ಭಾರತದ ಯುವಕ, ಪಾಕ್‌ ಯುವತಿಯ ಲವ್‌ ಸ್ಟೋರಿ! ಜೋಡಿ ಪೊಲೀಸರ ವಶವಾಗಿದ್ಹೇಗೆ?

masthmagaa.com:

ಉತ್ತರ ಪ್ರದೇಶ ಮೂಲದ ಯುವಕ ಹಾಗೂ ಪಾಕಿಸ್ತಾನದ ಯುವತಿ ಆನ್‌ಲೈನ್ ಲುಡೋ ಗೇಮ್‌ ಆಪ್‌ ಮೂಲಕ ಪರಿಚಯವಾಗಿ, ನಂತರ ಮದುವೆಯಾಗಿ, ಇದೀಗ ಪೋಲಿಸರ ಬಲೆಗೆ ಬಿದ್ದ ಪ್ರಕರಣ ಬೆಳಕಿಗೆ ಬಂದಿದೆ. 26 ವರ್ಷದ ಮುಲಾಯಂ ಸಿಂಗ್‌ ಯಾದವ್‌ ಹಾಗೂ ಪಾಕ್‌ ಯುವತಿ ಇಕ್ರಾ ಜೀವಾನಿ ಬಂಧಿತ ಆರೋಪಿಗಳು. ಆಪ್‌ ಮೂಲಕವೇ ಪರಿಚಯವಾದ ಈಕೆಯನ್ನ ಈ ಯುವಕ ಅಕ್ರಮವಾಗಿ ಭಾರತಕ್ಕೆ ಕರೆಸಿಕೊಂಡು ಮದುವೆಯಾಗಿದ್ದಾನೆ. ಆಕೆಯನ್ನ ಭಾರತಕ್ಕೆ ಕರೆತರೋಕೆ ಯುವಕ ಹರಸಾಹಸ ಪಟ್ಟಿದ್ದಾನೆ. ಪಾಕಿಸ್ತಾನದಿಂದ ನೇರವಾಗಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಅಂತ, ನೇಪಾಳಕ್ಕೆ ಕರೆಸಿಕೊಂಡಿದ್ದಾನೆ. ನೇಪಾಳದಲ್ಲೇ ಇಬ್ಬರು ಮದುವೆಯಾಗಿದ್ದು, ಬಳಿಕ ಬಿಹಾರದ ಗಡಿ ಪ್ರವೇಶಿಸಿ ಪಾಟ್ನಾಗೆ ಬಂದಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನೆಲೆಸಿದ್ರು. ಬೆಂಗಳೂರಿಗೆ ಕರೆತಂದ ಪ್ರೇಯಸಿಯನ್ನ ಭಾರತದ ಪ್ರಜೆ ಅಂತ ಸಾಬೀತು ಪಡಿಸೋಕೆ, ಆಕೆಯ ಹೆಸರನ್ನ ರಾವಾ ಯಾದವ್‌ ಅಂತ ಬದಲಿಸಿದ್ದಾನೆ. ಅದೇ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ ಕೊಡಿಸಿದ್ದಾನೆ. ಅಂದ್ಹಾಗೆ ಕಳೆದ ಕೆಲ ತಿಂಗಳಿನಿಂದ ಬೆಂಗಳೂರಿನಲ್ಲಿದ್ದ ಯುವತಿ, ಪಾಕ್‌ನಲ್ಲಿರೊ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಈ ಮಾಹಿತಿಯನ್ನ ಸಂಗ್ರಹಿಸಿದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕೂಡಲೇ ರಾಜ್ಯ ಗುಪ್ತಚರ ಮತ್ತು ಆಂತರಿಕಾ ಭದ್ರತಾ ದಳಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿ ಹಾಗೂ ಮನೆ ಮಾಲೀಕನನ್ನ ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply