ನಾವೇನು ಮದ್ವೆ ಮಾಡ್ಕೊಂಡಿಲ್ಲ: ಟೀಕಿಸಿದವರಿಗೆ ನಿವೇದಿತಾ ಗುದ್ದು

ಯುವದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ್ದ ಚಂದನ್ ಶೆಟ್ಟಿ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಟೀಕಾಕಾರರಿಗೆ ತಿರುಗೇಟು ಕೊಟ್ಟು ನಿವೇದಿತಾ ಗೌಡ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಅವನು ಮದುವೆಯಾಗುತ್ತೀಯಾ ಎಂದು ಕೇಳಿದ. ನಾನು ಪ್ರೀತಿಸುತ್ತಿದ್ದೇನೆ. ಐ ಲವ್ ಯೂ ಸೋ ಮಚ್. ಇದು ನನ್ನ ಜೀವನದ ತುಂಬಾ ಸುಂದರವಾದ ಮತ್ತು ಕನಸುಗಳಿಂದ ತುಂಬಿದ ಪ್ರಪೋಸಲ್. ನಾನು ಕೊನೆಗೂ ನನ್ನ ರಾಜಕುಮಾರನನ್ನು ಪಡೆದುಕೊಂಡೆ ಎಂದು ಹೇಳಿದೆ ಅಂತ ಬರೆದುಕೊಂಡಿದ್ದಾರೆ.

ಜೊತೆಗೆ ನಮ್ಮ ಮೇಲೆ ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು. ಆದ್ರೆ ಕೆಲವರು ಬೇಸರಗೊಂಡಿದ್ದಾರೆ. ಆದ್ರೆ ಯಾವ ಕಾರಣಕ್ಕೆ ಬೇಸರಗೊಂಡಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಯಾಕಂದ್ರೆ ನಾವು ನಿಶ್ಚಿತಾರ್ಥ, ಮದುವೆ ಮಾಡಿಕೊಂಡಿಲ್ಲ. ಅವನು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ನಾನದನ್ನು ಒಪ್ಪಿಕೊಂಡಿದ್ದೇನೆ ಅಷ್ಟೆ. ಸ್ವಚ್ಛವಾದ ಮನಸ್ಥಿತಿ ಹೊಂದಿ ಪ್ರೀತಿ ಮತ್ತು ಸಂತೋಷವನ್ನು ಹರಡಿ ಎಂದು ಮನವಿ ಬರೆದುಕೊಂಡಿದ್ದಾರೆ.

ನಾಡಹಬ್ಬದ ವೇದಿಕೆಯಲ್ಲಿ ಖಾಸಗಿ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಪ್ರೀತಿಯ ವಿಚಾರಕ್ಕೆ ದಸರಾ ವೇದಿಕೆ ಬಳಕೆ ಅಕ್ಷಮ್ಯ ಅಪರಾಧ ಅಂತ ಸಂಪ್ರದಾಯವಾದಿಗಳು ಕೆಂಡಕಾರಿದ್ದರು. ಇದ್ರ ಬೆನ್ನಲ್ಲೇ ಚಂದನ್ ಶೆಟ್ಟಿ ಕೂಡ ಇದು ಎಂಗೇಜ್‍ಮೆಂಟ್ ಅಲ್ಲ. ಜಸ್ಟ್ ಪ್ರಪೋಸ್ ಅಷ್ಟೆ ಅಂತ ಸ್ಪಷ್ಟಪಡಿಸಿದ್ದರು.

Contact Us for Advertisement

Leave a Reply