ಲಖೀಂಪುರ್​​ಖೇರಿ ಹಿಂಸಾಚಾರ: ಇವತ್ತು ಏನೇನಾಯ್ತು..?

masthmagaa.com:

ಲಖೀಂಪುರ್​ಖೇರಿಯಲ್ಲಿ ನಡೆದ ಹಿಂಸಾಚಾರ ಖಂಡನೀಯ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ಧಾರೆ. ಅಮೆರಿಕ ಪ್ರವಾಸದಲ್ಲಿರೋ ನಿರ್ಮಲಾ ಸೀತಾರಾಮನ್ ಹಾರ್ವರ್ಡ್​ ಕೆನಡಿ ಸ್ಕೂಲ್​ನಲ್ಲಿ ಲಖೀಂಪುರ್​ಖೇರಿ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ, ಹಿರಿಯ ಸಚಿವರು ಸೇರಿದಂತೆ ಎಲ್ಲರೂ ಯಾಕೆ ಮೌನವಾಗಿದ್ದೀರಿ ಅಂತ ಪ್ರಶ್ನಿಸಲಾಯ್ತು. ಅದಕ್ಕೆ ಉತ್ತರರಿಸಿದ ನಿರ್ಮಲಾ ಸೀತಾರಾಮನ್​​, ಲಖೀಂಪುರ್​​ಖೇರಿ ಹಿಂಸಾಚಾರ ನಿಜಕ್ಕೂ ಖಂಡನೀಯ. ಆದ್ರೆ ಕೆಲ ರಾಜಕೀಯ ಪಕ್ಷಗಳು ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿವೆ.. ದೇಶದ ವಿವಿಧ ಭಾಗಗಳಲ್ಲಿ ಈ ರೀತಿಯ ಘಟನೆಗಳು ನಡೀತಾ ಇವೆ. ಆದ್ರೆ ಬಿಜೆಪಿ ಅಧಿಕಾರದಲ್ಲಿರೋ ರಾಜ್ಯದಲ್ಲಿ ಮಾತ್ರ ಈ ವಿಚಾರವನ್ನು ದೊಡ್ಡದು ಮಾಡಲಾಗ್ತಿದೆ ಅಂದ್ರು.

ಇನ್ನು ಲಖೀಂಪುರ್​ಖೇರಿ ಹಿಂಸಾಚಾರ ಸಂಬಂಧ ಆಶಿಶ್ ಮಿಶ್ರಾ ಸ್ನೇಹಿತ ಅಂಕಿತ್ ದಾಸ್​ ವಿಶೇಷ ತನಿಖಾ ದಳದ ಮುಂದೆ ವಿಚಾರಣೆಗೆ ಹಾಜರಾದ್ರು. ಅಂದಹಾಗೆ ಅಂಕಿತ್ ದಾಸ್ ಮಾಜಿ ಸಚಿವ ಅಖಿಲೇಶ್ ದಾಸ್​​ ಅವರ ಅಳಿಯ. ರೈತರಿಗೆ ಡಿಕ್ಕಿಯಾಗಿ ನಾಲ್ವರ ಸಾವಿಗೆ ಕಾರಣವಾದ ಕಾರು ಈತನಿಗೇ ಸೇರಿದ್ದು ಅಂತ ಕೂಡ ಹೇಳಲಾಗ್ತಿದೆ.

ಇವತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭೇಟಿಯಾಗಿ ಮಾತಾಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ರೈತರ ಸಾವಿಗೆ ಕಾರಣವಾಗಿದ್ದಾರೆ. ಹೀಗಾಗಿ ಅಜಯ್ ಮಿಶ್ರಾರನ್ನು ಸಚಿವ ಸಂಪುಟದಿಂದ ತೆಗೆದು ಹಾಕಬೇಕು ಅಂತ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ರಾಮನಾಥ್ ಕೋವಿಂದ್​, ಈ ಬಗ್ಗೆ ಸರ್ಕಾರದ ಜೊತೆ ಮಾತಾಡ್ತೀನಿ ಅಂತ ಹೇಳಿ ಕಳುಹಿಸಿದ್ದಾರೆ. ನಂತರ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ನಾವು ರಾಷ್ಟ್ರಪತಿಗಳ ಮುಂದೆ 2 ಬೇಡಿಕೆ ಇಟ್ಟಿದ್ದೀವಿ. ಒಂದು ಅಜಯ್ ಮಿಶ್ರಾರನ್ನು ಸಂಪುಟದಿಂದ ಹೊರಗೆ ಹಾಕೋದು. ಮತ್ತೊಂದು ಸಿಟ್ಟಿಂಗ್ ಜಡ್ಜ್​ ಮೂಲಕ ಪ್ರಕರಣದ ತನಿಖೆ ನಡೆಸಬೇಕು ಅಂತ ಹೇಳಿದ್ದಾರೆ.

ಈ ನಡುವೆ ಇವತ್ತು ಉತ್ತರ ಪ್ರದೇಶ ಕಾನೂನು ಸಚಿವ ಬ್ರಜೇಶ್ ಪಾಠಕ್​ ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡ ಬಿಜೆಪಿ ಕಾರ್ಯಕರ್ತ ಶುಭಮ್ ಮಿಶ್ರಾ ಮತ್ತು ಕಾರು ಚಾಲಕ ಹರಿ ಓಂ ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply