masthmagaa.com:

ಕೊರೋನಾದ ತವರು ಚೀನಾದಲ್ಲಿ ಅದರ ಹಾವಳಿ ಕಮ್ಮಿಯಾದ್ರೂ ಸಿಕ್ಕಿದ್ದೆಲ್ಲಾ ತಿನ್ನುವ ಚೀನಿಯರಿಗೆ ಈ ವೈರಾಣು ಆಗಾಗ ಚಮಕ್ ಕೊಡ್ತಾನೇ ಇರುತ್ತೆ. ಇದೀಗ ಚೀನಾದ ಬಂದರು ನಗರವಾದ ಕ್ವಿಂಗ್​‌ಡಾವೊದಲ್ಲಿ ವಿದೇಶದಿಂದ ಆಮದು ಮಾಡಿಕೊಂಡ ಸಮುದ್ರ ಮೀನಿನ ಹೊರಗಿನ ಪ್ಯಾಕೇಜಿಂಗ್​ನಲ್ಲಿ ಜೀವಂತ ಕೊರೋನಾ ವೈರಾಣು ಪತ್ತೆಯಾಗಿದೆ. ಅಷ್ಟೇ ಅಲ್ಲ ಇದೇ ಮೊದಲ ಬಾರಿಗೆ ಜೀವಂತ ಕೊರೋನಾ ವೈರಾಣುವನ್ನು ಪ್ಯಾಕೇಜಿಂಗ್​ನಿಂದ ಪ್ರತ್ಯೇಕಿಸಲಾಗಿದೆ ಅಂತ ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (CDC) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದ್ರೆ ಯಾವ ದೇಶದಿಂದ ಆಮದು ಮಾಡಿಕೊಂಡ ಮೀನಿನ ಪ್ಯಾಕೆಟ್​ನಲ್ಲಿ ವೈರಾಣು ಇತ್ತು ಅಂತ ಚೀನಾ ಸ್ಪಷ್ಟಪಡಿಸಿಲ್ಲ.

ಇತ್ತೀಚೆಗಷ್ಟೇ ಕ್ವಿಂಗ್​ಡಾವೊ ನಗರದಲ್ಲಿ ಕೊರೋನಾದ ಕ್ಲಸ್ಟರ್ ಕಾಣಿಸಿಕೊಂಡಿತ್ತು. ಬಳಿಕ ನಗರದ ಎಲ್ಲಾ 1.01 ಕೋಟಿ ನಿವಾಸಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರ ಜೊತೆಗೆ ತಿಂಗಳುಗಳ ಬಳಿಕ  ಚೀನಿಯರಿಗೆ ಸೋಂಕು ಎಲ್ಲಿಂದ ತಗುಲಿತು ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲೇ ವಿದೇಶದಿಂದ ತರಿಸಿದ ಮೀನಿನ ಪ್ಯಾಕೆಟ್​ನಲ್ಲಿ ವೈರಾಣು ಪತ್ತೆಯಾಗಿರೋದು ಮಹತ್ವ ಪಡೆದುಕೊಂಡಿದೆ.

ಈ ಹಿಂದೆ ಸೀಗಡಿಗಳ ಪ್ಯಾಕೆಟ್ ಮತ್ತು ಕಂಟೈನರ್​ಗಳ ಒಳಗೆ ಕೊರೋನಾ ವೈರಾಣು ಕಾಣಿಸಿಕೊಂಡ ಹಿನ್ನೆಲೆ ಸೀಗಡಿಯ ಆಮದನ್ನೇ ಚೀನಾ ಸ್ಥಗಿತಗೊಳಿಸಿತ್ತು. ಹೀಗೆ ಆಹಾರ ಪ್ಯಾಕೆಟ್​ ಮೇಲೆ ಜೀವಂತವಾಗಿರುವ ವೈರಾಣುವಿನ ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ ಅಂತ ಚೀನಾ ಹೇಳಿದೆ. ಆದ್ರೆ ವಿಶ್ವ ಆರೋಗ್ಯ ಸಂಸ್ಥೆ ಇಲ್ಲಿವರೆಗೂ ಆಹಾರದ ಪ್ಯಾಕೇಜಿಂಗ್​ನಿಂದ ಕೊರೋನಾ ಸೋಂಕು ಹರಡುವುದಿಲ್ಲ ಅಂತಾನೇ ಹೇಳಿದೆ.

-masthmagaa.com

Contact Us for Advertisement

Leave a Reply