masthmagaa.com:

2028ರ ವೇಳೆಗೆ.. ಅಂದ್ರೆ ಇನ್ನು 8 ವರ್ಷದೊಳಗೆ ಚಂದ್ರನ ಮೇಲೆ ಬೇಸ್ ಸ್ಟೇಶನ್ ನಿರ್ಮಾಣ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA (National Aeronautics and Space Administration) ಪ್ಲಾನ್ ಮಾಡಿದೆ. ಯಾವ ರೀತಿ ಅಂದ್ರೆ ಚಂದ್ರನ ಮೇಲೆ ಮನುಷ್ಯ ಹೋಗಿ ಸುದೀರ್ಘ ಅವಧಿವರೆಗೆ ಠಿಕಾಣಿ ಹೂಡಬಹುದಾದಷ್ಟು ವ್ಯವಸ್ಥಿತವಾದ ಬೇಸ್ ಸ್ಟೇಷನ್.

ಇದಕ್ಕಾಗಿ ನಾಸಾ ತಾಂತ್ರಿಕ ಸೇವೆಗಳ ಪೂರೈಕೆಗಾಗಿ ಒಂದು ಡಝನ್​ಗೂ ಅಧಿಕ ಖಾಸಗಿ ಕಂಪನಿಗಳಿಗೆ 370 ಮಿಲಿಯನ್ ಡಾಲರ್​ಗೂ ಅಧಿಕ ಮೊತ್ತದ ಗುತ್ತಿಗೆ ನೀಡಿದೆ. ಇದರಲ್ಲಿ ಪವರ್ ಜನರೇಶನ್, ರೋಬಾಟಿಕ್ಸ್, ಉತ್ತಮ ಗುಣಮಟ್ಟದ ಲ್ಯಾಂಡಿಂಗ್ ಪ್ಯಾಡ್​ಗಳು ಹಾಗೂ 4ಜಿ ನೆಟ್​ವರ್ಕ್ ಕವರೇಜ್​ಗಳೂ ಸಹ ಸೇರಿವೆ. ಇದರಲ್ಲಿ 4ಜಿ ನೆಟ್​ವರ್ಕ್ ವಿಚಾರಕ್ಕೆ ಬಂದ್ರೆ, ನಾಸಾ ಒಂದು ನೆಟ್​ವರ್ಕ್ ಸೆರ್ವಿಸ್ ಪ್ರೊವೈಡರ್ ಹಾಗೂ ಮತ್ತೊಂದು ಹಾರ್ಡ್​ವೇರ್ ಪೂರೈಕೆ ಕಂಪನಿಗಾಗಿ ಹುಡುಕಾಡ್ತಿತ್ತು. ಈಗ ಫೈನಲಿ ಈ ಕೆಲಸಕ್ಕೆ ವೊಡಾಫೋನ್ ಹಾಗೂ ನೋಕಿಯಾಗೆ ಟೆಂಡರ್​ ಸಿಕ್ಕಿದೆ. ವೊಡಾಫೋನ್ ಕಂಪನಿ ನೆಟ್ವರ್ಕ್ ಕೆಲಸ ವಹಿಸಿಕೊಂಡರೆ, ನೋಕಿಯಾ ಅದಕ್ಕೆ ಬೇಕಾದ ಹಾರ್ಡ್​ವೇರ್ ಪೂರೈಕೆ ಕೆಲಸ ವಹಿಸಿಕೊಂಡಿದೆ. ನೋಕಿಯಾ ಅಂದ್ಕೂಡ್ಲೆ ನಿಮಗೆ 1100 ಥರದ ಮೊಬೈಲ್​ಗಳು ನೆನಪಾಗ್ಬೋದು. ಈ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ ಬ್ಯುಸಿನೆಸ್ ಜೊತೆಗೆ ನೋಕಿಯಾ ಈ ಥರದ ದೊಡ್ಡ ದೊಡ್ಡ ತಾಂತ್ರಿಕ ಉಪಕರಣಗಳನ್ನ ಕೂಡ ತಯಾರು ಮಾಡುತ್ತೆ.

ಚಂದ್ರನ ಮೇಲೆ 4ಜಿ ನೆಟ್​ವರ್ಕ್​ ಯಾಕೆ..?

