ಅನರ್ಹರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ರಾಜ್ಯದ ಜನ ಎಲ್ಲರೂ ಅತಂತ್ರ ಯಾಕೆ ಗೊತ್ತಾ?

ಹಾಯ್ ಫ್ರೆಂಡ್ಸ್…ಸದ್ಯಕ್ಕೆ ಕರ್ನಾಟಕದಲ್ಲಿ ಅನರ್ಹರು, ಬಿಜೆಪಿ, ಕಾಂಗ್ರೆಸ್-ಜೆಡಿಎಸ್, ರಾಜ್ಯದ ಜನತೆ ಎಲ್ಲರೂ ಅತಂತ್ರ ಯಾಕೆ ಗೊತ್ತಾ? ಯಾಕೆ ಅಂದ್ರೆ ಸದ್ಯ ರಾಜ್ಯದಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿ. ಅದೇನು ಅಂತ ವನ್ ಬೈ ವನ್ ನೋಡ್ತಾ ಹೋಗೋಣ.

ಅನರ್ಹರು ಅತಂತ್ರ!
ಅತಂತ್ರದಲ್ಲಿ ಲಿಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಈ ಮಹಾನುಭಾವರುಗಳು. ಸರ್ಕಾರ ಬೀಳಿಸುತ್ತೇವೆ ಹೊಸ ಸರ್ಕಾರ ತರ್ತೇವೆ… ಮಂತ್ರಿಗಳಾಗಿ ಮೆರೆದಾಡುತ್ತೇವೆ ಅಂತ ರೇಸ್ ಕುದುರೆಗಳಂತೆ ಓಡಿದ್ದೇ ಓಡಿದ್ದು. ಆದರೆ ಈಗ ಇಂಗು ತಿಂದ ಮಂಗನಂತಾಗಿಬಿಟ್ಟಿದ್ದಾರೆ. ಆ ರಮೇಶಣ್ಣ, ಈ ರಮೇಶಣ್ಣ ಮತ್ತು ಫ್ರೆಂಡ್ಸ್ ತಲೆಮೇಲೆ ಅನರ್ಹತೆಯ ಸೀಲು ಕುಟ್ಟಿ ಈಗ ಆರಾಮಾಗಿ ಮನೆಯಲ್ಲಿದ್ದಾರೆ. ಈ ಮಹಾನುಭಾವರು ಮಾತ್ರ ಅತ್ತ ಶಾಸಕ ಸ್ಥಾನವು ಇಲ್ಲದೆ, ಇತ್ತ ಮಂತ್ರಿಗಿರಿಯೂ ಇಲ್ಲದೆ, ಭವಿಷ್ಯ ಏನು ಅಂತಲೂ ಗೊತ್ತಿಲ್ಲದೆ ಆತಂತ್ರ ವಾಗಿದ್ದಾರೆ. ಸ್ವರ್ಗವು ಅಲ್ಲ ನರಕವಲ್ಲ! ಮಧ್ಯದ ತ್ರಿಶಂಕು ಪರಿಸ್ಥಿತಿಯಲ್ಲಿ ನೇತಾಡುತ್ತಿರುವ ಪ್ರೇತಾತ್ಮದಂತೆ ಆಗಿಹೋಗಿದ್ದಾರೆ.

