ಹಿಜಬ್​ vs ಕೇಸರಿ ಶಾಲು: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

masthmagaa.com:

ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ನಡೀತಿರೋ ಹಿಜಾಬ್​ ವರ್ಸಸ್​ ಕೇಸರಿ ಶಾಲು ಸಂಘರ್ಷ ಮತ್ತು ವಿವಾದ ದಿನಗಳೆದಂತೆ ದೊಡ್ಡದಾಗ್ತಾ ಹೋಗ್ತಿದೆ. ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನ ಒಳಗೆ ಬಿಟ್ಟುಕೊಳ್ಳದ ಉಡುಪಿಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜು ವಿರುದ್ಧ ಇವತ್ತು ಸುಮಾರು 20 ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ. ಕಾಲೇಜಿನ ಗೇಟ್​​​ ಹೊರಗೆ ಪ್ರತಿಭಟಿಸಿದ ವಿದ್ಯಾರ್ಥಿನಿಯರನ್ನ ಮನವೊಲಿಸಲು ಪ್ರಾಂಶುಪಾಲರು, ಶಿಕ್ಷಕರು ಸಾಕಷ್ಟು ಪ್ರಯತ್ನಪಟ್ಟರು. ಆದ್ರೆ ಪ್ರತಿಭಟನಾಕಾರರು ಅದಕ್ಕೆ ಒಪ್ಪಲಿಲ್ಲ. ಹಿಜಾಬ್​ ಧರಿಸಬಾರ್ದು ಅಂತ ಆದೇಶ ಪ್ರತಿ ಇದ್ರೆ ತೋರ್ಸಿ ಅಂತ ಶಿಕ್ಷಕರನ್ನ ಕೇಳಿದ್ರು. ಪ್ರತಿಭಟನಾನಿರತ ಓರ್ವ ವಿದ್ಯಾರ್ಥಿನಿ ಮಾತನಾಡಿ, ಹಿಜಾಬ್ ನಮ್ಮ ಜೀವನದ ಒಂದು ಭಾಗ. ಇದೇ ಕಾಲೇಜಿನಲ್ಲಿ ನಮ್ಮ ಸೀನಿಯರ್ಸ್​ ಹಿಜಾಬ್ ಧರಿಸಿಯೇ ಶಿಕ್ಷಣ ಮುಗಿಸಿದ್ರು. ಏಕಾಏಕಿ ಹೊಸ ನಿಯಮ ಹೇಗೆ ಬರಲು ಸಾಧ್ಯ? ನಾವು ಹಿಜಾಬ್​ ಧರಿಸಿದ್ರೆ ಏನು ಸಮಸ್ಯೆ? ನಮ್ಗೆ ಹಿಜಬ್ಬೂ ಬೇಕು, ಶಿಕ್ಷಣವೂ ಬೇಕು.. ಎರಡಕ್ಕೂ ಅವಕಾಶ ಮಾಡಿಕೊಡಿ. ಪ್ರಸ್ತುತ ಶೈಕ್ಷಣಿಕ ವರ್ಷ ಮುಗಿಯಲು ಇನ್ನು ಮೂರ್ನಾಲ್ಕು ತಿಂಗಳು ಇದೆ. ಅಲ್ಲಿವರೆಗೆ ನಮಗೆ ಹಿಜಬ್ ಧರಿಸಲು ಬಿಡಿ. ಆಮೇಲೆ ಹಿಜಬ್​ ಧರಿಸಲು ಯಾವ ಕಾಲೇಜಿನಲ್ಲಿ ಅವಕಾಶ ಕೊಡ್ತಾರೋ ಅಲ್ಲಿಗೆ ಹೋಗ್ತೀವಿ ಅಂತ ಹೇಳಿದ್ದಾರೆ. ಇನ್ನು ಕಾಲೇಜು ಆಡಳಿತ ಮಂಡಲಿ ನಾಳೆ ಕಾಲೇಜಿಗೆ ರಜೆ ಘೋಷಿಸಿದೆ. ಈ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಕಾಣ್ತಿದೆ. ಶನಿವಾರ ಭಾನುವಾರ ಎರಡು ದಿನ ಸಮಯ ಸಿಗುತ್ತೆ. ಅಷ್ಟರಲ್ಲಿ ಸರ್ಕಾರದಿಂದ ಏನಾದ್ರೂ ಆದೇಶ ಬಂದ್ರೆ ಸಮಸ್ಯೆ ಬಗೆಹರಿಸಬಹುದು ಅನ್ನೋದು ಕಾಲೇಜು ಆಡಳಿತ ಮಂಡಳಿ ನಿರೀಕ್ಷೆ.

