‘ಇಡೀ ದೇಶದ ಜನ ಒಬ್ಬ ವ್ಯಕ್ತಿಯನ್ನು ಮಾತ್ರ ನಂಬಿದ್ದಾರೆ’ – ಖುಷ್ಬೂ ಹೇಳಿಕೆ

masthmagaa.com:

ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಕೆಲ ತಿಂಗಳುಗಳು ಬಾಕಿ ಇರುವಾಗಲೇ ನಟಿ ಮತ್ತು ರಾಜಕಾರಣಿ ಖುಷ್ಬೂ ಸುಂದರ್ ಕಾಂಗ್ರೆಸ್​​ ತೊರೆದು ಬಿಜೆಪಿ ಸೇರಿದ್ದಾರೆ. ಬಳಿಕ ಮಾತನಾಡಿದ ಅವರು, ‘ಪಕ್ಷವು ನನಗೆ ಯಾವ ಸ್ಥಾನಮಾನ ಕೊಡುತ್ತದೆ ಅನ್ನೋದು ಮುಖ್ಯವಲ್ಲ. ದೇಶದ ಜನತೆಗೆ ಬಿಜೆಪಿ ಏನು ಮಾಡುತ್ತದೆ ಅನ್ನೋದು ನನ್ನ ನಿರೀಕ್ಷೆ. ದೇಶದ 128 ಕೋಟಿ ಜನ ಒಬ್ಬ ವ್ಯಕ್ತಿಯನ್ನು (ಪ್ರಧಾನಿ ಮೋದಿಯನ್ನು) ನಂಬುತ್ತಿರುವಾಗ ಅವರು ಮಾಡುತ್ತಿರೋದು ಖಂಡಿತವಾಗಿಯೂ ಸರಿಯಾಗಿದೆ ಅನ್ನೋದು ನನ್ನ ಅಭಿಪ್ರಾಯ’ ಅಂತ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್​ ಖುಷ್ಬೂ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರನ್ನು ಖುಷ್ಬೂ ಭೇಟಿಯಾದರು.

ಇಂದು ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಬರೆದಿದ್ದ ಖುಷ್ಬೂ, ‘ಕಾಂಗ್ರೆಸ್​ ಪಕ್ಷದಲ್ಲಿ ವಾಸ್ತವ ಪರಿಸ್ಥಿತಿ ಗೊತ್ತಿಲ್ಲದವರು ಅಥವಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳದ ವ್ಯಕ್ತಿಗಳು ನಮ್ಮಂತಹ ನಿಷ್ಠಾವಂತ ಕಾರ್ಯಕರ್ತರನ್ನು ಕೆಳಗೆ ತಳ್ಳುತ್ತಿದ್ದಾರೆ’ ಅಂತ ಬೇಸರ ವ್ಯಕ್ತಪಡಿಸಿದ್ದರು. ಕಾಂಗ್ರೆಸ್​ನಲ್ಲಿ ರಾಷ್ಟ್ರೀಯ ವಕ್ತಾರೆಯಾಗಿ ಖುಷ್ಬೂ ಕಾರ್ಯ ನಿರ್ವಹಿಸುತ್ತಿದ್ದರು.

2010ರಲ್ಲಿ ಡಿಎಂಕೆ ಪಕ್ಷವನ್ನು ಸೇರಿದ ಖುಷ್ಬೂ, 2014ರಲ್ಲಿ ಡಿಎಂಕೆ ತೊರೆದು ಕಾಂಗ್ರೆಸ್​ ಸೇರಿದ್ರು. ಆದ್ರೆ 2014ರ ಲೋಕಸಭೆ ಚುನಾವಣೆಯಲ್ಲಿ ಖುಷ್ಬೂಗೆ ಕಾಂಗ್ರೆಸ್​ ಟಿಕೆಟ್ ಕೊಟ್ಟಿರಲಿಲ್ಲ, ರಾಜ್ಯಸಭೆಗೂ ಕಳಿಸಿರಲಿಲ್ಲ. ಇದೀಗ 6 ವರ್ಷಗಳ ಬಳಿಕ ಅವರು ಬಿಜೆಪಿ ಸೇರಿದ್ದಾರೆ. 2021ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವೇಳೆ ಖುಷ್ಬೂಗೆ ಬಿಜೆಪಿ ದೊಡ್ಡ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

-masthmgaa.com

Contact Us for Advertisement

Leave a Reply