ಬಿಜೆಪಿ ಸರ್ಕಾರವೂ ಅತಂತ್ರ!
ಇನ್ನು ಫ್ರೆಂಡ್ಸ್ ಸರ್ಕಾರ ಮಾಡಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಕಥೆಯೇನು ಇದಕ್ಕಿಂತ ಭಿನ್ನವಾಗಿಲ್ಲ. ಯಾಕಂದ್ರೆ ಬಿಜೆಪಿಗೆ ಈ ಸರ್ಕಾರ ಎಷ್ಟು ದಿನ ಬರುತ್ತೆ ಅಂತ ಗೊತ್ತಿಲ್ಲ. ಸರ್ಕಾರದ ಯಜಮಾನ ಯಡಿಯೂರಪ್ಪನವರಿಗೆ ತಾನು ಎಷ್ಟು ದಿನ ಮುಖ್ಯಮಂತ್ರಿ ಅಂತ ಗೊತ್ತಿಲ್ಲ. ಮಂತ್ರಿಗಳಿಗೆ ತಾವೆಷ್ಟು ದಿನ ಮಂತ್ರಿ ಅಂತ ಗೊತ್ತಿಲ್ಲ. ಅನರ್ಹರು ಗೆದ್ದು ಬಂದರೆ ಯಾರೆಲ್ಲಾ ಜಾಗ ಖಾಲಿ ಮಾಡಬೇಕಾಗುತ್ತದೆ? ಇನ್ನು ಯಾರೆಲ್ಲಾ ಹೊಸಬರು ಮಂತ್ರಿಗಳಾಗುತ್ತಾರೆ ಗೊತ್ತಿಲ್ಲ. ಅನರ್ಹ ರಿಂದ ಸೃಷ್ಟಿಯಾಗಿರುವ ಸ್ಥಾನಗಳಿಗೆ ಚುನಾವಣೆ ನಡೆದಾಗ ಬಿಜೆಪಿ ಏಳಕ್ಕಿಂತ ಹೆಚ್ಚು ಗೆದ್ದು ಅಧಿಕಾರ ಉಳಿಸಿಕೊಳ್ಳುತ್ತೋ ಇಲ್ಲವೋ ಗೊತ್ತಿಲ್ಲ. ಬರೀ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ. ಸೋ ಎಲ್ಲವೂ ಅತಂತ್ರ ಅತಂತ್ರ ಅತಂತ್ರ.

ಕಾಂಗ್ರೆಸ್ ಸ್ಥಿತಿಯೂ ಅತಂತ್ರ!
ಇನ್ನು ಫ್ರೆಂಡ್ಸ್ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗಿತ್ತು ಕಾಂಗ್ರೆಸ್. ಇವರ ಪಾಡಂತೂ ಕೇಳುವುದೇ ಬೇಡ. ಸಿದ್ದು ಕಾಂಗ್ರೆಸ್ನಲ್ಲಿ ತಮ್ಮ ಪ್ರಭಾವ ಉಳಿಸಿಕೊಳ್ಳೋಕೆ ಸರ್ಕಸ್ ಮಾಡುತ್ತಿದ್ದಾರೆ. ಆದರೆ ಇಷ್ಟು ದಿವಸ ಹೊರಗಿಂದ ಬಂದು ಇಲ್ಲಿ ತಾವು ಆಟ ಆಡಿದ್ದು ಸಾಕು ಈಗ ಜಾಗ ಖಾಲಿ ಮಾಡಿ ಅಂತ ಮೂಲನಿವಾಸಿಗಳೆಲ್ಲ ಸಿದ್ದು ಮೇಲೆ ದಾಳಿಗೆ ಇಳಿದಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಸಮಸ್ಯೆಗಳಲ್ಲಿ ಮುಳುಗಿದ್ದರೂ ಅದರ ಲಾಭ ಪಡೆಯಲು ಕಾಂಗ್ರೆಸ್ ಗೆ ಆಗುತ್ತಿಲ್ಲ. ತನ್ನ ನಾಯಕ ಯಾರು ಅನ್ನೋದೇ ಕಾಂಗ್ರೆಸ್ಗೆ ಗೊತ್ತಿಲ್ಲ. ಸೋ ಕಾಂಗ್ರೆಸ್ ಪರಿಸ್ಥಿತಿಯೂ ಅತಂತ್ರ.

