ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನಕ್ಕೆ ತೀವ್ರಗೊಂಡ ಹೋರಾಟ

masthmagaa.com:

ಜಮ್ಮು-ಕಾಶ್ಮೀರಕ್ಕೆ ಈ ಹಿಂದೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಮತ್ತೆ ಪಡೆಯಲು ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್’ ಭಾರಿ ಪ್ರಯತ್ನ ನಡೆಸುತ್ತಿದೆ. ಇವತ್ತು ಜಮ್ಮು-ಕಾಶ್ಮೀರ ಮಾಜಿ ಸಿಎಂ ಮತ್ತು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಮನೆಯಲ್ಲಿ ಮಿತ್ರ ಪಕ್ಷಗಳ ಸಭೆ ನಡೆಯಿತು. ಸಭೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್​ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಉಪಾಧ್ಯಕ್ಷ ಓಮರ್ ಅಬ್ದುಲ್ಲಾ, ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಸಜ್ಜದ್ ಲೋನ್ ಮುಂತಾದವರು ಭಾಗವಹಿಸಿದ್ದರು.

ಸಭೆ ಬಳಿಕ ಮಾತನಾಡಿದ ಫಾರೂಕ್ ಅಬ್ದುಲ್ಲಾ, ‘ನಮ್ಮದು ದೇಶ ವಿರೋಧಿ ಮೈತ್ರಿ ಅಲ್ಲ. ಜಮ್ಮು-ಕಾಶ್ಮೀರ ಮತ್ತು ಲಡಾಖ್​ ಜನತೆಗಿದ್ದ ಹಕ್ಕುಗಳನ್ನು ಪುನಃ ಸ್ಥಾಪಿಸುವುದು ನಮ್ಮ ಉದ್ದೇಶ. ಧರ್ಮದ ಹೆಸರಿನಲ್ಲಿ ನಮ್ಮನ್ನು ಒಡೆಯುವ ಪ್ರಯತ್ನ ವಿಫಲವಾಗಲಿದೆ. ಇದು ಧಾರ್ಮಿಕ ಹೋರಾಟವಲ್ಲ’ ಅಂತ ಹೇಳಿದ್ದಾರೆ. ಸಜ್ಜದ್ ಲೋನ್ ಮಾತನಾಡಿ, ‘ಫಾರೂಖ್ ಅಬ್ದುಲ್ಲಾ ಈ ಪೀಪಲ್ಸ್ ಅಲಯನ್ಸ್​ನ ಅಧ್ಯಕ್ಷರಾದ್ರೆ, ಮೆಹಬೂಬಾ ಮುಫ್ತಿ ಉಪಾಧ್ಯಕ್ಷರಾಗಿರುತ್ತಾರೆ. ಒಂದು ತಿಂಗಳೊಳಗೆ ಪುಸ್ತಕೊಂದನ್ನು ಬಿಡುಗಡೆ ಮಾಡುತ್ತೇವೆ. ಅದರಲ್ಲಿ ಕೆಲವರು ಪ್ರಚಾರ ಮಾಡುತ್ತಿರುವ ಸುಳ್ಳಿನ ಹಿಂದಿನ ರಹಸ್ಯವನ್ನ ಬಹಿರಂಗಪಡಿಸುತ್ತೇವೆ’ ಅಂತ ಹೇಳಿದ್ಧಾರೆ.

ಏನಿದು ಗುಪ್ಕರ್ ಡಿಕ್ಲರೇಷನ್..?

ಇಲ್ಲಿ ಗುಪ್ಕರ್ ಡಿಕ್ಲರೇಷನ್ ಅಥವಾ ಗುಪ್ಕರ್ ಘೋಷಣೆ ಅಂದ್ರೆ ಏನು ಅಂತ ಹೇಳಬೇಕು. ಅಂದ್ಹಾಗೆ ಫಾರೂಖ್ ಅಬ್ದುಲ್ಲಾ ಅವರ ನಿವಾಸ ಇರೋದು ಶ್ರೀನಗರದ ಗುಪ್ಕರ್​ ರಸ್ತೆಯಲ್ಲಿ. ಇಲ್ಲಿ ಕಳೆದ ವರ್ಷ ಆಗಸ್ಟ್ 4ರಂದು, ಅಂದ್ರೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಒಂದು ದಿನ ಹಿಂದೆ ಬಿಜೆಪಿ ಬಿಟ್ಟು ಜಮ್ಮು-ಕಾಶ್ಮೀರದ ಎಲ್ಲಾ ಪಕ್ಷಗಳ ನಾಯಕರು ಸಭೆ ಸೇರಿದ್ರು. ಈ ಸಭೆಯಲ್ಲಿ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಯ್ತು. ಇದಕ್ಕೆ ಎಲ್ಲಾ ನಾಯಕರು ಸಹಿ ಹಾಕಿದ್ರು. ಫಾರೂಖ್ ಅಬ್ದುಲ್ಲಾ ಅವರ ಗುಪ್ಕರ್ ನಿವಾಸದಲ್ಲಿ ಈ ಘೋಷಣೆ ಮಾಡಿದ್ದರಿಂದ ಇದಕ್ಕೆ ಗುಪ್ಕರ್ ಡಿಕ್ಲರೇಷನ್ ಅನ್ನೋ ಹೆಸರು ಬಂತು. ಈ ಸಭೆಯಲ್ಲಿ ಭಾಗವಹಿಸಿದ ಪಕ್ಷಗಳು ಮಾಡಿಕೊಂಡ ಮೈತ್ರಿಕೂಟವನ್ನು ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್’ ಅಂತ ಕರೆಯಲಾಯ್ತು.

-masthmagaa.com

Contact Us for Advertisement

Leave a Reply