2 ತಿಂಗಳ ಬಳಿಕ ಫಾರೂಖ್, ಉಮರ್ ಅಬ್ದುಲ್ಲಾ ಭೇಟಿಗೆ ಅವಕಾಶ..!

ಜಮ್ಮು ಕಾಶ್ಮೀರದಲ್ಲಿ ಉಮರ್ ಅಬ್ದುಲ್ಲಾ ಮತ್ತು ಫಾರೂಖ್ ಅಬ್ದುಲ್ಲಾ ಅವರನ್ನು ಬಂಧನದಲ್ಲಿಟ್ಟು 2 ತಿಂಗಳುಗಳೇ ಕಳೆದಿವೆ. 2 ತಿಂಗಳಲ್ಲಿ ಇದೇ ಮೊದಲ ಬಾರಿಗೆ ತಂದೆ-ಮಗನನ್ನು ಭೇಟಿಯಾಗಲು ಅವರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕರಿಗೆ ಅವಕಾಶ ನೀಡಲಾಗಿದೆ. ಪಕ್ಷದ ಪ್ರಾಂತೀಯ ಅಧ್ಯಕ್ಷ ದೇವೇಂದ್ರ ಸಿಂಗ್ ರಾಣಾ ಅವರ ನೇತೃತ್ವದ ನಿಯೋಗ ಇಂದು ಉಮರ್ ಅಬ್ದುಲ್ಲಾ ಮತ್ತು ಫಾರೂಖ್ ಅಬ್ದುಲ್ಲಾ ಅವರನ್ನು ಭೇಟಿಯಾಗಲಿದೆ. ಜಮ್ಮು ಕಾಶ್ಮೀರ ಆಡಳಿತ ಭೇಟಿಗೆ ಅವಕಾಶ ನೀಡಿದೆ ಅಂತ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವಕ್ತಾರ ಮದನ್ ಮಂತೂ ತಿಳಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಪಡಿಸಿದ ಬಳಿಕ ಇವರನ್ನು ಬಂಧನದಲ್ಲಿ ಇರಿಸಲಾಗಿದೆ. 81 ವರ್ಷದ ಫಾರೂಖ್ ಅಬ್ದುಲ್ಲಾ ಅವರನ್ನು ಶ್ರೀನಗರದ ಮನೆಯಲ್ಲೇ ಗೃಹಬಂಧನಕ್ಕೆ ಒಳಪಡಿಸಿದ್ರೆ, ಹತ್ತಿರದಲ್ಲೇ ಇರುವ ಹರಿನಿವಾಸ್ ಎಂಬ ಗೆಸ್ಟ್ ಹೌಸ್‍ನಲ್ಲಿ ಪುತ್ರ ಫಾರೂಖ್ ಅಬ್ದುಲ್ಲಾರನ್ನು ಇರಿಸಲಾಗಿದೆ.

ಇವರಿಬ್ಬರು ಮಾತ್ರವಲ್ಲ. ಪೀಪಲ್ಸ್ ಡೆಮೋಕ್ರೆಟಿಕ್ ಪಕ್ಷದ ಮುಖ್ಯಸ್ಥೆ, ಮಾಜಿ ಸಿಎಂ ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಚೇರ್‍ಮನ್ ಸಜ್ಜಾದ್ ಲೋನ್ ಕೂಡ ಗೃಹಬಂಧನದಲ್ಲಿದ್ದಾರೆ. ಅಕ್ಟೋಬರ್ 2ರಂದು ಗಾಂಧಿ ಜಯಂತಿ ಅಂಗವಾಗಿ ಹಲವರನ್ನು ಗೃಹಬಂಧನದಿಂದ ಮುಕ್ತಗೊಳಿಸಲಾಗಿತ್ತು.

Contact Us for Advertisement

Leave a Reply