ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಪದಕ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್‌ ಚೋಪ್ರಾ!

masthmagaa.com:

ಟೋಕಿಯೋ ಒಲಂಪಿಕ್ಸ್‌ನ ಚಿನ್ನದ ಪದಕ ವಿಜೇತ, ಭಾರತದ ʻಗೋಲ್ಡನ್‌ ಬಾಯ್‌ʼ, ಜಾವೆಲಿನ್‌ ಪಟು ನೀರಜ್‌ ಚೋಪ್ರಾ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದ ಯುಜಿನ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ನೀರಜ್‌ 88.13 ಮೀ ದೂರ ಜಾವೆಲಿನ್‌ ಎಸೆಯುವ ಮೂಲಕ ರಜತ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ನಾಲ್ಕನೇ ಎಸೆತದಲ್ಲಿ ಅವ್ರು ಈ ಸಾಧನೆ ಮಾಡಿದ್ದಾರೆ. ಈ ಮೂಲಕ 19 ವರ್ಷಗಳ ನಂತ್ರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪದಕ ಸಿಕ್ಕಿದೆ. ಇನ್‌ಪ್ಯಾಕ್ಟ್‌ ನೀರಜ್‌ ಚೋಪ್ರಾ ಈ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಆಗಿದ್ದಾರೆ. ಈ ಹಿಂದೆ 2003ರಲ್ಲಿ ಅಂಜು ಬಾಬಿ ಜಿಯಾರ್ಜ್‌ ಲಾಂಗ್‌ಜಂಪ್‌ನಲ್ಲಿ ಕಂಚು ಗೆದ್ದಿದ್ರು. ನೀರಜ್‌ಗೆ ಪ್ರಬಲ ಸ್ಪರ್ಧೆ ನೀಡಿದ ವಿಂಡೀಸ್‌ ದ್ವೀಪ ರಾಷ್ಟ್ರ ಗ್ರೆನೆಡಾದ ಆ್ಯಂಡರ್ಸನ್ ಪೀಟರ್‌ ಮೂರು ಬಾರಿ 90 ಮೀಟರ್‌ಗಿಂತ ಹೆಚ್ಚು ದೂರ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ. ರಜತ ಪದಕ ಪಡೆದ ನೀರಜ್‌ ಚೋಪ್ರಾ ಅವ್ರಿಗೆ ದೇಶಾದ್ಯಂತ ಅಭಿನಂದನೆಗಳು ವ್ಯಕ್ತವಾಗಿವೆ. ಪ್ರಧಾನಿ ಮೋದಿ ಕೂಡ ಟ್ವೀಟ್‌ ಮಾಡಿ ಶುಭಕೋರಿದ್ದಾರೆ. ನೀರಜ್‌ ಬೆಳ್ಳಿ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಇತ್ತ ಅವರ ಮನೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಹರಿಯಾಣದ ಪಾನಿಪತ್​ನಲ್ಲಿರುವ ಚೋಪ್ರಾ ಮನೆಯಲ್ಲಿ ನೀರಜ್ ತಾಯಿ ನೃತ್ಯ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಈ ವೇಳೆ ಮಾತನಾಡಿದ ಅವರು “ಇದರಿಂದ ತುಂಬಾ ಸಂತಸವಾಗಿದೆ. ನೀರಜ್ ಕಷ್ಟ ಪಟ್ಟು ಶ್ರಮ ವಹಿಸಿದಕ್ಕೆ ಪ್ರತಿಫಲ ಸಿಕ್ಕಿದೆ, ಅಂತ ಹೇಳಿದ್ದಾರೆ.ಇನ್ನು ಅವರ ಅಜ್ಜ ಮಾತನಾಡಿ ನಾವು ಚಿನ್ನದ ನಿರೀಕ್ಷೆಯಲ್ಲಿದ್ದೆವು. ಆದರೆ, ಬೆಳ್ಳಿ ಗೆದ್ದಿದ್ದಕ್ಕೆ ಖುಷಿ ಇದೆ ಅಂತ ಹರ್ಷವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply