‘ಕೆರಾಡಿ ಸ್ಟುಡಿಯೋಸ್’: ಹುಟ್ಟೂರಿನ ಹೆಸರಲ್ಲೇ ಹೊಸ ಸಂಸ್ಥೆ ಆರಂಭಿಸಿದ ರಿಷಬ್ ಶೆಟ್ಟಿ!

masthmagaa.com:

ಕಾಂತಾರ ಸಿನಿಮಾದ ಗೆಲುವಿನ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಮ್ಮ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈಗ ಕಾಂತಾರ 2 ಸಿನಿಮಾ ಕೆಲಸದಲ್ಲಿ ಬಿಝಿ ಆಗಿರೋದು ಎಲ್ಲರಿಗೂ ಗೊತ್ತಿರುವ ವಿಷಯಾನೇ.

ಆದಷ್ಟು ಬೇಗ ಕಾಂತಾರ 2 ಸಿನಿಮಾ ಮುಗಿಸಿ ಶೆಟ್ರು ರಿಲೀಸ್ ಡೇಟ್ ಬಗ್ಗೆ ಯಾವಾಗ ಅಪ್ಡೇಟ್ ಕೊಡ್ತಾರೆ ಅಂತ ಅಭಿಮಾನಿಗಳೆಲ್ಲ ಕಾಯ್ತಾ ಇರೋ ಹೊತ್ತಲ್ಲೇ ರಿಷಬ್ ಶೆಟ್ಟಿ ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಆದ್ರೆ ಇದು ಕಾಂತಾರ 2 ಸಿನಿಮಾ ಬಗ್ಗೆ ಅಲ್ಲ ಬೇರೆ ವಿಷಯದ ಬಗ್ಗೆ. ಈ ಬಗ್ಗೆ ಸ್ವತಃ ತಾವೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಾಕಿರುವ ಸೋಶಿಯಲ್ ಮೀಡಿಯಾ ಪೋಸ್ಟ್ ಹೀಗಿದೆ:

‘ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ.. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ, ‘ಕೆರಾಡಿ ಸ್ಟುಡಿಯೋಸ್’ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸದ್ದೇವೆ. ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ.

ಅಂದ ಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು. ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಚಿತ್ರರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ. ನಿಮ್ಮ ಸಹಕಾರವಿರಲಿ.

ರಿಷಬ್ ಶೆಟ್ಟಿ

ಅಂತ ಶೆಟ್ರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ಒಳ್ಳೆ ಸಿನಿಮಾ ಮಾಡಿದ್ರು ಜನರನ್ನ ಥಿಯೇಟರ್ ಗೆ ಕರೆದುಕೊಂಡು ಬರೋದೇ ಕಷ್ಟ ಆಗಿರುವ ಈ ಕಾಲದಲ್ಲಿ ರಿಷಬ್ ಶೆಟ್ಟಿ ತೆಗೆದುಕೊಂಡಿರುವ ಈ ಒಂದು ಇನಿಶಿಯೇಟಿವ್ ಅನ್ನ ನಿಜಕ್ಕೂ ಶ್ಲಾಘಿಸಬೇಕು.

ಸ್ನೇಹಿತರೇ ಮೊನ್ನೆ ಅಷ್ಟೇ ನಾವು ಥಿಯೇಟರ್ ಸಂಸ್ಕೃತಿ ಕ್ಷೀಣಿಸುತ್ತಿರುವ ಬಗ್ಗೆ ಒಂದು ವರದಿ ಮಾಡಿದ್ವಿ. ದೊಡ್ಡ ಮಲ್ಟಿಪ್ಲೆಕ್ಸ್ ಕಂಪನಿಗಳಾದ PVR INOX ಇನ್ನಾರು ತಿಂಗಳಲ್ಲಿ 50 ಸ್ಕ್ರೀನ್ ಗಳನ್ನ ಮುಚ್ಟುತ್ತಿರುವ ಬಗ್ಗೆ, ಹಾಗೇನೇ OTT ಇಂದಾಗಿ ಥಿಯೇಟರ್ ಕಲ್ಚರ್ ಮೇಲೆ ಹೊಡೆತ ಬಿದ್ದಿರುವ ಬಗ್ಗೆ ತಿಳಿಸಿದ್ವಿ. ಹಾಗೇನೇ ಥಿಯೇಟರ್ ಕಲ್ಚರ್ ಉಳಿಸೋದಕ್ಕೆ ಸ್ಟಾರ್ ನಟರು ಮನಸ್ಸು ಮಾಡಬೇಕು ಅಂತ ಕೂಡ ಹೇಳಿದ್ವಿ. ಆ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಅವರು ತಮ್ಮದೇ ಮಾರ್ಕೆಟಿಂಗ್ ಕಂಪನಿ ಶುರು ಮಾಡಿ ತಮ್ಮ ಕೈಲಾದದ್ದನ್ನ ಮಾಡ್ಲಿಕ್ಕೆ ಹೊರಟಿದ್ದಾರೆ.

ಈ ಮೂಲಕ ಸಿನಿಮಾ ಮಾರ್ಕೆಟಿಂಗ್ ವಿಚಾರದಲ್ಲಿ ಯಾವ ರೀತಿಯಲ್ಲಿ ಕ್ರಾಂತಿ ಆಗ್ಬಹುದು, ಥಿಯೇಟರ್ ಕಡೆಗೆ ಜನ ಮುಖ ಮಾಡೋ ರೀತಿ ಕೆರಾಡಿ ಸ್ಟುಡಿಯೋಸ್ ಯಾವ ಪರಿ ಮೋಡಿ ಮಾಡಬಹುದು ಅನ್ನೋದನ್ನೆಲ್ಲ ಇನ್ನಷ್ಟೇ ಕಾದು ನೋಡಬೇಕಾಗಿದೆ.

-masthmagaa.com

Contact Us for Advertisement

Leave a Reply