ಆಲ್ಮೋಸ್ಟ್ 50 ವರ್ಷಗಳ ಬಳಿಕ ಚಂದ್ರನ ಬಗ್ಗೆ ಮತ್ತೆ ಜಗತ್ತಿನ ಖಗೋಳ ಶಾಸ್ತ್ರಜ್ಞರ ಕುತೂಹಲ ಗರಿಗೆದರಿದೆ. 2024ರ ಒಳಗೆ ಮತ್ತೊಂದು ಬಾರಿ ಚಂದ್ರನ ಮೇಲೆ ತನ್ನ ಗಗನ ಯಾತ್ರಿಗಳನ್ನ ಇಳಿಸೋದಾಗಿ ಅಮೆರಿಕದ ನಾಸಾ ಹೇಳಿಕೊಂಡಿದೆ. ಈ ಸಲ ಲ್ಯಾಂಡಿಂಗ್ ಚಂದ್ರನ ದಕ್ಷಿಣ ದ್ರುವದಲ್ಲಿ ನಡೆಯುತ್ತೆ ಅಂತ ನಾಸಾ ಹೇಳಿರೋದು ಮತ್ತೊಂದು ವಿಶೇಷ. ಸೋ ಚಂದ್ರನ ಮೇಲೆ 4ಜಿ ನೆಟ್​ವರ್ಕ್ ಹಾಕೋದ್ರಿಂದ ಅಲ್ಲಿ ಕಾಲಿಡೋ ಗಗನ ಯಾತ್ರಿಗಳ ಮಧ್ಯೆ ಮಾತುಕತೆಗೆ ಸಹಾಯ ಆಗುತ್ತೆ. ಚಂದ್ರನ ನೆಲದ ಮೇಲೆ ಓಡಾಡೋ ಗಗನ ಯಾತ್ರಿಗಳು, ರೋವರ್ ವಾಹನ, ಬೇಸ್ ಸ್ಟೇಷನ್​ ಸಿಬ್ಬಂದಿ ನಡುವೆ ಕಮ್ಯುನಿಕೇಷನ್ ಅಂದ್ರೆ ಮಾತುಕತೆಗೆ ಈ 4ಜಿ ನೆಟ್​ವ​ರ್ಕ್​ ಬಳಕೆ ಆಗುತ್ತೆ. ಹಾಗಂತ ಚಂದ್ರನಿಂದ ನೇರವಾಗಿ ಗಗನ ಯಾತ್ರಿಗಳು ವಿಡಿಯೋ ಕಾಲ್ ಮಾಡಬಹುದು ಅಂತಲ್ಲ… ಅದು ಸಾಧ್ಯ ಇಲ್ಲ. ಈ ನೆಟ್​ವರ್ಕ್​ ಏನಿದ್ರೂ ಚಂದ್ರನ ಮೇಲೆ ಇರೋ ಗಗನ ಯಾತ್ರಿಗಳಿಗೆ ಅಲ್ಲೇ ಮಾತಾಡೋಕೆ ಮಾತ್ರ.

ಈ ಮೊದಲೂ ಸಹ ಚಂದ್ರನ ಮೇಲೆ ಗಗನ ಯಾತ್ರಿಗಳು ಕಾಲಿಟ್ಟಾಗ ಮಾತಾಡ್ತಿದ್ರು. ಆದ್ರೆ ಆಗ ರೇಡಿಯೋ ಫ್ರೀಕ್ವೆನ್ಸಿ ಬಳಕೆ ಮಾಡಿ ಮಾತಾಡ್ತಿದ್ರು. ಇದ್ರಲ್ಲಿ ಧ್ವನಿ ಸರಿಯಾಗಿ ಕೇಳಿಸ್ತಿರಲಿಲ್ಲ. ಕಟ್ ಕಟ್ ಆಗಿ ಬರ್ತಾ ಇತ್ತು. ಹಾಗೂ ಹೆಚ್ಚು ಪವರ್ ಬೇಕಾಗ್ತಿತ್ತು. ಇದೇ ಕಾರಣಕ್ಕೆ ಈ ವ್ಯವಸ್ಥೆಯನ್ನೇ ಬದಲಾಯಿಸಲು ನಾಸಾ ಪ್ಲಾನ್ ಮಾಡ್ತಿದೆ.

ಸ್ನೇಹಿತರೆ, 1969 ಜುಲೈ 16ನೇ ತಾರೀಖು ನಾಸಾದ ಅಪೋಲೋ 11ರ ಗಗನಯಾತ್ರಿಗಳು ಮೊದಲ ಬಾರಿ ಚಂದ್ರನ ಮೇಲೆ ಕಾಲಿಟ್ಟಿದ್ದರು. ಆಗ ಕಮಾಂಡರ್ ನೀಲ್ ಆರ್ಮ್​ಸ್ಟ್ರಾಂಗ್, ‘ನನಗೆ ಇದೊಂದು ಸಣ್ಣ ಹೆಜ್ಜೆ.. ಆದ್ರೆ ಇಡೀ ಮನುಕುಲಕ್ಕೆ ಇದೊಂದು ಮಹಾಜಿಗಿತ’ ಅಂತ ಹೇಳಿದ್ದರು. ಸೋ ಈಗ 50 ವರ್ಷಗಳ ಬಳಿಕ ಅಮೆರಿಕ ಮೂನ್​ ಮೇಲೆ ಮತ್ತೊಂದು ಮಹಾಸಾಹಸಕ್ಕೆ ಕೈಹಾಕಿದೆ. 2024ರಲ್ಲಿ ಲ್ಯಾಂಡಿಂಗ್… 2028ರವೇಳೆ ಬೇಸ್ ಸ್ಟೇಷನ್ ಹಾಗೂ ಅಲ್ಲೇ ದೀರ್ಘ ವಾಸ್ತವ್ಯದ ಪ್ಲಾನ್… ಇದು ಸಾಧ್ಯ ಆದ್ರೆ ಮುಂದೊಂದಿನ ಸ್ಪೇಸ್ ಟೂರಿಸಮ್, ಅಂದ್ರೆ ಬೇಸಿಗೆ ರಜೆಗೆ ಎಲಾನ್​ ಮಸ್ಕ್​ನ ರಾಕೆಟ್ ಏರಿ ನಾನು ಚಂದ ಮಾಮನ ಹತ್ತಿರ ಹೋಗಿ ಬರ್ತೇನೆ ಅಂತ ಹೇಳೋ ದಿನಗಳು ಬಂದ್ರೂ ಅಚ್ಚರಿಯಿಲ್ಲ.

-masthmagaa.com

Contact Us for Advertisement

Leave a Reply