ಅತ್ತ ಮೈಸೂರಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಐ ಲವ್ ಹಿಜಬ್ ಸೇರಿದಂತೆ ಹಿಜಾಬ್​ ಪರ ಭಿತ್ತಿಪತ್ರಗಳನ್ನ ಹಿಡಿದು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಬ್ ಧರಿಸೋಕೆ ಅವಕಾಶ ಕೋಡಿ ಅಂತ ಅಭಿಯಾನ ನಡೆಸಿದ್ರು. ಹಿಜಾಬ್​ ವಿವಾದ ಭುಗಿಲೇಳ್ತಿದ್ದಂತೇ ಬೈಂದೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ಮಾಡಿದ್ದಾರೆ.)

ಸಿಎಂ ಮಹತ್ವದ ಸಭೆ

ಹಿಜಾಬ್ ವಿವಾದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಕಾನೂನು ಮತ್ತು ಶಿಕ್ಷಣ ಇಲಾಖೆಯವರನ್ನ ಕರೆಸಿ ಮಾತುಕತೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ಕಾರದ ವಾದವೇನು ಅನ್ನೋದನ್ನ ಹೈಕೋರ್ಟ್​ನಲ್ಲಿ ಮಂಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ವಿಚಾರ ಹೈಕೋರ್ಟ್​ನಲ್ಲಿರೋದ್ರಿಂದ ಕರ್ನಾಟಕ ಎಡುಕೇಷನ್​ ಆ್ಯಕ್ಟ್​ ಪ್ರಕಾರ ಸಮವಸ್ತ್ರವನ್ನ ಎಲ್ಲಾ ಮಕ್ಕಳು ಫಾಲೋ ಮಾಡಬೇಕು. ಯಾವುದೇ ಧಾರ್ಮಿಕ ನಿಲುವನ್ನ ಶೈಕ್ಷಣಿಕ ಸಂಸ್ಥೆಗಳ ಮೇಲೆ ಹೇರೋಕೆ ಆಗಲ್ಲ ಅಂತ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ವಕ್ಫ್​ ಬೋರ್ಡ್​ ಅಧ್ಯಕ್ಷ ಹೇಳಿದ್ದೇನು?

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಅದಿ ಇವತ್ತು ಶಿಕ್ಷಣ ಮಂತ್ರಿ ಬಿ.ಸಿ. ನಾಗೇಶ್​ರನ್ನ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅವರು, ರಾಜ್ಯದ ಹಲವೆಡೆಯಿಂದ ನಮ್ಗೆ ಕರೆ ಬರ್ತಿದೆ. ಈ ಸಂಬಂಧ ಸಚಿವರನ್ನ ಭೇಟಿಯಾಗಿದ್ದೀನಿ. ಕಾನೂನು ಪ್ರಕಾರನೇ ಸರ್ಕ್ಯೂಲರ್ ಹೊರಡಿಸಿದ್ದೇವೆ ಅಂತ ಸಚಿವರು ಹೇಳಿದ್ದಾರೆ. ಹಿಜಾಬ್ ಬಗ್ಗೆ ಕೇರಳ ಮತ್ತು ಬಾಂಬೆ ಹೈಕೋರ್ಟ್​ಗಳ ಆದೇಶವನ್ನ ತೋರಿಸಿದ್ದಾರೆ. ಮುಸ್ಲಿಂ ಸಮುದಾಯ ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದೆ. ಎಲ್ಲಾ ಕಡೆ ಹಿಂಗಾದ್ರೆ ನಮ್ಗೆ ತೊಂದ್ರೆ ಆಗುತ್ತೆ ಅಂತ ಸಚಿವರಿಗೆ ಹೇಳಿದ್ದೀನಿ ಎಂದಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?

ಹಿಜಾಬ್​, ಸಮವಸ್ತ್ರ ಮತ್ತು ಕೇಸರಿ ಶಾಲು ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಾತನಾಡಿದ್ದಾರೆ. ಪಿಯು ಮಟ್ಟದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿ ಅಂತ ಸರ್ಕಾರ ಎಲ್ಲೂ ಹೇಳಿಲ್ಲ. ಕುಂದಾಪುರದಲ್ಲಿ ಸರ್ಕಾರಿ ಕಾಲೇಜಿನ ಪ್ರಿನ್ಸಿಪಾಲ್ ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನ ಗೇಟ್​ ಬಳಿಯೇ ತಡೆದಿದ್ದು ಸರಿಯಲ್ಲ. ಇದು ಮೂಲಭೂತ ಹಕ್ಕಿನ ವಿರುದ್ಧ. ಬಿಜೆಪಿಯವರು ಕೇಸರಿ ಶಾಲು ಹಾಕ್ಕೊಂಡು ವಿವಾದ ಮಾಡ್ತಿದ್ದಾರೆ. ಕೇಸರಿ ಶಾಲು ಹಾಕ್ತಿರೋದು ಈಗೀಗ. ಹಿಜಾಬ್ ಧರಿಸೋದು ಬಹಳ ವರ್ಷದಿಂದ ನಡ್ಕೊಂಡು ಬಂದಿದೆ. ಮುಸ್ಲಿಂ ಹೆಣ್ಣು ಮಕ್ಕಳನ್ನ ಶಿಕ್ಷಣದಿಂದ ವಂಚಿರನ್ನಾಗಿ ಮಾಡೋ ಉದ್ದೇಶ ಇದರ ಹಿಂದಿದೆ. ಅವನ್ಯಾರೋ ಶಾಸಕ ರಘುಪತಿ ಭಟ್​ ಮೀಟಿಂಗ್ ಮಾಡಿ ಸಮವಸ್ತ್ರ ಕಡ್ಡಾಯ ಮಾಡಿದ್ನಂತೆ. ಇವನ್ಯಾನವನು ಹೇಳೋಕೆ ಅಂತ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಶಿಕ್ಷಣ ಮಂತ್ರಿ ಸಿಟ್ಟು

ಸಿದ್ದರಾಮಯ್ಯ ಹೇಳಿಕೆಗೆ ಶಿಕ್ಷಣ ಮಂತ್ರಿ ಬಿಸಿ ನಾಗೇಶ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಹೀಗೆ ಹೇಳಿರೋದು ಸರಿಯಲ್ಲ. ಕಾನೂನು ಮಾಡಿದ್ದೇ ಸಿದ್ದರಾಮಯ್ಯ ಕಾಲದಲ್ಲಿ, 2018ರಲ್ಲಿ.. ಸಮವಸ್ತ್ರವನ್ನ ನಿರ್ಧರಿಸೋ ಅಧಿಕಾರ ಆಯಾ ಶಿಕ್ಷಣ ಸಂಸ್ಥೆಗಳಿವೆ. ಸಿಎಂ ಆಗಿದ್ದವರು ಹೀಗೆ ಮಾತನಾಡೋಕೆ ನಾಚಿಕೆ ಆಗಬೇಕು. ಯಾವನೋ ರಘುಪತಿ ಭಟ್​ ಅಂತ ಕರೆದಿದ್ದಾರೆ. ಇದೆಲ್ಲಾ ಸರಿಯಲ್ಲ. ಒಂದು ಧರ್ಮದ ವೋಟಿಗಾಗಿ ಸಿದ್ದರಾಮಯ್ಯ ಹೀಗೆ ಮಾಡ್ತಿದ್ದಾರೆ. ರಾಜಕೀಯ ಕ್ಷೇತ್ರವನ್ನ ಹಾಳ್​ ಮಾಡಿ ಆಗಿದೆ. ಈಗ ಶಿಕ್ಷಣ ಕ್ಷೇತ್ರವನ್ನ ಹಾಳ್​ ಮಾಡ್ಬೇಡಿ. ಪ್ರಪಂಚದ 8 ದೇಶದಲ್ಲಿ ಹಿಜಾಬ್ ಬ್ಯಾನ್​ ಮಾಡಿದ್ದಾರೆ. ಆದ್ರೆ ಇದನ್ನ ಮಾತ್ರ ಯಾಕೆ ಸುದ್ದಿ ಮಾಡ್ತಿದ್ದಾರೆ. ಇದೆಲ್ಲಾ ದೇಶದ ಸಮಗ್ರತೆಯನ್ನ ಹಾಳು ಮಾಡೋ ಪ್ರಯತ್ನ ಥರ ಕಾಣ್ತಿದೆ ಅಂತ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಜಮೀರ್ ಅಹ್ಮಾದ್​ ಖಾನ್​ ಹೇಳಿದ್ದೇನು?

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಖಾನ್​ ಮಾತನಾಡಿ, ಹಿಜಾಬ್​ ಧರಿಸೋದು ಮುಸ್ಲಿಂ ಹೆಣ್ಣುಮಕ್ಕಳ ಹಕ್ಕು. ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಹಿಜಾಬ್​ ಧರಿಸಿ ಕಾಲೇಜಿಗೆ ಬರ್ತಿದ್ದಾರೆ. ಕೇಸರಿ ಶಾಲು ಧರಿಸೋದು ನಿನ್ನೆ ಮೊನ್ನೆಯಿಂದ ನಡ್ಕೊಂಡು ಬಂದಿದೆ. ಹಿಜಾಬ್​​ ಧರಿಸೋದು ಮಕ್ಕಳ ಸೌಂದರ್ಯ ಕಾಣ್ಬಾರ್ದು, ಬೇರೆಯವರ ಕಣ್ಣು ಬೀರಬಾರ್ದು ಅಂತ ಹೇಳಿದ್ಧಾರೆ.

ಸಚಿವ ಸುನಿಲ್​ ಕುಮಾರ್ ಹೇಳಿದ್ದೇನು?

ಸಚಿವ ಸುನಿಲ್​ ಕುಮಾರ್ ಮಾತನಾಡಿ, ಮೊನ್ನೆ ಮೊನ್ನೆವರೆಗೆ ಮುಸ್ಲಿಂ ಸಂಘಟನೆಗಳು ಇದರ ಹಿಂದೆ ಇವೆ ಅಂದುಕೊಂಡಿದ್ದೆ. ಆದ್ರೆ ಇವತ್ತು ಸಿದ್ದರಾಮಯ್ಯ ಮಾತಾಡೋದು ನೋಡಿದ್ರೆ ರಾಜಕೀಯ ಇದ್ದಂತೆ ಕಾಣ್ತಿದೆ. ನಾವು ಯಾವ್ದೇ ಕಾರಣಕ್ಕೂ ಕರ್ನಾಟಕ, ಉಡುಪಿ ಅಥವಾ ಮಂಗಳೂರನ್ನ ತಾಲಿಬಾನ್ ಆಗೋಕೆ ಬಿಡಲ್ಲ ಅಂತ ಹೇಳಿದ್ದಾರೆ.

ಯಥಾಸ್ಥಿತಿ ಕಾಪಾಡುವಂತೆ ಸೂಚನೆ

ಈ ಎಲ್ಲಾ ವಿವಾದ, ಪರ-ವಿರೋಧ ಚರ್ಚೆಗಳ ನಡುವೆ ನ್ಯಾಯಾಲಯದ ತೀರ್ಪು ಬರೋವರೆಗೆ ಯಥಾಸ್ಥಿತಿ ಕಾಪಾಡುವಂತೆ ಅಂದ್ರೆ ಸಮವಸ್ತ್ರ ಸಂಹಿತೆಯನ್ನ ಪಾಲಿಸುವಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ. 2021ರ ಜೂನ್​ 1ರಂದು ಸಮವಸ್ತ್ರ ಸಂಹಿತೆಯನ್ನ ಹೊರಡಿಸಲಾಗಿತ್ತು.

-masthmagaa.com

Contact Us for Advertisement

Leave a Reply