ಜೆಡಿಎಸ್ ಕತೆಯೂ ಅತಂತ್ರ!
ಇನ್ನು ಈ ಪಕ್ಷದ ಕಥೆಯಂತೂ ಕೇಳೋದೇ ಬೇಡ. ಒಬ್ಬರಾದ ಮೇಲೆ ಒಬ್ಬರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಜಿ.ಟಿ. ದೇವೇಗೌಡರಂತಹ ಕೆಲವು ಹಿರಿಯರು ಪಕ್ಷದಲ್ಲಿದ್ದುಕೊಂಡೇ ಕುಮಾರಸ್ವಾಮಿಯನ್ನ ಬೈಕೊಂಡು ಓಡಾಡುತ್ತಿದ್ದಾರೆ. ಅನರ್ಹ ಶಾಸಕರಾದ ವಿಶ್ವನಾಥ್ ಮತ್ತು ನಾರಾಯಣಗೌಡ ಅಂತೂ ದಿನಬೆಳಗಾದರೆ ದಳಪತಿ ಗಳನ್ನು ಝಾಡಿಸುತ್ತಾ, ಇನ್ನು 15 ಜನ ಜೆಡಿಎಸ್ ಶಾಸಕರು ಪಕ್ಷ ಬಿಡುತ್ತಾರೆ ಅಂತ ಹೆದರಿಸುತ್ತಿದ್ದಾರೆ. ಮತ್ತೊಂದು ಕಡೆ ಟೆಲಿಫೋನ್ ಕದ್ದಾಲಿಕೆ ಕಳ್ಳಗಿವಿ ಪ್ರಕರಣದಲ್ಲಿ ಸಿಬಿಐ ತನಿಕೆ ಶುರುವಾಗಿರುವುದು ಕುಮಾರಸ್ವಾಮಿಗೆ ಹೊಸ ಕಂಟಕವನ್ನು ತಂದಿಟ್ಟಿದೆ. ಆಡಳಿತ ಮತ್ತು ಪ್ರತಿಪಕ್ಷದ ನಾಯಕರುಗಳು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಸೇರಿದಂತೆ ದೊಡ್ಡ ದೊಡ್ಡ ಮಠಗಳ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಆಗಿದೆ ಎನ್ನುವಂತಹ ಆರೋಪ ಕೇಳಿ ಬರುತ್ತಿರುವುದು ಕುಮಾರಸ್ವಾಮಿ ಸಂಕಷ್ಟವನ್ನು ಹೆಚ್ಚಿಸುತ್ತಿದೆ. ಒಂದು ರೀತಿ ನಿರಾಸೆ, ನಿರಾಸಕ್ತಿಯ ಕಾರ್ಮೋಡ ಜೆಡಿಎಸ್ ಪಾಳಯದಲ್ಲಿ ಆವರಿಸಿದೆ. ಹೀಗಾಗಿ ತೆನೆಹೊತ್ತ ಮಹಿಳೆಯ ಪಕ್ಷದಲ್ಲಿ ಕೂಡ ಎಲ್ಲವೂ ಅತಂತ್ರ ಹಾಗೂ ಅಯೋಮಯವಾಗಿದೆ.

ಇವರನ್ನೆಲ್ಲ ಆಯ್ಕೆ ಮಾಡಿ ಕಳಿಸಿದ ಕರ್ನಾಟಕದ ಜನತೆಯೂ ಅತಂತ್ರ!
ಇನ್ನು ನಮ್ಮ ಹಣೆಬರ ನೋಡಿ… ವೋಟ್ ಹಾಕಿ ಕಳಿಸಿದ ತಪ್ಪಿಗೆ ಈಗ ಬಾಯಿ ಬಾಯಿ ಪಡೆದುಕೊಳ್ಳುವಂತೆ ಆಗಿದೆ. ಸರ್ಕಾರ ಇದ್ದೂ ಇಲ್ಲದಂತಿದೆ. ಪ್ರತಿಪಕ್ಷ ಇದ್ದು ಸತ್ತಂತಿದೆ. ಮತ್ತೊಂದು ಕಡೆ ಪ್ರಕೃತಿ ಕೂಡ ಮುನಿಸಿಕೊಂಡು ಎಲ್ಲಕಡೆಯಿಂದಲೂ ಬಾರಿಸುತ್ತಿದೆ. ನೆರೆ ಪರಿಹಾರದ ಕೆಲಸ ಕುಂಟುತ್ತಾ ಸಾಗಿದೆ. ಎಲ್ಲದರ ನಡುವೆ ಕರ್ನಾಟಕ ವಿಧಾನಸಭಾಗೆ ಮತ್ತೆ ಕೆಲವೇ ತಿಂಗಳಲ್ಲಿ ಎಲೆಕ್ಷನ್ ನಡೆಯಬಹುದು ಅನ್ನುವ ವರದಿಗಳೂ ಕೇಳಿ ಬರುತ್ತಿವೆ. ಇದನ್ನೆಲ್ಲಾ ನೋಡಿ ಏನು ಮಾಡುವುದು ಅಂತ ಗೊತ್ತಾಗದೆ ಕನ್ಫ್ಯೂಸ್ ಆಗಿ ಆಕಾಶ ನೋಡುವ ಪರಿಸ್ಥಿತಿ ರಾಜ್ಯದ ಮಹಾನ್ ಪ್ರಜೆಗಳಾದ ನಮ್ಮದಾಗಿದೆ.

Contact Us for Advertisement

Leave a Reply