋ ಮಾಡಿನೇ ಲಸಿಕೆ ಹಾಕಿಸಿಕೊಳ್ಳಿ ಅಂತ ಹೇಳಿದ್ದಾರೆ. ಒಂದ್ಕಡೆ ಅವರೇ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಮತ್ತೊಂದ್ಕಡೆ ಜನಸಾಮಾನ್ಯರು ರೂಲ್ಸ್ ಫಾಲೋ ಮಾಡಿ ಅಂತ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರೋ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ‘ಏನೇ ಎಮರ್ಜೆನ್ಸಿ ಇದ್ದರೂ ಮನೆಗೆ ಹೋಗಿ ಲಸಿಕೆ ಹಾಕುವಂತಿಲ್ಲ. ನಮ್ಮ ಅಧಿಕಾರಿಗಳು ಕೂಡ ಸಚಿವರಿಗೆ ಅದನ್ನ ಮನವರಿಕೆ ಮಾಡಿಕೊಡಬೇಕಿತ್ತು. ಈ ಸಂಬಂಧ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಾಧ್ಯವಾದ್ರೆ ಅಮಾನತು ಮಾಡ್ತೀವಿ. ಯಾವ ವಿಐಪಿ, ವಿವಿಐಪಿಗಳ ಮನೆಗೆ ಹೋಗಿ ಕೊರೋನಾ ಲಸಿಕೆ ಹಾಕುವಂತಿಲ್ಲ ಅಂತ ಇವತ್ತೇ ಪ್ರಕಟಣೆ ಹೊರಡಿಸುತ್ತೇವೆ. ಆಸ್ಪತ್ರೆಯಲ್ಲಿ ಲಸಿಕೆ ಪಡೆದಾಗ ಅಡ್ಡಪರಿಣಾಮ ಕಾಣಿಸಿಕೊಂಡ್ರೆ ಚಿಕಿತ್ಸೆ ಕೊಡಬಹುದು. ಆದ್ರೆ ಮನೆಯಲ್ಲಿ ಇದು ಸಾಧ್ಯವಾಗಲ್ಲ’ ಅಂತ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಇದೆಲ್ಲದರ ಬಗ್ಗೆ ಸ್ವತಃ ಬಿ.ಸಿ. ಪಾಟೀಲ್ ಮಾತನಾಡಿ, ‘ರಾತ್ರಿಯಷ್ಟೇ ಊರಿಂದ ಬಂದಿದ್ದೆ. ಜೊತೆಗೆ ಬೆಳಗ್ಗೆ ಮನೆ ಹತ್ರ ಸಾಕಷ್ಟು ಜನ ಕಾಯ್ತಾ ಇದ್ರು. ಹೀಗಾಗಿ ಮನೆಯಲ್ಲೇ ಲಸಿಕೆ ಹಾಕಿಸಿಕೊಂಡ್ರೆ ಅರ್ಧ ಗಂಟೆಯಲ್ಲೇ ಜನರ ಕೆಲಸವನ್ನ ಅಟೆಂಡ್ ಮಾಡ್ಬೋದು ಅಂದುಕೊಂಡೆ. ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬಾರದು ಅನ್ನೋ ನಿಯಮ ನನಗೆ ಗೊತ್ತಿರಲಿಲ್ಲ’ ಎಂದಿದ್ದಾರೆ.

-masthmagaa.com

Contact Us for Advertisement

Leave a Reply