masthmagaa.com:

ನಮ್ಮ ದೇಶಕ್ಕೆ ಕೊರೋನಾ ಸೋಂಕು ಬಂದೇ ಇಲ್ಲ ಅಂತಿರೋ ಉತ್ತರ ಕೊರಿಯಾಗೆ ಈಗ ಮಹಾಮಾರಿಯ ಭೀತಿ ಶುರುವಾಗಿದೆ. ಚೀನಾದಿಂದ ಬೀಸುತ್ತಿರುವ ನಿಗೂಢ ‘ಹಳದಿ ಧೂಳು’ (Yellow Dust) ಉತ್ತರ ಕೊರಿಯಾಗೆ ಕೊರೋನಾ ಹರಡಿಸಬಹುದು ಅಂತ ಅಲ್ಲಿನ ಸರ್ಕಾರ ಎಚ್ಚರಿಸಿದೆ. ಜೊತೆಗೆ ಜನರು ಮನೆಯಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ಇದರ ಪರಿಣಾಮ ರಾಜಧಾನಿ ಪ್ಯಾಂಗ್ಯಾಂಗ್​ ನಗರದಲ್ಲಿ ಕಳೆದೆರಡು ದಿನಗಳಿಂದ ಜನರೇ ಕಾಣಿಸುತ್ತಿಲ್ಲ ಅಂತ ವರದಿಯಾಗಿದೆ.

ಅಂದ್ಹಾಗೆ ಉತ್ತರ ಕೊರಿಯಾ ನಿಯಂತ್ರಣದಲ್ಲಿರುವ KCTVಯಲ್ಲಿ ಬುಧವಾರ ಹವಾಮಾನ ವರದಿ ನೀಡುವಾಗ ಚೀನಾದಿಂದ ಬರುತ್ತಿರುವ ಹಳದಿ ಧೂಳಿನ ಬಗ್ಗೆ ಎಚ್ಚರಿಸಲಾಗಿತ್ತು. ಜೊತೆಗೆ ದೇಶಾದ್ಯಂತ ಕಟ್ಟಡ ಕಾಮಗಾರಿ ಸೇರಿದಂತೆ ಹೊರಾಂಗಣದ ಎಲ್ಲಾ ನಿರ್ಮಾಣ ಕೆಲಸವನ್ನು ನಿಷೇಧಿಸಲಾಯ್ತು. ಜನರು ತಮ್ಮ ತಮ್ಮ ಮನೆಯಲ್ಲಿ ಕಿಟಕಿ, ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿಕೊಳ್ಳುವಂತೆ ಸೂಚಿಸಲಾಯ್ತು. ನಂತರ ಗುರುವಾರ ಬೆಳಗ್ಗೆ ಅಲ್ಲಿನ ನ್ಯೂಸ್​ ಪೇಪರ್​ವೊಂದರಲ್ಲಿ, ಹಳದಿ ಧೂಳಿನ ಮೂಲಕ ‘ಮಾರಕ ವೈರಸ್ ದೇಶವನ್ನು ಪ್ರವೇಶಿಸುತ್ತಿದೆ’ ಅಂತ ಹೇಳಲಾಗಿತ್ತು. ಗಾಳಿಯಲ್ಲೂ ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಹಳದಿ ಧೂಳಿನ ಮೂಲಕವೂ ವೈರಾಣು ದೇಶವನ್ನು ಪ್ರವೇಶಿಸಬಹುದು. ಆರೋಗ್ಯ ಸಿಬ್ಬಂದಿ ಇದರ ಅಪಾಯದ ಬಗ್ಗೆ ಗಮನಹರಿಸಬೇಕು ಅಂತ ಹೇಳಿತ್ತು. ಉತ್ತರ ಕೊರಿಯಾದಲ್ಲಿರುವ ರಷ್ಯಾದ ರಾಯಭಾರ ಕಚೇರಿ ಕೂಡ ತನ್ನ ಸಿಬ್ಬಂದಿಗೆ ಹಳದಿ ಧೂಳು ಬರುವ ಸಂದರ್ಭದಲ್ಲಿ ಮನೆಯಲ್ಲೇ ಇರುವಂತೆ ಸೂಚಿಸಿತ್ತು.

ಏನಿದು ಹಳದಿ ಧೂಳು..?

ಹಳದಿ ಧೂಳು ಅನ್ನೋದು ಚೀನಾ ಮತ್ತು ಮಂಗೋಲಿಯಾದ ಮರುಭೂಮಿಗಳ ಮರಳಾಗಿದ್ದು, ಪ್ರತಿವರ್ಷ ಬೀಸುವ ಮಾರುತಗಳು ಈ ಮರಳನ್ನ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗೆ ತಂದು ಹಾಕುತ್ತದೆ. ಇಂತಹ ಮರಳಿನ ಜೊತೆಗೆ ಕೈಗಾರಿಕಾ ಮಾಲಿನ್ಯಕಾರಕಗಳಂತಹ ವಿಷಕಾರಿ ಪದಾರ್ಥಗಳು ಸೇರಿ ಹಳದಿ ಧೂಳಾಗಿ ಮಾರ್ಪಾಡಾಗುತ್ತದೆ. ಇದು ಉಸಿರಾಟದ ಕಾಯಿಲೆಗಳಿಗೂ ಕಾರಣವಾಗುತ್ತದೆ. ಇಂತಹ ಧೂಳು ವಾತಾವರಣದಲ್ಲಿ ಗರಿಷ್ಟ ಮಟ್ಟವನ್ನು ತಲುಪುತ್ತಿದ್ದಂತೇ ಜನರು ಮನೆಯಲ್ಲೇ ಇರುವಂತೆ, ಶಾಲೆಗಳನ್ನು ಬಂದ್ ಮಾಡುವಂತೆ, ಹೊರಾಂಗಣ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಅಧಿಕಾರಿಗಳು ಆದೇಶಿಸುತ್ತಾರೆ. ಈಗಲೂ ಹಾಗೇ ಮಾಡಲಾಗಿದೆ. ಆದ್ರೆ ಈ ಬಾರಿ ಹಳದಿ ಧೂಳಿನ ಜೊತೆಗೆ ಕೊರೋನಾ ಭಯ ಕೂಡ ಕಿಮ್ ಜಾಂಗ್ ಉನ್​ಗೆ ಕಾಡುತ್ತಿದೆ.

-masthmagaa.com

Contact Us for Advertisement

Leave a Reply